10 ವಿಕೆಟ್ ಉರುಳಿಸಿ 10 ಸಾವಿರ ರೂ. ಪಡೆದ ಶೊಯೆಬ್ ಖಾನ್

|

Updated on: Sep 24, 2024 | 3:10 PM

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದ ಮೊದಲ ಬೌಲರ್ ಜಿಮ್ ಲೇಕರ್. 1951 ರಲ್ಲಿ ಬರೆದ ಈ ವಿಶ್ವ ದಾಖಲೆಯನ್ನು 1999 ರಲ್ಲಿ ಅನಿಲ್ ಕುಂಬ್ಳೆ ಸರಿಗಟ್ಟಿದ್ದರು. ಇದಾದ ಬಳಿಕ ನ್ಯೂಝಿಲೆಂಡ್​ನ ಸ್ಪಿನ್ನರ್ ಏಜಾಝ್ ಪಟೇಲ್ ಈ ದಾಖಲೆಯನ್ನು ಪುನರಾವರ್ತಿಸಿದ್ದರು. ಇದೀಗ ದೇಶೀಯ ಅಂಗಳದಲ್ಲಿ ಶೊಯೆಬ್ ಖಾನ್ 10 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

10 ವಿಕೆಟ್ ಉರುಳಿಸಿ 10 ಸಾವಿರ ರೂ. ಪಡೆದ ಶೊಯೆಬ್ ಖಾನ್
Shoaib Khan
Follow us on

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದಿರುವುದು ಕೇವಲ ಮೂವರು ಬೌಲರ್​ಗಳು ಮಾತ್ರ. ಇದಾಗ್ಯೂ ದೇಶೀಯ ಅಂಗಳದಲ್ಲಿ ಕೆಲವರು ಎರಡಂಕಿ ವಿಕೆಟ್​ ಉರುಳಿಸಿ ಗಮನ ಸೆಳೆದಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಶೊಯೆಬ್ ಖಾನ್. ಮುಂಬೈ ಮೂಲದ ಕ್ರಿಕೆಟಿಗ ಶೊಯೆಬ್ ಇದೀಗ 10 ವಿಕೆಟ್​ಗಳನ್ನು ಕಬಳಿಸಿ ಸುದ್ದಿಯಲ್ಲಿದ್ದಾರೆ.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸುವ ಕಂಗ ಕ್ರಿಕೆಟ್ ಲೀಗ್​ನಲ್ಲಿ ಶೊಯೆಬ್ ಖಾನ್ 10 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಮತ್ತು ಜಾಲಿ ಕ್ರಿಕೆಟರ್ಸ್ ನಡುವಿನ ಇ ವಿಭಾಗದ ಪಂದ್ಯದಲ್ಲಿ ಶೊಯೆಬ್ ಈ ಅದ್ಭುತ ಸಾಧನೆ ಮಾಡಿದರು.

ಈ ಪಂದ್ಯದಲ್ಲಿ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿದ ಎಡಗೈ ಸ್ಪಿನ್ನರ್ ಶೊಯೆಬ್, ಜಾಲಿ ಕ್ರಿಕೆಟರ್ಸ್ ಬ್ಯಾಟರ್​ಗಳನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿದರು. ಅಲ್ಲದೆ 17.4 ಓವರ್ ಬೌಲಿಂಗ್ ಮಾಡಿ ತಲಾ 10 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದರು. ಶೊಯೆಬ್ ಖಾನ್ ಅವರ ಈ ಸ್ಪಿನ್ ಮೋಡಿಯಿಂದಾಗಿ ಜಾಲಿ ಕ್ರಿಕೆಟರ್ಸ್ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 67 ರನ್​ಗಳಿಗೆ ಆಲೌಟ್ ಆಯಿತು.

10 ಸಾವಿರ ರೂ. ಬಹುಮಾನ:

ಈ ಪಂದ್ಯದಲ್ಲಿ ಶೊಯೆಬ್ ಖಾನ್ 10 ವಿಕೆಟ್ ಉರುಳಿಸುತ್ತಿದ್ದಂತೆ ಗೌರ್-ಸರಸ್ವತ್ ಕ್ರಿಕೆಟ್ ಕ್ಲಬ್ ತಂಡದ ಮಾಲೀಕರಾದ ರವಿ ಮಾಂಡ್ರೇಕರ್ ಅವರು 10 ಸಾವಿರ ರೂ. ಬಹುಮಾನ ಮೊತ್ತವನ್ನು ನೀಡಿದರು. ಈ ಮೂಲಕ ಯುವ ಸ್ಪಿನ್ನರ್ ಸಾಧನೆಯನ್ನು ಪ್ರೋತ್ಸಾಹಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ ಹೊಸ ಚರಿತ್ರೆ: ಪೂರನ್ ಪವರ್​ಗೆ ಹಳೆಯ ದಾಖಲೆ ಉಡೀಸ್

ಅಂದಹಾಗೆ ಕಂಗ ಕ್ರಿಕೆಟ್ ಲೀಗ್​ನಲ್ಲಿ ಸಚಿನ್ ತೆಂಡೂಲ್ಕರ್ ಕೂಡ ಆಡಿದ ಇತಿಹಾಸವಿದೆ. ಹೀಗಾಗಿ ಇದೀಗ 10 ವಿಕೆಟ್​ಗಳೊಂದಿಗೆ ಗಮನ ಸೆಳೆದಿರುವ ಶೊಯೆಬ್ ಖಾನ್ ಮುಂದೊಂದು ದಿನ ರಣಜಿ ಅಥವಾ ಭಾರತದ ಪರ ಕಣಕ್ಕಿಳಿದರೂ ಅಚ್ಚರಿಪಡಬೇಕಿಲ್ಲ.

ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 10 ವಿಕೆಟ್ ಪಡೆದ ಬೌಲರ್​ಗಳು:

ಒಂದು ಇನ್ನಿಂಗ್ಸ್‌ನಲ್ಲಿ 10 ವಿಕೆಟ್‌ಗಳನ್ನು ಪಡೆದ ಬೌಲರ್‌ಗಳು ವರ್ಷ
ಜಿಮ್ ಲೇಕರ್ (ಇಂಗ್ಲೆಂಡ್) 1956
ಅನಿಲ್ ಕುಂಬ್ಳೆ (ಭಾರತ) 1999
ಏಜಾಝ್ ಪಟೇಲ್ (ನ್ಯೂಝಿಲೆಂಡ್) 2021