ರೋಹಿತ್ ಶರ್ಮಾಗೆ ಅಣಕಿಸಿದ ಜೇಡನ್ ಸೀಲ್ಸ್‌ ಬೆಂಡೆತ್ತಿದ ಕೊಹ್ಲಿ- ಗಿಲ್ ಜೋಡಿ!

ಕ್ರಿಕೆಟ್ ಮೈದಾನದಲ್ಲಿ ಟೀಮ್ ಇಂಡಿಯಾದ ಸೀನಿಯರ್ ಆಟಗಾರರಿಗೆ ಯಾರಾದರೂ ಅಪಮಾನ ಮಾಡಿದರೆ, ಜೂನಿಯರ್ಸ್ ಸುಮ್ಮನೆ ಕೂರುವುದಿಲ್ಲ ಎಂಬುದಕ್ಕೆ ಗುವಾಹಟಿ ಏಕದಿನ ಪಂದ್ಯವೇ ಸಾಕ್ಷಿ! ಹಿಟ್​ಮ್ಯಾನ್ ರೋಹಿತ್ ಶರ್ಮಾ ಅವರ ಶತಕದ ಸಂಭ್ರಮವನ್ನು ಅಣಕಿಸಿದ ವೆಸ್ಟ್ ಇಂಡೀಸ್ ಬೌಲರ್‌ಗೆ, ಶುಭ್​ಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಮೈದಾನದಲ್ಲೇ ಬ್ಯಾಟ್ ಮೂಲಕವೇ ಉತ್ತರ ನೀಡಿದ್ದಾರೆ.

ರೋಹಿತ್ ಶರ್ಮಾಗೆ ಅಣಕಿಸಿದ ಜೇಡನ್ ಸೀಲ್ಸ್‌ ಬೆಂಡೆತ್ತಿದ ಕೊಹ್ಲಿ- ಗಿಲ್ ಜೋಡಿ!
Gill - Virat - Seals
Image Credit source: GettyImages

Updated on: Oct 01, 2026 | 11:50 AM

ವೆಸ್ಟ್ ಇಂಡೀಸ್ ವಿರುದ್ಧ ಗುವಾಹಟಿಯ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ 2ನೇ ಏಕದಿನ ಪಂದ್ಯವು ಹಲವು ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ 101 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದರು. ಆದರೆ, ಶತಕದ ಬೆನ್ನಲ್ಲೇ ಅವರು ಜೇಡನ್ ಸೀಲ್ಸ್ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ವಿಕೆಟ್ ಒಪ್ಪಿಸಿದರು. ರೋಹಿತ್ ಔಟಾಗಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾಗ, ಹಿಟ್‌ಮ್ಯಾನ್ ಅವರ ವಿಭಿನ್ನ ಶತಕದ ಸಂಭ್ರಮಾಚರಣೆಯನ್ನು ಜೇಡನ್ ಸೀಲ್ಸ್ ಮೈದಾನದಲ್ಲೇ ಅಣಕಿಸುವ ಮೂಲಕ ಲೇವಡಿ ಮಾಡಿದ್ದರು.

ಏನಿದು ಘಟನೆ?

ಬೃಹತ್ 406 ರನ್‌ಗಳ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಶುಭ್‌ಮನ್ ಗಿಲ್ ಜೋಡಿ 255 ರನ್‌ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿತು. ಈ ಅದ್ಭುತ ಪ್ರದರ್ಶನದ ನಡುವೆ ರೋಹಿತ್ ಶರ್ಮಾ ತಮ್ಮ 35ನೇ ಏಕದಿನ ಶತಕ ಹಾಗೂ 12,000 ರನ್‌ಗಳ ಮೈಲಿಗಲ್ಲನ್ನು ತಲುಪಿದರು. ಶತಕದ ಸಂಭ್ರಮದಲ್ಲಿ ರೋಹಿತ್ ತಮಾಷೆಯಾಗಿ ಕುಂಟುತ್ತಾ ಓಡುವ ಮೂಲಕ ವಿಭಿನ್ನವಾಗಿ ಸಂಭ್ರಮಿಸಿದ್ದರು.

ಆದರೆ, 27ನೇ ಓವರ್‌ನ ಮೊದಲ ಎಸೆತದಲ್ಲಿ ಜೇಡನ್ ಸೀಲ್ಸ್, ರೋಹಿತ್ ಶರ್ಮಾ (101 ರನ್) ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ವಿಕೆಟ್ ಪಡೆದ ಖುಷಿಯಲ್ಲಿ ಸೀಲ್ಸ್, ಔಟಾದ ರೋಹಿತ್ ಶರ್ಮಾ ಅವರತ್ತ ತಿರುಗಿ, ಹಿಟ್​ಮ್ಯಾನ್ ಮಾಡಿದ್ದ ಅದೇ ‘ಕುಂಟುವ’ ಸೆಲೆಬ್ರೇಷನ್ ಅನ್ನು ಅಣಕಿಸಿ ಮೈದಾನದಲ್ಲೇ ಲೇವಡಿ ಮಾಡಿದರು.

