ಚಾಂಪಿಯನ್ಸ್ ಟ್ರೋಫಿಗೆ ತಾತ್ಕಾಲಿಕ ತಂಡದ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದ ಪಾಕಿಸ್ತಾನ
Champions Trophy 2025: ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಂದಿನ ತಿಂಗಳು ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತನ್ನ ತಾತ್ಕಾಲಿಕ ತಂಡವನ್ನು ಐಸಿಸಿಗೆ ಸಲ್ಲಿಸಿದೆ. ಮೊಹಮ್ಮದ್ ರಿಜ್ವಾನ್ ನಾಯಕತ್ವ ವಹಿಸಲಿದ್ದು ತಂಡಕ್ಕೆ ಫಖರ್ ಜಮಾನ್ ಅವರ ಸೇರ್ಪಡೆ ಗಮನಾರ್ಹ. ಗಾಯಗೊಂಡಿರುವ ಸಯೀಮ್ ಅಯೂಬ್ ಅವರ ಆಯ್ಕೆ ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿದ್ದು, ಉಳಿದಂತೆ ತಂಡದಲ್ಲಿ ಬಾಬರ್ ಆಝಂ, ಶಾಹೀನ್ ಅಫ್ರಿದಿ ಮುಂತಾದ ಪ್ರಮುಖ ಆಟಗಾರರಿದ್ದಾರೆ.
ಮುಂದಿನ ತಿಂಗಳು ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ತನ್ನ ತಾತ್ಕಾಲಿಕ ತಂಡದ ಪಟ್ಟಿಯನ್ನು ಐಸಿಸಿಗೆ ಸಲ್ಲಿಸಿದೆ ಎಂದು ವರದಿಯಾಗಿದೆ. ಆ ಪ್ರಕಾರ ತಂಡದ ನಾಯಕತ್ವ ಮೊಹಮ್ಮದ್ ರಿಜ್ವಾನ್ ಕೈಯಲ್ಲಿದ್ದು, ಪಾಕಿಸ್ತಾನದ ಸ್ಥಳೀಯ ಸುದ್ದಿ ವಾಹಿನಿ ಸಮಾ ಟಿವಿ ಪ್ರಕಾರ, ಈ ಪಂದ್ಯಾವಳಿಗಾಗಿ ಪಿಸಿಬಿ 15 ಕ್ಕೂ ಹೆಚ್ಚು ಆಟಗಾರರ ಹೆಸರನ್ನು ಐಸಿಸಿಗೆ ನೀಡಿದೆ. ಆದರೆ ಐಸಿಸಿ ಗಡುವು ಮುಗಿಯುವುದಕ್ಕೂ ಮೊದಲು 15 ಆಟಗಾರರ ಪಟ್ಟಿಯನ್ನು ಅಂತಿಮಗೊಳಿಸಲಿದೆ ಎಂದು ವರದಿ ಮಾಡಿದೆ. ಈ ತಂಡದಲ್ಲಿ ಆರಂಭಿಕ ಆಟಗಾರ ಫಖರ್ ಜಮಾನ್ ಮತ್ತು ಗಾಯಾಳು ಆರಂಭಿಕ ಬ್ಯಾಟ್ಸ್‌ಮನ್ ಸ್ಯಾಮ್ ಅಯೂಬ್ ಕೂಡ ಸ್ಥಾನ ಪಡೆದಿದ್ದಾರೆ.
ರಿಜ್ವಾನ್ ನಾಯಕತ್ವ
ಪಿಸಿಬಿ, ಐಸಿಸಿಗೆ ಸಲ್ಲಿಸಿರುವ ತಾತ್ಕಾಲಿಕ ತಂಡ ಯುವ ಹಾಗೂ ಅನುಭವಿ ಆಟಗಾರರ ಮಿಶ್ರಣವಾಗಿದ್ದು, ರಿಜ್ವಾನ್ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸಲಿದೆ. ನಾಯಕನಾಗಿ ರಿಜ್ವಾನ್ ಅವರ ಆರಂಭ ಇಲ್ಲಿಯವರೆಗೆ ಉತ್ತಮವಾಗಿದೆ. ಬಾಬರ್ ಆಝಂ ತಂಡದಲ್ಲಿ ಉಳಿದುಕೊಂಡಿದ್ದು, ಸೈಮ್ ಅಯೂಬ್ ಅಂತಿಮ ತಂಡಕ್ಕೆ ಸೇರ್ಪಡೆಗೊಳ್ಳುವುದು ಅವರ ಫಿಟ್ನೆಸ್ ಅನ್ನು ಅವಲಂಬಿಸಿರುತ್ತದೆ. ಆದರೆ, ಅವರ ಗಾಯದ ಗಂಭೀರತೆಯನ್ನು ಪರಿಗಣಿಸಿದರೆ, ಅವರು ತಂಡವನ್ನು ಸೇರುವ ಸಾಧ್ಯತೆಗಳು ತೀರಾ ಕಡಿಮೆ.
