
ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ತಂಡವು, ಅಫ್ಘಾನಿಸ್ತಾನವನ್ನು ((India vs Afghanistan) ) 170 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ಶುಭ್ಮನ್ ಗಿಲ್ ((Shubman Gill)) ನಾಯಕನಾಗಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 402 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 44.3 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಬೌಲಿಂಗ್‌ನಲ್ಲಿ ಮಿಂಚಿದ ಗುರ್ನೂರ್ ಬ್ರಾರ್ ಮತ್ತು ಅರ್ಷದೀಪ್ ಸಿಂಗ್ ತಲಾ ಮೂರು ವಿಕೆಟ್‌ಗಳನ್ನು ಪಡೆದರೆ, ಪ್ರಿನ್ಸ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ರೋಹಿತ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಕೇವಲ 4 ರನ್‌ಗಳಿಗೆ ಔಟಾದರು. ಆದರೆ ಆ ಬಳಿಕ ಜೊತೆಯಾದ ರೋಹಿತ್ ಶರ್ಮಾ ಮತ್ತು ನಾಯಕ ಶುಭ್ಮನ್ ಗಿಲ್ ಅರ್ಧಶತಕದ ಜೊತೆಯಾಟವನ್ನಾಡುವ ಮೂಲಕ ಇನ್ನಿಂಗ್ಸ್ ಸ್ಥಿರಗೊಳಿಸಿದರು. ಆದಾಗ್ಯೂ ರೋಹಿತ್ ಶರ್ಮಾ ಕೇವಲ 2 ರನ್‌ಗಳಿಂದ ಅರ್ಧಶತಕ ವಂಚಿತರಾಗಿ, 39 ಎಸೆತಗಳಲ್ಲಿ 48 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ರೋಹಿತ್ ಔಟಾದ ನಂತರ ಬಂದ ಇಶಾನ್ ಕಿಶನ್, ಶುಭ್ಮನ್ ಗಿಲ್ ಜೊತೆಗೂಡಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಇಬ್ಬರೂ ಮೂರನೇ ವಿಕೆಟ್‌ಗೆ 141 ಎಸೆತಗಳಲ್ಲಿ 224 ರನ್‌ಗಳ ಜೊತೆಯಾಟವನ್ನಾಡಿದರು. ಇದೇ ವೇಳೆ ಗಿಲ್ 77 ಎಸೆತಗಳಲ್ಲಿ ಶತಕ ಪೂರೈಸಿದರೆ, ಇತ್ತ ಇಶಾನ್ ಕಿಶನ್ ಕೇವಲ 71 ಎಸೆತಗಳಲ್ಲಿ ಶತಕ ಬಾರಿಸಿದರು. ಇಶಾನ್ ಕಿಶನ್ 125 ರನ್‌ಗಳಿಗೆ ಔಟಾದರೆ, ಗಿಲ್ 154 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಗಿಲ್ ವಿಕೆಟ್ ನಂತರ ನಂತರ ತಂಡದ ಇನ್ನಿಂಗ್ಸ್ ಕುಸಿಯಿತು. ತಂಡವು ತನ್ನ ಕೊನೆಯ ಎಂಟು ವಿಕೆಟ್‌ಗಳನ್ನು 82 ರನ್‌ಗಳಿಗೆ ಕಳೆದುಕೊಂಡಿತು. ಒಂದು ಹಂತದಲ್ಲಿ, ಭಾರತ ತಂಡ 450 ತಲುಪುತ್ತದೆ ಎಂದು ತೋರುತ್ತಿತ್ತು, ಆದರೆ 402 ರನ್ ಕಲೆಹಾಕಲಷ್ಟೇ ಶಕ್ತವಾಯಿತು.
IND vs AFG: ನಾಯಕನಾಗಿ ಮೊದಲ ಏಕದಿನ ಶತಕ ಸಿಡಿಸಿದ ಶುಭ್ಮನ್ ಗಿಲ್
402 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ ಜದ್ರಾನ್ ಉತ್ತಮ ಆರಂಭ ನೀಡಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 52 ರನ್‌ಗಳ ಪಾಲುದಾರಿಕೆಯನ್ನು ನೀಡಿದರು. ರಹಮಾನುಲ್ಲಾ 41 ರನ್‌ಗಳಿಗೆ ಔಟಾದರೆ, ಇಬ್ರಾಹಿಂ ಜದ್ರಾನ್ 21 ರನ್‌ಗಳಿಗೆ ಸುಸ್ತಾದರು. ಸೆಡಿಕುಲ್ಲಾ ಅಟಲ್ ಅವರ ಆಟವೂ 42 ರನ್‌ಗಳಿಗೆ ಕೊನೆಗೊಂಡಿತು. ಒಂದೆಡೆ ತಂಡದ ಪರ ರಹಮತ್ ಶಾ ಹೋರಾಟದ ಇನ್ನಿಂಗ್ಸ್ ಆಡುತ್ತಿದ್ದರೆ, ಇತ್ತ ದರ್ವಿಶ್ ರಸೂಲ್ ಗಾಯದಿಂದ ರಿಟೈರ್ಡ್ ಹರ್ಟ್ ಆಗಿ ಡಗೌಟ್ ಸೇರಿಕೊಂಡರು. ಆ ಬಳಿಕ ಬಂದ ಹಶ್ಮತುಲ್ಲಾ ಶಾಹಿದಿ 4 ರನ್‌ಗಳಿಸಲಷ್ಟೇ ಶಕ್ತರಾದರೆ, ನಂಗಿಯಾಲಿಯಾ ಖರೋಟಿ 6, ರಶೀದ್ ಖಾನ್ 12 ಮತ್ತು ಎಎಮ್ ಗಜನ್‌ಫರ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ರಹಮತ್ ಶಾ 89 ಎಸೆತಗಳಲ್ಲಿ 79 ರನ್‌ಗಳ ಹೋರಾಟದ ಇನ್ನಿಂಗ್ಸ್ ಮಾಡಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.
Published On - 9:42 pm, Wed, 17 June 26