IND vs ENG: ಲಾರ್ಡ್ಸ್‌ ಟೆಸ್ಟ್ ಗೆದ್ದ ಬೆನ್ನಲ್ಲೇ ಇಡೀ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್​ ಆಟಗಾರ

Shoaib Basheer Injury: ಲಾರ್ಡ್ಸ್‌ನಲ್ಲಿ ಭಾರತವನ್ನು 22 ರನ್‌ಗಳಿಂದ ಸೋಲಿಸಿ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಆದರೆ ಈ ಗೆಲುವಿನ ಸಂಭ್ರಮದಲ್ಲಿ ದೊಡ್ಡ ಆಘಾತ ಎದುರಾಗಿದೆ. ಇಂಗ್ಲೆಂಡ್‌ನ ಪ್ರಮುಖ ಸ್ಪಿನ್ನರ್ ಶೋಯೆಬ್ ಬಶೀರ್ ಬೆರಳಿನ ಮೂಳೆ ಮುರಿತದಿಂದಾಗಿ ಉಳಿದ ಎರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಜಡೇಜಾ ಬಾರಿಸಿದ ಶಾಟ್‌ ಕೈಗೆ ತಗುಲಿ ಗಾಯಗೊಂಡಿದ್ದ ಅವರು, ಲಾರ್ಡ್ಸ್ ಪಂದ್ಯದಲ್ಲಿ ಕೊನೆಯ ವಿಕೆಟ್ ಪಡೆದಿದ್ದರು. ಅವರ ಅನುಪಸ್ಥಿತಿ ಇಂಗ್ಲೆಂಡ್‌ಗೆ ದೊಡ್ಡ ನಷ್ಟ.

IND vs ENG: ಲಾರ್ಡ್ಸ್‌ ಟೆಸ್ಟ್ ಗೆದ್ದ ಬೆನ್ನಲ್ಲೇ ಇಡೀ ಸರಣಿಯಿಂದ ಹೊರಬಿದ್ದ ಇಂಗ್ಲೆಂಡ್​ ಆಟಗಾರ
Ind Vs Eng

Updated on: Jul 14, 2025 | 11:37 PM

ಭಾರತ ಮತ್ತು ಇಂಗ್ಲೆಂಡ್ (India vs England) ನಡುವೆ ಲಾರ್ಡ್ಸ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 22 ರನ್‌ಗಳಿಂದ ಸೋಲಿಸಿದ ಇಂಗ್ಲೆಂಡ್ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಲೀಡ್ಸ್ ಟೆಸ್ಟ್​ನಲ್ಲಿ ಗೆದ್ದು, ಎಡ್ಜ್‌ಬಾಸ್ಟನ್​ನಲ್ಲಿ ಸೋತಿದ್ದ ಇಂಗ್ಲೆಂಡ್‌ ಇದೀಗ ಲಾರ್ಡ್ಸ್‌ನಲ್ಲಿ (Lord’s Test) ಭರ್ಜರಿ ಜಯಭೇರಿ ಬಾರಿಸಿದೆ. ಇದರೊಂದಿಗೆ, ಇಂಗ್ಲೆಂಡ್ ತಂಡವು ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ . ಆದರೆ ಈ ಗೆಲುವಿನ ಸಂಭ್ರಮದಲ್ಲಿರುವ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಕೊನೆಯಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್ ವಿಕೆಟ್ ಉರುಳಿಸಿ ಲಾರ್ಡ್ಸ್ ಟೆಸ್ಟ್‌ನ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್‌ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಶೋಯೆಬ್ ಬಶೀರ್, ಸರಣಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

