ಭಾರತ ಮಹಿಳಾ ಕ್ರಿಕೆಟ್ ತಂಡದಿಂದ ಹೊರಗುಳಿದಿರುವ ಸ್ಫೋಟಕ ಆರಂಭಿಕ ಆಟಗಾರ್ತಿ ಶೆಫಾಲಿ ವರ್ಮಾ ದೇಶೀ ಕ್ರಿಕೆಟ್‌ನಲ್ಲಿ ರನ್ಗಳ ಮಳೆಸುರಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಹಿರಿಯ ಮಹಿಳಾ ಏಕದಿನ ಚಾಲೆಂಜರ್ ಟ್ರೋಫಿಯಲ್ಲಿ ಶೆಫಾಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಎ ತಂಡದ ಪರ ಆಡುತ್ತಿರುವ ಶೆಫಾಲಿ ಈ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಶೆಫಾಲಿ ಕೇವಲ 60 ಎಸೆತಗಳಲ್ಲಿ ತಮ್ಮ ಮೊದಲ ಶತಕದ ಸ್ಕ್ರಿಪ್ಟ್ ಬರೆದರು. ಇದು ಈ ಟೂರ್ನಿಯಲ್ಲಿ ಅವರ ಸತತ ನಾಲ್ಕನೇ ಅರ್ಧಶತಕ ಪ್ಲಸ್ ಸ್ಕೋರ್ ಆಗಿದೆ. ಇದಕ್ಕೂ ಮುನ್ನ ಅವರು 2 ಪಂದ್ಯಗಳಲ್ಲಿ ಶತಕದ ಸನಿಹಕ್ಕೆ ಬಂದು ಔಟಾಗಿ ಶತಕ ವಂಚಿತರಾಗಿದ್ದರು.
ಡಿ ತಂಡದ ವಿರುದ್ಧದ ಪಂದ್ಯದಲ್ಲಿ 166.6 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಶೆಫಾಲಿ ವರ್ಮಾ ಕೇವಲ 60 ಎಸೆತಗಳಲ್ಲಿ 100 ರನ್‌ಗಳನ್ನು ಪೂರ್ಣಗೊಳಿಸಿದರು. ಇದರಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 70 ಎಸೆತಗಳನ್ನು ಎದುರಿಸಿದ ಶೆಫಾಲಿ 14 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 115 ರನ್ ಕಲೆಹಾಕಿದರು. ಇದು ಶೆಫಾಲಿ ವರ್ಮಾಗೆ ಏಕದಿನ ಚಾಲೆಂಜರ್ ಟ್ರೋಫಿಯಲ್ಲಿ ನಾಲ್ಕನೇ ಪಂದ್ಯವಾಗಿದೆ. ಇದಕ್ಕೂ ಮುನ್ನ ಆಡಿದ ಮೂರು ಪಂದ್ಯಗಳಲ್ಲಿ ಅವರು 95, 91 ಮತ್ತು 87 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡುವ ಮೂಲಕ ಒಟ್ಟು 273 ರನ್ ಗಳಿಸಿದ್ದರು. ಈಗ 4 ಪಂದ್ಯಗಳ ನಂತರ, ಏಕದಿನ ಚಾಲೆಂಜರ್ ಟ್ರೋಫಿಯಲ್ಲಿ ಅವರ ಒಟ್ಟು ರನ್ಗಳ ಸಂಖ್ಯೆ 388 ಕ್ಕೇ ಏರಿಕೆಯಾಗಿದೆ.
ಟೂರ್ನಿಯಲ್ಲಿ ಇದುವರೆಗೆ ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಶೆಫಾಲಿ ಐವತ್ತು ಪ್ಲಸ್ ಸ್ಕೋರ್ ಕಲೆ ಹಾಕಿದ್ದಾರೆ. ಅಷ್ಟೇ ಅಲ್ಲ, ಏಕದಿನ ಪಂದ್ಯವಾದರೂ ಟಿ20 ಪಂದ್ಯ ಎಂಬಂತೆ ಬ್ಯಾಟ್ ಬೀಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ 65 ಎಸೆತಗಳಲ್ಲಿ 95 ರನ್ ಬಾರಿಸಿದ್ದ ಅವರು ಎರಡನೇ ಪಂದ್ಯದಲ್ಲಿ 71 ಎಸೆತಗಳಲ್ಲಿ 91 ರನ್ ಗಳಿಸಿದ್ದರು. ಮೂರನೇ ಪಂದ್ಯದಲ್ಲಿ ಅವರು 58 ಎಸೆತಗಳಲ್ಲಿ 87 ರನ್ ಸಿಡಿಸಿದ್ದರು.
ಇನ್ನು ಈ ಪಂದ್ಯದ ಕುರಿತು ಹೇಳುವುದಾದರೆ, ಮೊದಲು ಬ್ಯಾಟ್ ಮಾಡಿದ ಡಿ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗೆ 211 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಎ ತಂಡ ಶೆಫಾಲಿ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ನಿಂದಾಗಿ ಸುಲಭ ಜಯ ದಾಖಲಿಸಿತು. ಎ ತಂಡದ ಆರಂಭಿಕ ಜೋಡಿ 47 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರೂ, ಶೆಫಾಲಿ ಒಂದು ತುದಿಯಲ್ಲಿ ನಿಂತು ಗೆಲುವಿನ ಇನ್ನಿಂಗ್ಸ್ ಆಡಿದರು.
ಶೆಫಾಲಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಪರ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಅವರ ಪ್ರಸ್ತುತ ಫಾರ್ಮ್ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿಯನ್ನು ನೋಡಿದರೆ, ಅವರು ಶೀಘ್ರದಲ್ಲೇ ತಂಡಕ್ಕೆ ಪುನರಾಗಮನ ಮಾಡಬಹುದು ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:08 pm, Mon, 13 January 25