ಏಕದಿನ ವಿಶ್ವಕಪ್​ಗೆ ಸೌತ್ ಆಫ್ರಿಕಾ ತಂಡ ಪ್ರಕಟ: ನಿವೃತ್ತಿ ಘೋಷಿಸಿದ ಡಿಕಾಕ್

| Updated By: ಝಾಹಿರ್ ಯೂಸುಫ್

Updated on: Sep 05, 2023 | 4:42 PM

South Africa Squad: ಸೌತ್ ಆಫ್ರಿಕಾ ಪರ 140 ಏಕದಿನ ಪಂದ್ಯಗಳನ್ನಾಡಿರುವ ಕ್ವಿಂಟನ್ ಡಿಕಾಕ್ 5966 ರನ್ ಕಲೆಹಾಕಿದ್ದಾರೆ. ಈ ವೇಳೆ 17 ಶತಕ ಹಾಗೂ 29 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ ಮೂಲಕ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ.

ಏಕದಿನ ವಿಶ್ವಕಪ್​ಗೆ ಸೌತ್ ಆಫ್ರಿಕಾ ತಂಡ ಪ್ರಕಟ: ನಿವೃತ್ತಿ ಘೋಷಿಸಿದ ಡಿಕಾಕ್
South Africa
Follow us on

ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗವನ್ನು ಟೆಂಬಾ ಬವುಮಾ ಮುನ್ನಡೆಸಲಿದ್ದಾರೆ. ಇನ್ನು ತಂಡದಲ್ಲಿ ಸ್ಟಾರ್ ಆಟಗಾರರಾಗಿ ಕ್ವಿಂಟನ್ ಡಿಕಾಕ್, ಹೆನ್ರಿಕ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್ ಹಾಗೂ ಡೇವಿಡ್ ಮಿಲ್ಲರ್ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಬೌಲಿಂಗ್ ವಿಭಾಗದಲ್ಲಿ ಲುಂಗಿ ಎನ್​ಗಿಡಿ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ಆಯ್ಕೆಯಾಗಿದ್ದಾರೆ. ವಿಶೇಷ ಎಂದರೆ ಈ ಎಲ್ಲಾ ಆಟಗಾರರು ಈಗಾಗಲೇ ಐಪಿಎಲ್​ನಲ್ಲಿ ಆಡಿದ ಅನುಭವ ಹೊಂದಿದ್ದಾರೆ.

ಅಂದರೆ ಭಾರತದಲ್ಲಿ ಆಡಿದ ಅನುಭವ ಹೊಂದಿರುವ ಬಳಗವನ್ನೇ ಏಕದಿನ ವಿಶ್ವಕಪ್​ನಲ್ಲೂ ಸೌತ್ ಆಫ್ರಿಕಾ ಕಣಕ್ಕಿಳಿಸಲಿದೆ. ಹೀಗಾಗಿ ಈ ಬಾರಿ ಆಫ್ರಿಕನ್ ಪಡೆಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಯುವ ದಾಂಡಿಗರಿಗಿಲ್ಲ ಸ್ಥಾನ:

ಸೌತ್ ಆಫ್ರಿಕಾ ಪರ ಹೊಸ ಭರವಸೆ ಮೂಡಿಸಿರುವ ಯುವ ದಾಂಡಿಗರಾದ ಡೆವಾಲ್ಡ್ ಬ್ರೆವಿಸ್ ಹಾಗೂ ಟ್ರಿಸ್ಟನ್ ಸ್ಟಬ್ಸ್​ ಏಕದಿನ ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಹಾಗೆಯೇ ಅನುಭವಿ ಎಡಗೈ ವೇಗಿ ವೇಯ್ನ್ ಪಾರ್ನೆಲ್​ ಅವರಿಗೂ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿಲ್ಲ.

ನಿವೃತ್ತಿ ಘೋಷಿಸಿದ ಕ್ವಿಂಟನ್ ಡಿಕಾಕ್:

ಏಕದಿನ ವಿಶ್ವಕಪ್​ಗೆ ಸೌತ್ ಆಫ್ರಿಕಾ ತಂಡದ ಘೋಷಣೆ ಬೆನ್ನಲ್ಲೇ ಕ್ವಿಂಟನ್ ಡಿಕಾಕ್ ಒನ್​ಡೆ ಕ್ರಿಕೆಟ್​ನಿಂದ ನಿವೃತ್ತಿಯನ್ನು ಘೋಷಿಸಿದ್ದಾರೆ. ಅಂದರೆ ಏಕದಿನ ವಿಶ್ವಕಪ್​ ಬಳಿಕ ಏಕದಿನ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವುದಾಗಿ ಡಿಕಾಕ್ ತಿಳಿಸಿದ್ದಾರೆ. ಹೀಗಾಗಿ 30 ವರ್ಷದ ಕ್ವಿಂಟನ್ ಪಾಲಿಗೆ ಇದು ಕೊನೆಯ ಏಕದಿನ ವಿಶ್ವಕಪ್ ಆಗಿರಲಿದೆ.

ಸೌತ್ ಆಫ್ರಿಕಾ ಪರ 140 ಏಕದಿನ ಪಂದ್ಯಗಳನ್ನಾಡಿರುವ ಕ್ವಿಂಟನ್ ಡಿಕಾಕ್ 5966 ರನ್ ಕಲೆಹಾಕಿದ್ದಾರೆ. ಈ ವೇಳೆ 17 ಶತಕ ಹಾಗೂ 29 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ ಮೂಲಕ ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ಅದರಂತೆ ಕ್ವಿಂಟನ್ ಡಿಕಾಕ್ ಚಾಂಪಿಯನ್ ಪಟ್ಟದೊಂದಿಗೆ ವಿದಾಯ ಹೇಳಲಿದ್ದಾರಾ ಕಾದು ನೋಡಬೇಕಿದೆ.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ​ 10 ತಂಡಗಳು ಫೈನಲ್

ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ನಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಕ್ ಕ್ಲಾಸೆನ್, ಸಿಸಂದಾ ಮಗಾಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್ಗಿಡಿ, ಆನ್ರಿಕ್​ ನೋಕಿಯಾ, ರಾಸ್ಸೀ ವ್ಯಾನ್ ಡೆರ್ ಡಸ್ಸೆನ್, ತಬ್ರೇಝ್ ಶಂಸಿ, ಕಗಿಸೊ ರಬಾಡ.