ಸೈಯದ್ ಮುಷ್ತಾಕ್ ಅಲಿ (SMAT 2022) ಟೂರ್ನಿಯ ರೌಂಡ್-1 ನಲ್ಲಿ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶದ ಆಟಗಾರ ವೆಂಕಟೇಶ್ ಅಯ್ಯರ್ (Venkatesh Iyer) ಅತ್ಯಾಧ್ಬುತ ಆಲ್ರೌಂಡರ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ರಾಜ್ಕೋಟ್ನಲ್ಲಿ ನಡೆದ ಈ ಪಂದ್ಯದಲ್ಲಿ ರಾಜಸ್ಥಾನ್ ಹಾಗೂ ಮಧ್ಯಪ್ರದೇಶ ತಂಡಗಳು ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಮಧ್ಯಪ್ರದೇಶ ತಂಡದ ನಾಯಕ ಪಾರ್ಥ್ ಸಹಾನಿ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮಧ್ಯಪ್ರದೇಶದ ಆರಂಭಿಕರಾದ ಚಂಚಲ್ ರಾಥೋಡ್ ಹಾಗೂ ಕುಲ್ದೀಪ್ ಗೇಹಿ ನಾಯಕನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಮೊದಲ ವಿಕೆಟ್ಗೆ 64 ರನ್ಗಳ ಜೊತೆಯಾಟವಾಡುವ ಮೂಲಕ ತಂಡಕ್ಕೆ ಭರ್ಜರಿ ಆರಂಭಕ್ಕೆ ಒದಗಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವೆಂಕಟೇಶ್ ಅಯ್ಯರ್ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು ಎಂದರೆ ತಪ್ಪಾಗಲಾರದು. ಕಣಕ್ಕಿಳಿಯುತ್ತಿದ್ದಂತೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೆಂಕಿ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಕೇವಲ 31 ಎಸೆತಗಳಲ್ಲಿ ಅಜೇಯ 62 ರನ್ ಚಚ್ಚಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಮಧ್ಯಪ್ರದೇಶ ತಂಡವು 5 ವಿಕೆಟ್ ನಷ್ಟಕ್ಕೆ 173 ರನ್ ಕಲೆಹಾಕಿತು.
ಈ ಬೃಹತ್ ಗುರಿ ಬೆನ್ನತ್ತಿದ ರಾಜಸ್ಥಾನ್ ತಂಡಕ್ಕೆ ಮತ್ತೆ ಮುಳುವಾಗಿದ್ದು ವೆಂಕಟೇಶ್ ಅಯ್ಯರ್ ಎಂಬುದು ವಿಶೇಷ. ಬ್ಯಾಟಿಂಗ್ ಬಳಿಕ ಬೌಲಿಂಗ್ನಲ್ಲೂ ಪರಾಕ್ರಮ ಮೆರೆದ ಅಯ್ಯರ್ ರಾಜಸ್ಥಾನ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು.
ಇದಾಗ್ಯೂ ಸಲ್ಮಾನ್ ಖಾನ್ ಅವರ 44 ರನ್ಗಳಿಂದ ಚೇತರಿಸಿಕೊಂಡ ರಾಜಸ್ಥಾನ್ ತಂಡಕ್ಕೆ ಮತ್ತೆ ವೆಂಕಿ ಆಘಾತ ನೀಡಿದರು. ಸಲ್ಮಾನ್ರನ್ನು ಔಟ್ ಮಾಡುವ ಮೂಲಕ ನಿರ್ಣಾಯಕ ಹಂತದಲ್ಲಿ ವೆಂಕಟೇಶ್ ಅಯ್ಯರ್ ತಂಡಕ್ಕೆ ಯಶಸ್ಸು ತಂದುಕೊಟ್ಟರು.
ಅಂತಿಮವಾಗಿ ವೆಂಕಟೇಶ್ ಅಯ್ಯರ್ ದಾಳಿಗೆ ನಲುಗಿದ ರಾಜಸ್ಥಾನ್ ತಂಡವು 19.2 ಓವರ್ಗಳಲ್ಲಿ 135 ರನ್ಗಳಿಗೆ ಸರ್ವಪತನ ಕಂಡಿತು. ಮಧ್ಯಪ್ರದೇಶ ತಂಡದ ಪರ 4 ಓವರ್ಗಳಲ್ಲಿ ಕೇವಲ 20 ರನ್ ನೀಡುವ ಮೂಲಕ ವೆಂಕಟೇಶ್ ಅಯ್ಯರ್ 6 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಮಧ್ಯಪ್ರದೇಶ ಪ್ಲೇಯಿಂಗ್ 11: ಪಾರ್ಥ್ ಸಹಾನಿ (ನಾಯಕ) , ಕುಲದೀಪ್ ಗೇಹಿ , ಶುಭಂ ಎಸ್ ಶರ್ಮಾ , ವೆಂಕಟೇಶ್ ಅಯ್ಯರ್ , ಅಕ್ಷತ್ ರಘುವಂಶಿ , ಕುಮಾರ್ ಕಾರ್ತಿಕೇಯ , ಪುನೀತ್ ದಾತೆ , ಅಶ್ವಿನ್ ದಾಸ್ , ಕುಲದೀಪ್ ಸೇನ್ , ಕಮಲ್ ತ್ರಿಪಾಠಿ , ಚಂಚಲ್ ರಾಥೋರ್ , ಅಮನ್ ಭಡೋರಿಯಾ
ರಾಜಸ್ಥಾನ್ ಪ್ಲೇಯಿಂಗ್ 11: ಅಶೋಕ್ ಮೆನಾರಿಯಾ (ನಾಯಕ) , ಯಶ್ ಕೊಠಾರಿ , ಸಲ್ಮಾನ್ ಖಾನ್ , ಮಹಿಪಾಲ್ ಲೊಮ್ರೋರ್ , ಅರ್ಜಿತ್ ಗುಪ್ತಾ , ಕಮಲೇಶ್ ನಾಗರಕೋಟಿ , ಮಾನವ್ ಸುತಾರ್ , ರಾಹುಲ್ ಚಹರ್ , ಕುನಾಲ್ ಸಿಂಗ್ ರಾಥೋರ್, ಅನಿಕೇತ್ ಚೌಧರಿ , ತನ್ವೀರ್ ಉಲ್-ಹಕ್ , ಅನಿರುದ್ ಸಿಂಗ್.