ಪ್ರಸ್ತುತ ಶ್ರೀಲಂಕಾದಲ್ಲಿ ನಡೆಯುತ್ತಿರುವ ಎರಡು ಟೆಸ್ಟ್ ಪಂದ್ಯಗಳ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಲಂಕಾ ತಂಡವನ್ನು ಪಾಕಿಸ್ತಾನ (Sri Lanka vs Pakistan) ತಂಡ 4 ವಿಕೆಟ್‌ಗಳಿಂದ ಮಣಿಸುವುದರೊಂದಿಗೆ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ತಂಡವನ್ನು ಮಣಿಸುವುದರೊಂದಿಗೆ ಬಾಬರ್ ಪಡೆ ಬರೋಬ್ಬರಿ 365 ದಿನಗಳ ನಂತರ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ 279 ರನ್ ಕಲೆಹಾಕಿದ್ದ ಶ್ರೀಲಂಕಾ, ಬಾಬರ್ (Babar Azam) ಪಡೆಗೆ ಕೇವಲ 131 ರನ್ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಪಾಕ್ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಇಮಾಮ್-ಉಲ್-ಹಕ್ ಅಜೇಯ 50 ರನ್ ಬಾರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡ ಧನಂಜಯ ಡಿ ಸಿಲ್ವ ಅವರ ಶತಕ (122 ರನ್) ಹಾಗೂ ಏಂಜಲೋ ಮ್ಯಾಥ್ಯೂಸ್ ಅವರ ಅರ್ಧಶತಕದ ನೆರವಿನಿಂದ ಮೊದಲ ಇನ್ನಿಂಗ್ಸ್‌ನಲ್ಲಿ 312 ರನ್ ಕಲೆಹಾಕಿತು. ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಟಾಪ್ ಆರ್ಡರ್ ಕೈಕೊಟ್ಟಿತು. ತಂಡದ ನಾಯಕ ಬಾಬರ್ ಅಜಮ್ ಸೇರಿದಂತೆ ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಸೌದ್ ಶಕೀಲ್ ಅಜೇಯ 202 ರನ್ ಕಲೆಹಾಕಿದರು. ಇವರೊಂದಿಗೆ ಸಲ್ಮಾನ್ ಅಲಿ ಅಘಾ 83 ರನ್ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಆಟದಿಂದಾಗಿ ಪಾಕ್ ಪಡೆ 461 ರನ್ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿತು.
Ashes 2023: 600 ಟೆಸ್ಟ್ ವಿಕೆಟ್; ಆ್ಯಶಸ್ನಲ್ಲಿ ಮತ್ತೊಂದು ದಾಖಲೆ ಬರೆದ ಸ್ಟುವರ್ಟ್ ಬ್ರಾಡ್..!
149 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾಕ್ಕೆ ನಿಶಾನ್ ಮಧುಶಂಕ ಅರ್ಧಶತಕ ಬಾರಿಸುವದರೊಂದಿಗೆ ಉತ್ತಮ ಆರಂಭ ನೀಡಿದರೆ, ಮಧ್ಯಮ ಕ್ರಮಾಂಕದಲ್ಲಿ ಧನಂಜಯ ಡಿ ಸಿಲ್ವ 83 ರನ್ ಬಾರಿಸಿ ಮತ್ತೊಮ್ಮೆ ತಂಡದ ಕೈ ಹಿಡಿದರು. ಇನ್ನು ಕೆಳಕ್ರಮಾಂಕದಲ್ಲಿ ರಮೇಶ್ ಮೆಂಡಿಸ್ ಕೂಡ 42 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ಮತ್ತ್ಯಾರಿಂದಲೂ ಅಂತಾ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಬರಲಿಲ್ಲ. ಹೀಗಾಗಿ 279 ರನ್ಗಳಿಗೆ ಲಂಕಾ ತನ್ನ ಎರಡನೇ ಇನ್ನಿಂಗ್ಸ್ ಮುಗಿಸಿತು.
ಮೊದಲ ಇನ್ನಿಂಗ್ಸ್ ಮುನ್ನಡೆಯಿಂದಾಗಿ ಗೆಲುವಿಗೆ 131 ರನ್ಗಳ ಟಾರ್ಗೆಟ್ ಪಡೆದ ಪಾಕಿಸ್ತಾನ ಐದನೇ ದಿನದ ಮೊದಲ ಸೆಷನ್ನಲ್ಲಿಯೇ ಗೆಲುವಿನ ನಗೆ ಬೀರಿತು. ಆದರೂ ಎರಡನೇ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ರನ್ ಗಳಿಸಲು ಸಾಕಷ್ಟು ಪ್ರಯಾಸಪಡಬೇಕಾಯಿತು. ಅದರಲ್ಲೂ ಲಂಕಾದ ಎಡಗೈ ಸ್ಪಿನ್ನರ್ ಶೆಹನ್ ಜಯಸೂರ್ಯ ಪಾಕ್ ಪಡೆಯನ್ನು ತುಂಬಾ ಕಾಡಿದರು. ಜಯಸೂರ್ಯ ಅಬ್ದುಲ್ಲಾ ಶಫೀಕ್, ಶಾನ್ ಮಸೂದ್, ಬಾಬರ್ ಅಜಮ್, ಸರ್ಫರಾಜ್ ಅಹ್ಮದ್ಗೆ ಪೆವಿಲಿಯನ್ ಹಾದಿ ತೋರಿಸಿ, ಪಾಕ್ ಪಡೆಯನ್ನು ಸೋಲಿನ ದವಡೆಗೆ ತಳ್ಳಿದರು. ಆದರೆ ಗುರಿ ಚಿಕ್ಕದಾಗಿದ್ದರಿಂದ ಬಾಬರ್ ತಂಡಕ್ಕೆ ಗೆಲುವು ದೊರೆಯಿತು. ಇನ್ನು ಪಾಕ್ ತಂಡದ ಪರ ಇಮಾಮ್ ಉಲ್ ಹಕ್ ಅರ್ಧಶತಕ ಸಿಡಿಸಿ ಮಿಂಚಿದರೆ, ಸೌದ್ ಶಕೀಲ್ 30ರನ್ಗಳ ಕೊಡುಗೆ ನೀಡಿದರು.
July 20th, 2022 – 146th Test win for Pakistan
July 20th, 2023 – 147th Test win for Pakistan
The wait is over, Pakistan won a Test match after a gap of 365 days. pic.twitter.com/RrDQ9lPjWt
— Johns. (@CricCrazyJohns) July 20, 2023
ವಾಸ್ತವವಾಗಿ ಜುಲೈ 20, 2022 ರಂದು ಪಾಕಿಸ್ತಾನ ತಂಡವು ತನ್ನ 146 ನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿತ್ತು. ಆದರೆ ತನ್ನ 147 ನೇ ಪಂದ್ಯವನ್ನು ಗೆಲ್ಲಲು ಪಾಕ್ ಪಡೆಗೆ 365 ದಿನಗಳು ಬೇಕಾಯಿತು. ಪಾಕಿಸ್ತಾನವು ಒಂದು ವರ್ಷದ ಹಿಂದೆ ಗಾಲೆಯ ಇದೇ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು 4 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಕಾಕತಾಳಿಯವೆಂಬಂತೆ 1 ವರ್ಷದ ಬಳಿಕ ಅದೇ ಮೈದಾನದಲ್ಲಿ ಪಾಕ್ ಪಡೆ 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:16 pm, Thu, 20 July 23