ಬಶೀರ್ ಬೆರಳಿನ ಮೂಳೆ ಮುರಿದಿದೆ

ಇಂಗ್ಲೆಂಡ್ ಕ್ರಿಕೆಟ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್ ಗಾಯದ ಕಾರಣದಿಂದಾಗಿ ಉಳಿದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ . ಬಶೀರ್ ಅವರ ಎಡಗೈ ಬೆರಳಿನಲ್ಲಿ ಗಂಭೀರ ಮುರಿತ ಉಂಟಾಗಿದ್ದು, ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಲಾರ್ಡ್ಸ್ ಟೆಸ್ಟ್ ಸಮಯದಲ್ಲಿ ರವೀಂದ್ರ ಜಡೇಜಾ ಬಾರಿಸಿದ ವೇಗದ ಶಾಟ್ ಬಶೀರ್ ಅವರ ಕೈಗೆ ತಗುಲಿತ್ತು. ಹೀಗಾಗಿ ಬಶೀರ್ ಮೈದಾನವನ್ನು ತೊರೆದಿದ್ದರು. ಆರಂಭದಲ್ಲಿ ಅವರ ಫಿಟ್ನೆಸ್ ಬಗ್ಗೆ ಅನಿಶ್ಚಿತತೆ ಇತ್ತು , ಆದರೆ ಈಗ ವೈದ್ಯಕೀಯ ಪರೀಕ್ಷೆಯ ನಂತರ ಅವರ ಬೆರಳಿನ ಮೂಳೆ ಮುರಿದಿದೆ ಎಂದು ಸ್ಪಷ್ಟವಾಗಿದೆ. ಹೀಗಾಗಿ ಅವರು ಉಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದು, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಶೀಘ್ರದಲ್ಲೇ ಅವರ ಬದಲಿ ಆಟಗಾರನನ್ನು ಘೋಷಿಸಲಿದೆ.

ಮಾಹಿತಿ ನೀಡಿದ ಐಸಿಸಿ

10 ವಿಕೆಟ್ ಪಡೆದಿರುವ ಬಶೀರ್

ಈ ಸರಣಿಯಲ್ಲಿ ಬಶೀರ್ ಇಂಗ್ಲೆಂಡ್ ತಂಡದ ಪ್ರಮುಖ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರಿಂದ ಅವರ ಅನುಪಸ್ಥಿತಿಯು ತಂಡದ ಕಾರ್ಯತಂತ್ರದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಬಶೀರ್ ಬದಲಿಯನ್ನು ಹುಡುಕುವುದು ಇಂಗ್ಲೆಂಡ್‌ ಮಂಡಳಿಗೆ ತಲೆನೋವಾಗಿದೆ. ಶೋಯೆಬ್ ಬಶೀರ್‌ ಈ ಸರಣಿಯ ಮೊದಲ ಮೂರು ಪಂದ್ಯಗಳನ್ನಾಡಿದ್ದು, ಒಟ್ಟು 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಈ ಸರಣಿಯಲ್ಲಿ ಇದುವರೆಗೆ ಇಂಗ್ಲೆಂಡ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದಾರೆ.

IND vs ENG: ಲಾರ್ಡ್ಸ್‌ ಟೆಸ್ಟ್ ಸೋತಿರುವ ಟೀಂ ಇಂಡಿಯಾದಿಂದ ಈ ಮೂವರು ಆಟಗಾರರಿಗೆ ಕೋಕ್?

ಕೊನೆಯ ವಿಕೆಟ್ ಉರುಳಿಸಿದ ಬಶೀರ್

ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶೋಯೆಬ್ ಬಶೀರ್ ಗಾಯಗೊಂಡರು. ಇದರ ಹೊರತಾಗಿಯೂ, ಅವರು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗಾಯಗೊಂಡಿದ್ದರೂ ಸಹ , ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಬಂದು 9 ಎಸೆತಗಳಲ್ಲಿ 2 ರನ್ ಕಲೆಹಾಕಿದರು. ಇದರ ನಂತರ, ಅವರು ಮೊಹಮ್ಮದ್ ಸಿರಾಜ್ ಅವರ ವಿಕೆಟ್ ಪಡೆದು ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಭಾರತ ಗೆಲ್ಲಲು ಕೇವಲ 22 ರನ್‌ಗಳ ಅಗತ್ಯವಿದ್ದಾಗ ಅವರು ಈ ವಿಕೆಟ್ ಪಡೆದು ಟೀಂ ಇಂಡಿಯಾವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 pm, Mon, 14 July 25