ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವೇಗಿ ಶಮರ್ ಜೋಸೆಫ್ (Shamar Joseph) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಶುರು ಮಾಡಿದ ವೆಸ್ಟ್ ಇಂಡೀಸ್ ತಂಡವು 188 ರನ್ ಕಲೆಹಾಕಿ ಆಲೌಟ್ ಆಯಿತು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡಕ್ಕೆ ಯುವ ವೇಗಿ ಶಮರ್ ಜೋಸೆಫ್ ಆರಂಭಿಕ ಆಘಾತ ನೀಡಿದರು. ಪಾದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ಸ್ಟೀವ್ ಸ್ಮಿತ್ (12) ಶಮರ್ ವಿಕೆಟ್ ಖಾತೆ ತೆರೆದರು. ಆ ಬಳಿಕ ಕೂಡ ಕರಾರುವಾಕ್ ದಾಳಿ ಸಂಘಟಿಸಿ ಮಾರ್ನಸ್ ಲಾಬುಶೇನ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದಾದ ಬಳಿಕ ಕ್ಯಾಮರೋನ್ ಗ್ರೀನ್ (14), ಮಿಚೆಲ್ ಸ್ಟಾರ್ಕ್ (10) ಹಾಗೂ ನಾಥನ್ ಲಿಯಾನ್ (24) ಗೆ ಪೆವಿಲಿಯನ್ ಹಾದಿ ತೋರಿಸುವಲ್ಲಿ ಶಮರ್ ಜೋಸೆಫ್ ಯಶಸ್ವಿಯಾದರು. ಈ ಮೂಲಕ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ಗಳ ಸಾಧನೆ ಮಾಡಿದರು.
ಈ ಪಂದ್ಯದಲ್ಲಿ 20 ಓವರ್ಗಳನ್ನು ಎಸೆದ ಶಮರ್ ಜೋಸೆಫ್ 94 ರನ್ ನೀಡಿ 5 ವಿಕೆಟ್ಗಳನ್ನು ಕಬಳಿಸಿದರು. ಈ ಮೂಲಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ 5 ವಿಕೆಟ್ ಕಬಳಿಸಿದ ವೆಸ್ಟ್ ಇಂಡೀಸ್ನ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರ ಜೊತೆಗೆ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ವಿಂಡೀಸ್ನ 2ನೇ ಬೌಲರ್ ಎಂಬ ದಾಖಲೆಯನ್ನು 24 ವರ್ಷದ ಯುವ ವೇಗಿ ತಮ್ಮದಾಗಿಸಿಕೊಂಡರು.
1939 ರಲ್ಲಿ ದಿ ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಜಿ ಎಡಗೈ ಸ್ಪಿನ್ನರ್ ಟೈರೆಲ್ ಜಾನ್ಸನ್ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಕಬಳಿಸಿ ವಿಂಡೀಸ್ ಪರ ವಿಶೇಷ ದಾಖಲೆ ಬರೆದಿದ್ದರು. ಇದೀಗ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್ನ ಎರಡನೇ ಬೌಲರ್ ಎಂಬ ಹೆಗ್ಗಳಿಕೆಗೆ ಶಮರ್ ಜೋಸೆಫ್ ಪಾತ್ರರಾಗಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಶಮರ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ನಲ್ಲಿ 283 ರನ್ಗಳಿಗೆ ಆಲೌಟ್ ಆಗಿದೆ. ಇತ್ತ 95 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡವು 12 ಓವರ್ಗಳ ಮುಕ್ತಾಯದ ವೇಳೆಗೆ ಕೇವಲ 33 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಸದ್ಯ ಕ್ರೀಸ್ನಲ್ಲಿ ಕಿರ್ಕ್ ಮೆಕೆಂಜಿ ಹಾಗೂ ಜಸ್ಟಿನ್ ಗ್ರೀವ್ಸ್ ಬ್ಯಾಟಿಂಗ್ ಮಾಡುತ್ತಿದ್ದಾರೆ.
ವೆಸ್ಟ್ ಇಂಡೀಸ್ ಪ್ಲೇಯಿಂಗ್ XI: ಕ್ರೈಗ್ ಬ್ರಾಥ್‌ವೈಟ್ (ನಾಯಕ), ತೇಜ್ನರೈನ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಝ್, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಜೋಶುವಾ ಡಾ ಸಿಲ್ವಾ (ವಿಕೆಟ್ ಕೀಪರ್), ಗುಡಕೇಶ್ ಮೋಟಿ, ಅಲ್ಝಾರಿ ಜೋಸೆಫ್, ಶಮರ್ ಜೋಸೆಫ್ ಮತ್ತು ಕೆಮರ್ ರೋಚ್.
ಇದನ್ನೂ ಓದಿ: ನನಗೆ RCB ಪರ ಆಡೋದು ಇಷ್ಟವಿರಲಿಲ್ಲ, ಬೆದರಿಸಿ ಆಡ್ಸಿದ್ರು..!
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್ , ಮಾರ್ನಸ್ ಲಾಬುಶೇನ್, ಕ್ಯಾಮೆರೋನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಝಲ್ವುಡ್.