ವಿಜಯ್ ಮರ್ಚೆಂಟ್ ಟ್ರೋಫಿ: ಪಂಜಾಬ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಅನ್ವಯ್ ದ್ರಾವಿಡ್
Anvaya Dravid's Century in Vijay Merchant Trophy: ವಿಜಯ್ ಮರ್ಚೆಂಟ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಅವರು ಪಂಜಾಬ್ ವಿರುದ್ಧ ಅದ್ಭುತವಾದ 110 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಆದಾಗ್ಯೂ, ಪಂಜಾಬ್ ತಂಡದ ಭರ್ಜರಿ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ ತಂಡ ಸೋಲುಂಡು ಸೆಮಿಫೈನಲ್‌ಗೆ ತಲುಪಲು ವಿಫಲವಾಯಿತು. ಅನ್ವಯ್ ಈ ಟೂರ್ನಿಯಲ್ಲಿ 459 ರನ್‌ಗಳನ್ನು ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ ಅವರ ಅದ್ಭುತ ಫಾರ್ಮ್ ಮುಂದುವರೆದಿದೆ. ಈ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ರನ್‌ಗಳ ಶಿಖರ ಕಟ್ಟಿರುವ ಅನ್ವಯ್, ಇಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲೂ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಅಹಮದಾಬಾದ್‌ನ ADSA ರೈಲ್ವೇ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಅನ್ವಯ್ 110 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌ನಲ್ಲಿ 234 ಎಸೆತಗಳನ್ನು ಎದುರಿಸಿದ ಅವರು 12 ಬೌಂಡರಿಗಳನ್ನು ಬಾರಿಸಿದರು.
ಅನ್ವಯ್ ಶತಕ ವ್ಯರ್ಥ
ಅನ್ವಯ್ ಶತಕ ಬಾರಿಸಿದರಾದರೂ ಕರ್ನಾಟಕ ತಂಡ ಸೆಮಿಫೈನಲ್ ತಲುಪಲು ಸಾಧ್ಯವಾಗಲಿಲ್ಲ. ವಾಸ್ತವವಾಗಿ, ಇದು ಕ್ವಾರ್ಟರ್ ಫೈನಲ್ ಪಂದ್ಯವಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 9 ವಿಕೆಟ್‌ಗೆ 742 ರನ್ ಕಲೆಹಾಕಿತು. ಉತ್ತರವಾಗಿ ಕರ್ನಾಟಕ ತಂಡ 280 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂರು ದಿನಗಳ ಪಂದ್ಯದಲ್ಲಿ ಮುನ್ನಡೆ ಪಡೆಯುವ ತಂಡ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತಿತ್ತು. ಆ ಪ್ರಕಾರ ಪಂದ್ಯದಲ್ಲಿ ಮುನ್ನಡೆ ಪಡೆದುಕೊಂಡ ಪಂಜಾಬ್ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಹೀಗಾಗಿ ಅನ್ವಯ್ ಶತಕ ಸಿಡಿಸಿದರೂ ತಂಡವನ್ನು ಗೆಲುವಿನತ್ತ ಮುನ್ನಡೆಸಲು ಸಾಧ್ಯವಾಗಲಿಲ್ಲ.
Anvay Dravid 100 runs in 198 balls (12×4, 0x6) Karnataka 251/6 #PUNvKAR #VijayMerchant #Elite #QF4 Scorecard:https://t.co/cFQ6rgOeBY
— BCCI Domestic (@BCCIdomestic) January 13, 2025
ಟೂರ್ನಿಯಲ್ಲಿ 459 ರನ್
ಆದಾಗ್ಯೂ ವಿಜಯ್ ಮರ್ಚೆಂಟ್ ಟ್ರೋಫಿಯಲ್ಲಿ ಕರ್ನಾಟಕದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಅನ್ವಯ್ ದ್ರಾವಿಡ್ ಪಾತ್ರರಾಗಿದ್ದಾರೆ. ಈ ಟೂರ್ನಿಯಲ್ಲಿ ಆಡಿದ 8 ಇನ್ನಿಂಗ್ಸ್‌ಗಳಲ್ಲಿ 91.80 ಸರಾಸರಿಯಲ್ಲಿ ಅನ್ವಯ್ ಬರೋಬ್ಬರಿ 459 ರನ್ ಕಲೆಹಾಕಿದ್ದಾರೆ. ಇದರಲ್ಲಿ 2 ಶತಕ ಮತ್ತು 3 ಅರ್ಧ ಶತಕಗಳು ಸೇರಿದ್ದು, ಇಡೀ ಟೂರ್ನಿಯಲ್ಲಿ ಅವರು 46 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಹ ಬಾರಿಸಿದ್ದಾರೆ.
ಪಂಜಾಬ್ ತಂಡದ ಉತ್ತಮ ಪ್ರದರ್ಶನ
ಈ ಪಂದ್ಯದಲ್ಲಿ ಪಂಜಾಬ್ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಪಂಜಾಬ್ ಓಪನರ್ ಗುರ್ಸಿಮ್ರಾನ್ ಸಿಂಗ್ ಅದ್ಭುತ ದ್ವಿಶತಕ ಬಾರಿಸುವ ಮೂಲಕ 230 ರನ್ ಕಲೆಹಾಕಿದರೆ, ಪಂಜಾಬ್‌ನ 6 ಬ್ಯಾಟ್ಸ್‌ಮನ್‌ಗಳು ಅರ್ಧಶತಕ ದಾಖಸಿದರು. ಹೀಗಾಗಿ ಪಂಜಾಬ್ ತಂಡ 246.3 ಓವರ್‌ಗಳ ಬ್ಯಾಟಿಂಗ್ ಮಾಡಿ 742 ರನ್‌ಗಳಿಗೆ ತನ್ನ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:06 pm, Mon, 13 January 25