ಫಖರ್ ಜಮಾನ್ಗೆ ಅವಕಾಶ
ಉಳಿದಂತೆ ಪಾಕ್ ತಂಡದಲ್ಲಿ ನಿರೀಕ್ಷಿತ ಹೆಸರುಗಳಾದ ಶಾಹೀನ್ ಅಫ್ರಿದಿ, ನಸೀಮ್ ಶಾ ಮತ್ತು ಹ್ಯಾರಿಸ್ ರೌಫ್ಗೆ ಅವಕಾಶ ನೀಡಲಾಗಿದೆ. ಸ್ಫೋಟಕ ಬ್ಯಾಟ್ಸ್‌ಮನ್ ಫಖರ್ ಜಮಾನ್ಗೆ ಸ್ಥಾನ ನೀಡಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಏಕೆಂದರೆ ಈ ಹಿಂದೆ ಫಖರ್ ಜಮಾನ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಡುವೆ ಮಾತಿನ ಯುದ್ಧ ನಡೆದಿತ್ತು. ಹಾಗಾಗಿ 2023 ರ ನವೆಂಬರ್ನಲ್ಲಿ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದ ಅವರನ್ನು ಅಂದಿನಿಂದ ಏಕದಿನ ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.
ಆದರೆ ಅಂತಿಮವಾಗಿ, ಅವರಿಗೆ ತಂಡದಲ್ಲಿ ಸ್ಥಾನ ನೀಡುವ ಮೂಲಕ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಏಕೆಂದರೆ ಇದೇ ಫಖರ್ ಜಮಾನ್ 2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2017 ರ ಫೈನಲ್‌ನಲ್ಲಿ ಫಖರ್ ಜಮಾನ್ ಶತಕ ಬಾರಿಸಿ ಟೀಂ ಇಂಡಿಯಾವನ್ನು ಸೋಲಿನ ಪ್ರಪಾತಕ್ಕೆ ತಳ್ಳಿದ್ದರು.
ಭಾರತದ ಸೋಲಿಗೆ ಕಾರಣರಾಗಿದ್ದ ಫಖರ್
2017 ರ ಚಾಂಪಿಯನ್ಸ್ ಟ್ರೋಫಿಯಲ್ಲಿ, ಫಖರ್ ಜಮಾನ್ 106 ಎಸೆತಗಳಲ್ಲಿ 12 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 114 ರನ್ ಕಲೆಹಾಕಿದರು. ಫಖರ್ ಅವರ ಶತಕದ ನೆರವಿನಿಂದ ಪಾಕ್ ತಂಡ 338 ರನ್ ಕಲೆಹಾಕಿತು. ಈ ಸವಾಲನ್ನು ಬೆನ್ನಟ್ಟಿದ ಭಾರತ ಕೇವಲ 158 ರನ್‌ಗಳಿಗೆ ಆಲೌಟ್ ಆಗಿ 180 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಈ ಪಂದ್ಯದಲ್ಲಿ ಫಖರ್ ಜಮಾನ್ ಪಂದ್ಯ ಪುರುಷೋತ್ತಮ ಪ್ರಶಸ್ತಿ ಕೂಡ ಪಡೆದಿದ್ದರು.
ಉಳಿದಂತೆ ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ತಯ್ಯಬ್ ತಾಹಿರ್, ಇರ್ಫಾನ್ ಖಾನ್ ನಿಯಾಜಿ, ಉಸ್ಮಾನ್ ಖಾನ್, ಕಮ್ರಾನ್ ಗುಲಾಮ್ ಮತ್ತು ಸಲ್ಮಾನ್ ಅಲಿಯಂತಹ ಆಟಗಾರರಿಗೆ ಮಧ್ಯಮ ಕ್ರಮಾಂಕದಲ್ಲಿ ಅವಕಾಶ ನೀಡಲಾಗಿದೆ. ಇವರೊಂದಿಗೆ ಅಬ್ರಾರ್ ಅಹ್ಮದ್ ಮತ್ತು ಸುಫಿಯಾನ್ ಮುಕಿಮ್ ಅವರಿಗೂ ಬೌಲಿಂಗ್ ವಿಭಾಗದಲ್ಲಿ ಅವಕಾಶ ನೀಡಲಾಗಿದೆ.
ಪಾಕಿಸ್ತಾನ ತಾತ್ಕಾಲಿಕ ತಂಡ: ಮೊಹಮ್ಮದ್ ರಿಜ್ವಾನ್ (ನಾಯಕ, ವಿಕೆಟ್ ಕೀಪರ್), ಬಾಬರ್ ಆಝಂ, ಸಯೀಮ್ ಅಯೂಬ್, ತಯ್ಯಬ್ ತಾಹಿರ್, ಇರ್ಫಾನ್ ಖಾನ್ ನಿಯಾಜಿ, ಸುಫಿಯಾನ್ ಮುಕೀಮ್, ಮೊಹಮ್ಮದ್ ಹಸ್ನೇನ್, ಅಬ್ದುಲ್ಲಾ ಶಫೀಕ್, ನಸೀಮ್ ಶಾ, ಉಸ್ಮಾನ್ ಖಾನ್, ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್, ಕಮ್ರಾನ್ ಗುಲಾಮ್, ಸಲ್ಮಾನ್ ಅಲಿ ಅಘಾ, ಇಮಾಮ್-ಉಲ್-ಹಕ್, ಫಖರ್ ಜಮಾನ್, ಹಸಿಬುಲ್ಲಾ ಮತ್ತು ಅಬ್ಬಾಸ್ ಅಫ್ರಿದಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