ಬೆಂಡೆತ್ತಿದ ಗಿಲ್-ಕೊಹ್ಲಿ!

ರೋಹಿತ್‌ ಶರ್ಮಾಗೆ ಮಾಡಿದ ಈ ಅಪಮಾನವನ್ನು ಕ್ರೀಸ್‌ನಲ್ಲಿದ್ದ ಶುಭ್‌ಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಸಹಿಸಲಿಲ್ಲ. ಸೀಲ್ಸ್ ಎಸೆದ ತಮ್ಮ ಮುಂದಿನ ಓವರ್‌ನಲ್ಲೇ (ಪಂದ್ಯದ 29ನೇ ಓವರ್) ಈ ಜೋಡಿ ರುದ್ರತಾಂಡವವಾಡಿತು. ಸೀಲ್ಸ್ ಬೌಲಿಂಗ್ ಅನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದ ಗಿಲ್ ಮತ್ತು ಕೊಹ್ಲಿ, ಆ ಓವರ್‌ನಲ್ಲಿ ಬರೋಬ್ಬರಿ 25 ರನ್‌ಗಳನ್ನು ಚಚ್ಚಿದರು.

  •  28.1: ಶುಭ್‌ಮನ್ ಗಿಲ್ ಭರ್ಜರಿ ಸಿಕ್ಸರ್ ಬಾರಿಸಿದರು.
  • 28.2: ಗಿಲ್ ಕಡೆಯಿಂದ ಕಣ್ಮನ ಸೆಳೆಯುವ ಆಕರ್ಷಕ ಫೋರ್.
  • 28.3: ಗಿಲ್ ಸಿಂಗಲ್ ರನ್ ಓಡಿದರು.
  •  28.4: ಡೀಪ್​ ಮಿಡ್-ವಿಕೆಟ್​ನತ್ತ ಕೊಹ್ಲಿ ಸಿಕ್ಸರ್ ಸಿಡಿಸಿದರು.
  •  28.5: ಕೊಹ್ಲಿ ಬ್ಯಾಟ್‌ನಿಂದ ಮಿಡ್-ಆಫ್ ಮೇಲಿಂದ ಮತ್ತೊಂದು ಕ್ಲಾಸಿಕ್ ಫೋರ್​.
  • 28.6: ಸ್ಕ್ವೇರ್ ಲೆಗ್ ದಿಕ್ಕಿನಲ್ಲಿ ಕೊಹ್ಲಿ ಬ್ಯಾಟ್​ನಿಂದ ಮತ್ತೊಂದು ಫೋರ್.

ಹೀಗೆ ಜೇಡನ್ ಸೀಲ್ಸ್ ಒಂದೇ ಓವರ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್ ಜೊತೆಗೂಡಿ ಬರೋಬ್ಬರಿ 25 ರನ್ ಚಚ್ಚಿದರು. ಈ ಮೂಲಕ ರೋಹಿತ್ ಶರ್ಮಾ ಅವರನ್ನು ಅಣಕಿಸಿದ್ದಕ್ಕೆ ಸೀಲ್ ವಿರುದ್ಧ ಪ್ರತೀಕಾರ ತೀರಿಸಿಕೊಂಡರು.

ಇದನ್ನೂ ಓದಿ: ಚೇಸಿಂಗ್​ನ ಮಾಸ್ಟರ್ ಪ್ಲ್ಯಾನ್ ಬಿಚ್ಚಿಟ್ಟ ಶುಭ್​ಮನ್ ಗಿಲ್

ಭಾರತಕ್ಕೆ ಅಮೋಘ ಜಯ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ಶುಭ್​​ಮನ್ ಗಿಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್​​ಗಳಲ್ಲಿ 405 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಟೀಮ್ ಇಂಡಿಯಾ ಕೇವಲ 43.3 ಓವರ್​​ಗಳಲ್ಲಿ ಚೇಸ್ ಮಾಡಿ 8 ವಿಕೆಟ್​​ಗಳ ಅಮೋಘ ಜಯ ಸಾಧಿಸಿತು. ಟೀಮ್ ಇಂಡಿಯಾ ಪರ ಶುಭ್​ಮನ್ ಗಿಲ್ ಅಜೇಯ 223 ರನ್ ಬಾರಿಸಿದರೆ, ರೋಹಿತ್ ಶರ್ಮಾ 101 ರನ್​ಗಳ ಕೊಡುಗೆ ನೀಡಿದರು.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us