ಸೌತ್ ಆಫ್ರಿಕಾಗೆ ಬ್ಯಾಕ್ ಟು ಬ್ಯಾಕ್ ಸೋಲುಣಿಸಿದ ವಿಂಡೀಸ್
West Indies vs South Africa: ಸೌತ್ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯ 2ನೇ ಮ್ಯಾಚ್ನಲ್ಲೂ ವೆಸ್ಟ್ ಇಂಡೀಸ್ ತಂಡ ಜಯಭೇರಿ ಬಾರಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ 40 ರನ್ಗಳಿಂದ ಜಯ ಸಾಧಿಸಿದ್ದ ವಿಂಡೀಸ್ ಇದೀಗ 2ನೇ ಮ್ಯಾಚ್ನಲ್ಲಿ 30 ರನ್ಗಳ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ವಶಪಡಿಸಿಕೊಂಡಿದೆ.
ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲೂ ವೆಸ್ಟ್ ಇಂಡೀಸ್ ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯನ್ನು ವಿಂಡೀಸ್ ಪಡೆ 2-0 ಅಂತರದಿಂದ ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡ ಬೌಲಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಅಲಿಕ್ ಅಥನಾಝ್ (28) ಹಾಗೂ ಶಾಯ್ ಹೋಪ್ (41) ಉತ್ತಮ ಆರಂಭ ಒದಗಿಸಿದ್ದರು. ಆದರೆ ಆ ಬಳಿಕ ಬಂದ ನಿಕೋಲಸ್ ಪೂರನ್ 14 ರನ್ಗಳಿಸಿ ಔಟಾದರೆ, ರೋಸ್ಟನ್ ಚೇಸ್ ಕೇವಲ 7 ರನ್ಗಳಿಸಲಷ್ಟೇ ಶಕ್ತರಾದರು.
ಇನ್ನು ನಾಯಕ ರೋವ್‌ಮನ್ ಪೊವೆಲ್ 35 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ವೆಸ್ಟ್ ಇಂಡೀಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 179 ರನ್ ಕಲೆಹಾಕಿತು.
180 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ರಿಯಾನ್ ರಿಕೆಲ್ಟನ್ (20) ಹಾಗೂ ರೀಝ ಹೆಂಡ್ರಿಕ್ಸ್ (44) ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ವಿಕೆಟ್ಗೆ 63 ರನ್ ಪೇರಿಸಿದ ಈ ಜೋಡಿಯು ಬೃಹತ್ ಮೊತ್ತದ ಚೇಸಿಂಗ್ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ ಆರಂಭಿಕರಿಬ್ಬರ ನಿರ್ಗಮನದ ಬಳಿಕ ಸೌತ್ ಆಫ್ರಿಕಾ ತಂಡವು ದಿಢೀರ್ ಕುಸಿತಕ್ಕೊಳಗಾಯಿತು.
ನಾಯಕ ಐಡೆನ್ ಮಾರ್ಕ್ರಾಮ್ (19), ಡೊನಾವನ್ ಫೆರೇರಾ (4), ರಾಸ್ಸೀ ವ್ಯಾನ್ ಡರ್ ಡಸ್ಸೆನ್ (17) ಬೇಗನೆ ವಿಕೆಟ್ ಒಪ್ಪಿಸಿದರು. ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಟ್ರಿಸ್ಟನ್ ಸ್ಟಬ್ಸ್ 28 ರನ್ ಬಾರಿಸಿದರು.
ಆದರೆ ಅಂತಿಮ ಹಂತದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ವೆಸ್ಟ್ ಇಂಡೀಸ್ ತಂಡವು ಸೌತ್ ಆಫ್ರಿಕಾ ತಂಡವನ್ನು 19.4 ಓವರ್ಗಳಲ್ಲಿ 149 ರನ್ಗಳಿಗೆ ಆಲೌಟ್ ಮಾಡಿದರು. ಈ ಮೂಲಕ ವಿಂಡೀಸ್ ಪಡೆ 30 ರನ್ಗಳ ಜಯ ಸಾಧಿಸಿದೆ. ವೆಸ್ಟ್ ಇಂಡೀಸ್ ಪರ ಶಮರ್ ಜೋಸೆಫ್ 3 ವಿಕೆಟ್ ಕಬಳಿಸಿದರೆ, ಅಕಿಲ್ ಹೊಸೇನ್ 2 ವಿಕೆಟ್ ಪಡೆದು ಮಿಂಚಿದರು.
ವೆಸ್ಟ್ ಇಂಡೀಸ್ ಪ್ಲೇಯಿಂಗ್ 11: ಅಲಿಕ್ ಅಥಾನಾಝ್ , ಶಾಯ್ ಹೋಪ್ , ನಿಕೋಲಸ್ ಪೂರನ್ (ವಿಕೆಟ್ ಕೀಪರ್) , ರೋವ್‌ಮನ್ ಪೊವೆಲ್ (ನಾಯಕ) , ರೋಸ್ಟನ್ ಚೇಸ್ , ಶೆರ್ಫೇನ್ ರುದರ್‌ಫೋರ್ಡ್ , ರೊಮಾರಿಯೋ ಶೆಫರ್ಡ್ , ಅಕಿಲ್ ಹೋಸೇನ್ , ಗುಡಾಕೇಶ್ ಮೋಟಿ , ಮ್ಯಾಥ್ಯೂ ಫೋರ್ಡ್ , ಶಮರ್ ಜೋಸೆಫ್.
ಇದನ್ನೂ ಓದಿ: IPL 2025: ಧೋನಿ RCB ತಂಡದ ನಾಯಕರಾಗಿದ್ದರೆ 3 ಟ್ರೋಫಿ ಗೆದ್ದಿರುತ್ತಿತ್ತು..!
ಸೌತ್ ಆಫ್ರಿಕಾ ಪ್ಲೇಯಿಂಗ್ 11: ರಿಯಾನ್ ರಿಕೆಲ್ಟನ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ (ನಾಯಕ) ಟ್ರಿಸ್ಟನ್ ಸ್ಟಬ್ಸ್ , ರಾಸ್ಸೀ ವ್ಯಾನ್ ಡೆರ್ ಡಸ್ಸೆನ್ , ಡೊನೊವನ್ ಫೆರೆರಾ , ಪ್ಯಾಟ್ರಿಕ್ ಕ್ರುಗರ್ , ಜಾರ್ನ್ ಫಾರ್ಚುಯಿನ್ , ಲಿಜಾಡ್ ವಿಲಿಯಮ್ಸ್ , ಕ್ವೆನಾ ಮಫಕಾ , ಒಟ್ನೀಲ್ ಬಾರ್ಟ್‌ಮನ್.