ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ತಂಡವನ್ನು ಮುನ್ನಡೆಸುತ್ತಿರುವ ಶ್ರೇಯಸ್ ಅಯ್ಯರ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಇಂದು ನಡೆದ ಗೋವಾ ವಿರುದ್ಧದ ಪಂದ್ಯದಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆಗರೆದ ಅಯ್ಯರ್ ಕೇವಲ 57 ಎಸೆತಗಳಲ್ಲಿ 11 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ಸಹಿತ ಅಜೇಯ 130 ರನ್ ಕಲೆಹಾಕಿದರು. ಅಯ್ಯರ್ ಅವರ ಈ ಸ್ಫೋಟಕ ಇನ್ನಿಂಗ್ಸ್ನಿಂದಾಗಿ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 250 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಗೋವಾ ತಂಡ ಗೆಲುವಿಗಾಗಿ ಹೋರಾಟ ನೀಡಿತ್ತಾದರೂ 26 ರನ್ಗಳಿಂದ ಸೋಲೊಪ್ಪಿಕೊಳ್ಳಬೇಕಾಯಿತು.
ಪಂದ್ಯದಲ್ಲಿ ಟಾಸ್ ಗೆದ್ದ ಗೋವಾ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡಕ್ಕೆ ಮೊದಲ ವಿಕೆಟ್ಗೆ ಕೇವಲ 9 ರನ್ಗಳ ಜೊತೆಯಾಟ ಸಿಕ್ಕಿತು. ಆಂಗ್ಕ್ರಿಶ್ ರಘುವಂಶಿ 6 ರನ್ ಬಾರಿಸಿ ಔಟಾದರು. ಆ ಬಳಿಕ ಜೊತೆಯಾದ ಪೃಥ್ವಿ ಶಾ ಹಾಗೂ ಶ್ರೇಯಸ್ ಉತ್ತಮ ಜೊತೆಯಾಟ ಕಟ್ಟಿದರು. ಈ ವೇಳೆ ಪೃಥ್ವಿ 33 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರೆ, ನಾಯಕ ಶ್ರೇಯಸ್ ಮಾತ್ರ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅಯ್ಯರ್ಗೆ ಶಂಸ್ ಮುಲಾನಿ (42) ಅವರಿಂದ ಉತ್ತಮ ಜೊತೆಯಾಟವೂ ಸಿಕ್ಕಿತು. ಹೀಗಾಗಿ ತಂಡ 250 ರನ್ ಕಲೆಹಾಕಲು ಸಾಧ್ಯವಾಯಿತು.
ಈ ಗುರಿ ಬೆನ್ನಟ್ಟಿದ ಗೋವಾ ಕೂಡ ಉತ್ತಮ ಹೋರಾಟ ನೀಡಿತು. ಆದಾಗ್ಯೂ ತಂಡಕ್ಕೆ ಮುಂಬೈ ನೀಡಿದ್ದ ಬೃಹತ್ ಮೊತ್ತ ಬೆನ್ನಟ್ಟಲು ಸಾಧ್ಯವಾಗಲಿಲ್ಲ. ತಂಡದ ಪರ ಆರಂಭಿಕ ಇಶಾನ್ ಗಡೇಕರ್ 16 ಎಸೆತಗಳಲ್ಲಿ 40 ರನ್ಗಳ ಕಾಣಿಕೆ ನೀಡಿದರೆ, ಮಾಜಿ ಆರ್ಸಿಬಿ ಆಟಗಾರ ಸುಯಶ್ ಪ್ರಭುದೇಸಾಯಿ 52 ರನ್ಗಳ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ವಿಕಾಶ್ ಕನ್ವರ್ ಸಿಂಗ್ ಅಜೇಯ 47 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಗೋವಾ ತಂಡ 8 ವಿಕೆಟ್ ನಷ್ಟಕ್ಕೆ 224 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
ಐಪಿಎಲ್ ಹರಾಜಿಗೂ ಮುನ್ನ ಶ್ರೇಯಸ್ ಅಯ್ಯರ್ ಬಿರುಸಿನ ಶತಕ ಸಿಡಿಸಿರುವುದು ಅವರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ. ಏಕೆಂದರೆ ನಾಯಕತ್ವ ಸ್ಥಾನದ ಪ್ರಮುಖ ಆಕಾಂಕ್ಷಿಯಾಗಿರುವ ಅಯ್ಯರ್ ಇದೀಗ ಯಾವ ತಂಡ ಸೇರಿದರೂ ಅವರಿಗೆ ನಾಯಕತ್ವ ಸಿಗುವುದು ಖಚಿತವಾಗಿದೆ. ಅಲ್ಲದೆ ಅವರ ನಾಯಕತ್ವದಲ್ಲಿ ಕಳೆದ ಬಾರಿ ಕೆಕೆಆರ್ ಪ್ರಶಸ್ತಿಯನ್ನು ಸಹ ಗೆದ್ದುಕೊಂಡಿತು. ಹೀಗಾಗಿ ಅಯ್ಯರ್ ಅವರನ್ನು ಖರೀದಿಸಲು ಹಲವು ತಂಡಗಳು ಜಿದ್ದಿಗೆ ಬೀಳುವುದು ಖಚಿತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