ಭಾರತ ಹಾಗೂ ನ್ಯೂಜಿಲೆಂಡ್ (India vs New Zealand ) ನಡುವಿನ 3 ಪಂದ್ಯಗಳ ಏಕದಿನ ಸರಣಿ ಮಳೆಯ ಆಟದೊಂದಿಗೆ ಅಂತ್ಯಗೊಂಡಿದೆ. ಸರಣಿಯ ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದ್ದು, ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಕಿವೀಸ್ ಪಡೆ ಸರಣಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಸರಣಿ ಸೋಲಿನೊಂದಿಗೆ ಟೀಂ ಇಂಡಿಯಾ (Team India) ತವರಿಗೆ ವಾಪಸ್ಸಾಗಿದ್ದು ಭಾನುವಾರದಿಂದ ಆರಂಭವಾಗಬೇಕಿರುವ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ತಯಾರಿ ನಡೆಸಿದೆ. ಈ ನಡುವೆ ಐಸಿಸಿ ಏಕದಿನ ಶ್ರೇಯಾಂಕವನ್ನು (ICC ODI Rankings) ಬಿಡುಗಡೆ ಮಾಡಿದ್ದು, ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತೀಯ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಶುಭ್ಮನ್ ಗಿಲ್ (Shreyas Iyer and Shubman Gill) ಹಾಗೂ ಸಂಜು ಸ್ಯಾಮ್ಸನ್ (Sanju Samson) ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.
10 ಸ್ಥಾನ ಮೇಲಕ್ಕೇರಿದ ಸಂಜು
ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಆರು ಸ್ಥಾನಗಳ ಏರಿಕೆ ಕಂಡು 27ನೇ ಸ್ಥಾನಕ್ಕೆ ಬಂದು ತಲುಪಿದರೆ, ಶುಭಮನ್ ಗಿಲ್ ಮೂರು ಸ್ಥಾನ ಮೇಲೇರಿ 34ನೇ ಶ್ರೇಯಾಂಕ ಪಡೆದುಕೊಂಡಿದ್ದಾರೆ. ಹಾಗೆಯೇ ಏಕದಿನ ಸರಣಿಯಲ್ಲಿ ಒಂದೇ ಒಂದು ಪಂದ್ಯವನ್ನಾಡುವ ಅವಕಾಶ ಗಿಟ್ಟಿಸಿಕೊಂಡಿದ್ದ ಸಂಜು ಸ್ಯಾಮ್ಸನ್ ಈ ಪಂದ್ಯದಲ್ಲಿ 36 ರನ್ ಬಾರಿಸಿದ್ದರು. ಈ ಮೂಲಕ ಶ್ರೇಯಾಂಕದಲ್ಲಿ 10 ಸ್ಥಾನ ಮುಂಬಡ್ತಿ ಪಡೆದಿರುವ ಸಂಜು 82 ನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ. ಕಿವೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಮುಂದಾಳತ್ವವಹಿಸಿ ಮೊದಲ ಏಕದಿನ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಶಿಖರ್ ಧವನ್ ಉಳಿದ ಇನ್ನೇರಡು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ಹೀಗಾಗಿ ಧವನ್ ನೂತನ ಪಟ್ಟಿಯಲ್ಲಿ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ.
