‘ರಾಯುಡು ವೃತ್ತಿಜೀವನ ಮುಗಿಸಿದ್ದು ಕೊಹ್ಲಿಯೇ’; ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಉತ್ತಪ್ಪ
Robin Uthappa's Explosive Claim: ರಾಬಿನ್ ಉತ್ತಪ್ಪ ಅವರು ಅಂಬಾಟಿ ರಾಯುಡು ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅಂತ್ಯಕ್ಕೆ ವಿರಾಟ್ ಕೊಹ್ಲಿ ಕಾರಣ ಎಂದು ಆರೋಪಿಸಿದ್ದಾರೆ. 2019ರ ವಿಶ್ವಕಪ್‌ನಿಂದ ರಾಯುಡು ಕೈಬಿಡಲ್ಪಟ್ಟಿದ್ದು ಕೊಹ್ಲಿಯ ಅಸಮ್ಮತಿಯಿಂದ ಎಂದು ಅವರು ಹೇಳಿದ್ದಾರೆ. ಉತ್ತಪ್ಪ ಅವರ ಈ ಹೇಳಿಕೆ ಭಾರತೀಯ ಕ್ರಿಕೆಟ್‌ನಲ್ಲಿ ಸಂಚಲನವನ್ನು ಉಂಟುಮಾಡಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡಿಗ ರಾಬಿನ್ ಉತ್ತಪ್ಪ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸದಾ ಸುದ್ದಿಯಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಯುವರಾಜ್ ಸಿಂಗ್ ಅವರ ವೃತ್ತಿಜೀವನ ಅಂತ್ಯಗೊಳ್ಳಲು ವಿರಾಟ್ ಕೊಹ್ಲಿಯೇ ಕಾರಣ ಎಂಬ ಗಂಭೀರ ಆರೋಪ ಮಾಡಿದ್ದ ಉತ್ತಪ್ಪ, ಇದೀಗ ಟೀಂ ಇಂಡಿಯಾದ ಮತ್ತೊಬ್ಬ ಮಧ್ಯಮ ಕ್ರಮಾಂಕದ ಬ್ಯಾಟರ್ ಅಂಬಾಟಿ ರಾಯುಡು ಅವರ ವೃತ್ತಿಜೀವನ ಕೊನೆಯಾಗುವುದಕ್ಕೂ ಕೊಹ್ಲಿಯೇ ಕಾರಣ ಎಂದಿದ್ದಾರೆ. ಉತ್ತಪ್ಪ ಅವರ ಈ ಹೇಳಿಕೆ ಇದೀಗ ಭಾರತ ಕ್ರಿಕೆಟ್‌ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಆದರೆ ಉತ್ತಪ್ಪ ಅವರ ಈ ಹೇಳಿಕೆಯನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸುವ ಸಾಧ್ಯತೆಗಳಿಲ್ಲ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಏಕೆಂದರೆ ಉತ್ತಪ್ಪ ಕೆಲವು ದಿನಗಳಿಂದ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದರೂ ಈ ಬಗ್ಗೆ ಕೊಹ್ಲಿಯಾಗಲಿ ಅಥವಾ ಇತರೆ ಆಟಗಾರರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿಲ್ಲ.
ಕೊಹ್ಲಿ ವಿರುದ್ಧ ಆರೋಪ
ಸಂದರ್ಶನವೊಂದರಲ್ಲಿ ಮಾತನಾಡಿರುವ ಉತ್ತಪ್ಪ, ಕೊಹ್ಲಿ ಯಾರನ್ನಾದರೂ ಇಷ್ಟಪಡದಿದ್ದರೆ ಅಥವಾ ಆಟಗಾರನು ಸರಿಯಿಲ್ಲ ಎಂದು ಭಾವಿಸಿದರೆ ಅವರನ್ನು ತಂಡದಿಂದ ಕೈಬಿಡುವ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಇದಕ್ಕೆ ರಾಯುಡು ಉದಾಹರಣೆ. ರಾಯುಡು ಬಗ್ಗೆ ಕೊಹ್ಲಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಹೀಗಾಗಿ ಅವರನ್ನು 2019 ರ ವಿಶ್ವಕಪ್‌ನಿಂದ ಕೈಬಿಡಲಾಯಿತು. ಇದು ಸರಿಯಲ್ಲ. ಪ್ರತಿಯೊಬ್ಬ ಆಟಗಾರನೂ ಈ ಮಟ್ಟಕ್ಕೆ ಬರಲು ಸಾಕಷ್ಟು ಶ್ರಮಿಸುತ್ತಾನೆ. ಆದರೆ ನೀವು ಒಬ್ಬ ಆಟಗಾರನಿಗೆ ತನ್ನದೇ ತಂಡದ ಆಟಗಾರನಿಗೆ ತಂಡದ ಬಾಗಿಲುಗಳನ್ನು ಮುಚ್ಚುವುದು ನನ್ನ ಪ್ರಕಾರ ಸರಿಯಲ್ಲ.
ವಿಶ್ವಕಪ್ ಜರ್ಸಿ ಮನೆಗೆ ತಲುಪಿತ್ತು
2019 ರ ವಿಶ್ವಕಪ್ಗೆ ರಾಯುಡು ಆಯ್ಕೆಯಾಗುವುದು ಖಚಿತವಾಗಿತ್ತು. ಹೀಗಾಗಿಯೇ ಅವರ ಮನೆಗೆ ವಿಶ್ವಕಪ್ ಜೆರ್ಸಿ ಮತ್ತು ಕಿಟ್ ಬ್ಯಾಗ್ ಅನ್ನು ತಲುಪಿಸಲಾಗಿತ್ತು. ಆದರೆ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ವಿಶ್ವಕಪ್ ಜರ್ಸಿ ಮತ್ತು ಕಿಟ್ ಬ್ಯಾಗ್ ಮನೆಗೆ ಕಳುಹಿಸಿದ್ದಾರೆ ಎಂದರೆ ಅದು ಆ ಆಟಗಾರ ತಂಡಕ್ಕೆ ಆಯ್ಕೆಯಾಗುವುದು ಖಚಿತ ಎಂದರ್ಥ. ಪ್ರತಿಯೊಬ್ಬರಿಗೂ ನನ್ನ ದೇಶಕ್ಕಾಗಿ ವಿಶ್ವಕಪ್ ಗೆಲ್ಲುವ ಆಸೆ ಇರುತ್ತದೆ. ಆದರೆ ನೀವು ಎಲ್ಲವನ್ನೂ ಅವನ ಮನೆಗೆ ಕಳುಹಿಸಿ, ಆ ಬಳಿಕ ಅವನಿಗೆ ತಂಡದಲ್ಲಿ ಸ್ಥಾನ ನೀಡದಿರುವುದು ಅನ್ಯಾಯ. ಇಂತಹ ವಿಷಯಗಳು ಆಟಗಾರರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಒಬ್ಬ ಆಟಗಾರನಾಗಿರಲಿ, ಮನುಷ್ಯನಾಗಿ ಇದು ಮುಖ್ಯವಾಗಿದೆ. ನೀವು ಆತನನ್ನು ತಂಡಕ್ಕೆ ಆಯ್ಕೆ ಮಾಡದೆ ಆತನ ವಿಶ್ವಾಸವನ್ನು ಮುರಿದಿದ್ದೀರಿ ಎಂದು ಉತ್ತಪ್ಪ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 pm, Mon, 13 January 25