ಇದನ್ನೂ ಓದಿ: IND vs NZ: ಸಂಜು ಸ್ಯಾಮ್ಸನ್‌ಗಿಲ್ಲ ಸ್ಥಾನ! ಕಿವೀಸ್ ತಂಡದಲ್ಲಿ ಒಂದು ಬದಲಾವಣೆ; ಹೀಗಿವೆ ಉಭಯ ತಂಡಗಳು
ಜಾರಿದ ಕೊಹ್ಲಿ- ರೋಹಿತ್
ಹಾಗೆಯೇ ಕಿವೀಸ್ ವಿರುದ್ಧದ ಏಕದಿನ ಸರಣಿಯಿಂದ ದೂರ ಉಳಿದಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ತಲಾ ಒಂದೊಂದು ಸ್ಥಾನ ಕುಸಿದು ಕ್ರಮವಾಗಿ 8 ಮತ್ತು 9ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಏಕದಿನ ಸರಣಿಯಲ್ಲಿ 129 ರನ್ ಗಳಿಸಿದ್ದ ಶ್ರೇಯಸ್ ಅಯ್ಯರ್ 27ನೇ ರ‍್ಯಾಂಕ್‌ಗೆ ಜಿಗಿದರೆ, 108 ರನ್ ಗಳಿಸಿ 3 ಸ್ಥಾನ ಮೇಲೇರಿದ ಶುಭಮನ್ ಗಿಲ್ 34ನೇ ಕ್ರಮಾಂಕದಲ್ಲಿ ನಿಂತಿದ್ದಾರೆ. ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳಾದ ಟಾಮ್ ಲೇಥಮ್, ಕೇನ್ ವಿಲಿಯಮ್ಸನ್ ಕೂಡ ತಮ್ಮ ಸ್ಥಾನವನ್ನು ಸುಧಾರಿಸಿದ್ದಾರೆ. ಮೊದಲ ಏಕದಿನ ಪಂದ್ಯದಲ್ಲಿ ತಂಡ 300 ರನ್‌ಗಳ ಗುರಿಯನ್ನು ದಾಟುವಲ್ಲಿ ಲೇಥಮ್ ಪ್ರಮುಖ ಪಾತ್ರ ವಹಿಸಿದ್ದು ಗೊತ್ತೇ ಇದೆ. ಈ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಿದ್ದ ಲೇಥಮ್ 104 ಎಸೆತಗಳಲ್ಲಿ 145 ರನ್ ಬಾರಿಸಿ ಮಿಂಚಿದ್ದರು. ಈ ಅದ್ಭುತ ಆಟಕ್ಕೆ ಉಡುಗೊರೆ ಪಡೆದಿರುವ ಲೇಥಮ್ ನೂತನ ಶ್ರೇಯಾಂಕ ಪಟ್ಟಿಯಲ್ಲಿ 18ನೇ ಸ್ಥಾನಕ್ಕೆ ತಲುಪಿದ್ದಾರೆ.
ಕಿವೀಸ್ ಆಟಗಾರರ ಭರ್ಜರಿ ಭೇಟೆ
ಹಾಗೆಯೇ ನಾಯಕ ವಿಲಿಯಮ್ಸನ್ ಕೂಡ ಮೊದಲ ಏಕದಿನ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ನೀಡಿ 98 ಎಸೆತಗಳಲ್ಲಿ ಅಜೇಯ 94 ರನ್ ಗಳಿಸಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಕೇನ್ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬೌಲಿಂಗ್ ಶ್ರೇಯಾಂಕದಲ್ಲಿ ಮುಂಬಡ್ತಿ ಪಡೆದಿರುವ ನ್ಯೂಜಿಲೆಂಡ್ ಬೌಲರ್ ಲಾಕಿ ಫರ್ಗುಸನ್ ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 59ರನ್ ನೀಡಿ 3 ವಿಕೆಟ್ ಪಡೆದಿದ್ದರು. ಈಗ ಶ್ರೇಯಾಂಕದಲ್ಲಿ 3 ಸ್ಥಾನಗಳ ಏರಿಕೆಯೊಂದಿಗೆ 32 ನೇ ಸ್ಥಾನನ್ನು ಪಡೆದುಕೊಂಡಿದ್ದಾರೆ. ಮ್ಯಾಟ್ ಹೆನ್ರಿ ಕೂಡ ನಾಲ್ಕು ಸ್ಥಾನ ಮೇಲೇರಿ ಐದನೇ ಸ್ಥಾನಕ್ಕೆ ಬಂದು ತಲುಪಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:54 am, Thu, 1 December 22