ಆಸ್ಟ್ರೇಲಿಯಾ ತಂಡದ 15 ವರ್ಷಗಳ ಕನಸು ನುಚ್ಚುನೂರು!
ವಿಶ್ವ ಕ್ರಿಕೆಟ್‌ನ 'ಮಹಾ ಬಲಿಷ್ಠ' ಆಸ್ಟ್ರೇಲಿಯಾ ತಂಡವು ಯಾವುದೇ ದೇಶಕ್ಕೆ ಪ್ರವಾಸ ಹೋದರೂ ಅಲ್ಲಿ ಜಯಭೇರಿ ಬಾರಿಸುವುದು ಸಾಮಾನ್ಯ. ಆದರೆ ಸೌತ್ ಆಫ್ರಿಕಾದ ಹಸಿರು ಪಿಚ್‌ಗಳಲ್ಲಿ ಮಾತ್ರ ಕಾಂಗರೂ ಪಡೆಯ ಆಟ ಕಳೆದ ಒಂದೂವರೆ ದಶಕದಿಂದ ನಡೆಯುತ್ತಲೇ ಇಲ್ಲ! ಅಂದರೆ ಸೌತ್ ಆಫ್ರಿಕಾ ಮಣ್ಣಿನಲ್ಲಿ ಕಳೆದ 15 ವರ್ಷಗಳಿಂದ ಆಸ್ಟ್ರೇಲಿಯಾ ತಂಡ ಒಂದೇ ಒಂದು ಏಕದಿನ ಸರಣಿ ಗೆದ್ದಿಲ್ಲ.

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಶಕಕ್ಕೂ ಹೆಚ್ಚಿನ ಕಾಲದ ಸುದೀರ್ಘ ಕಾಯುವಿಕೆಗೆ ಸೌತ್ ಆಫ್ರಿಕಾ ತಂಡ ಮತ್ತೊಮ್ಮೆ ಆಘಾತ ನೀಡಿದೆ. ಜೋಹಾನ್ಸ್ಬರ್ಗ್ನ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಆತಿಥೇಯ ಸೌತ್ ಆಫ್ರಿಕಾ ತಂಡ ಜಯಭೇರಿ ಬಾರಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಪರ ನಾಯಕ ತೆಂಬಾ ಬವುಮಾ (103) ಹಾಗೂ ಡೇವಿಡ್ ಮಿಲ್ಲರ್ (143) ಭರ್ಜರಿ ಶತಕ ಸಿಡಿಸಿದರು. ಈ ಶತಕಗಳ ನೆರವಿನೊಂದಿಗೆ ಸೌತ್ ಆಫ್ರಿಕಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 365 ರನ್ ಕಲೆಹಾಕಿತು.
366 ರನ್ಗಳ ಕಠಿಣ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವಿಸ್ ಹೆಡ್ (84) ಹಾಗೂ ಮಿಚೆಲ್ ಮಾರ್ಷ್ (84) ಸ್ಫೋಟಕ ಆರಂಭ ಒದಗಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಆಸ್ಟ್ರೇಲಿಯಾ ತಂಡವು 49.5 ಓವರ್ಗಳಲ್ಲಿ 333 ರನ್ಗಳಿಸಿ ಆಲೌಟ್ ಆಯಿತು.
15 ವರ್ಷಗಳ ಕಾಯುವಿಕೆ ಮುಂದುವರಿಕೆ:
ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಯಾವುದೇ ದೇಶಕ್ಕೆ ಪ್ರವಾಸ ಹೋದರೂ ಅಲ್ಲಿ ಪ್ರಾಬಲ್ಯ ಸಾಧಿಸುವುದು ಸಾಮಾನ್ಯ. ಆದರೆ ಸೌತ್ ಆಫ್ರಿಕಾದ ಮಣ್ಣಿನಲ್ಲಿ ಮಾತ್ರ ಕಾಂಗರೂ ಪಡೆಯ ಆಟ ಕಳೆದ 15 ವರ್ಷಗಳಿಂದ ನಡೆಯುತ್ತಿಲ್ಲ.
ಆಸ್ಟ್ರೇಲಿಯಾ ತಂಡವು ಕೊನೆಯ ಬಾರಿಗೆ ಸೌತ್ ಆಫ್ರಿಕಾ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿದ್ದು ಅಕ್ಟೋಬರ್/ನವೆಂಬರ್ 2011 ರಲ್ಲಿ. ಅಂದು ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಆಸೀಸ್ 2-1 ರಿಂದ ಸರಣಿ ಕೈವಶ ಮಾಡಿಕೊಂಡಿತ್ತು.
ಅದಾದ ನಂತರ ಆಫ್ರಿಕಾ ಪ್ರವಾಸ ಕೈಗೊಂಡಾಗಲೆಲ್ಲಾ (2016 ರಲ್ಲಿ 0-5, 2020 ರಲ್ಲಿ 0-3, 2023 ರಲ್ಲಿ 2-3) ಆಸ್ಟ್ರೇಲಿಯಾ ಮುಖಭಂಗ ಅನುಭವಿಸುತ್ತಲೇ ಬಂದಿದೆ. ಇದೀಗ ಮತ್ತೊಮ್ಮೆ 2-0 ಅಂತರದಿಂದ ಸರಣಿಯನ್ನು ಕೈಚೆಲ್ಲಿಕೊಂಡಿದೆ.
- ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 67 ರನ್ಗಳ ಸೋಲು.
- ಎರಡನೇ ಏಕದಿನ ಪಂದ್ಯದಲ್ಲಿ 32 ರನ್ಗಳಿಂದ ಸೋತ ಆಸ್ಟ್ರೇಲಿಯಾ
ತಾಯ್ನಾಡಿನಲ್ಲೂ ಗೆಲುವು ಮರೀಚಿಕೆ:
ಕೇವಲ ಸೌತ್ ಆಫ್ರಿಕಾದಲ್ಲಿ ಮಾತ್ರವಲ್ಲ, ತನ್ನದೇ ತಾಯ್ನಾಡಿನಲ್ಲೂ (ಆಸ್ಟ್ರೇಲಿಯಾದಲ್ಲಿ) ಪ್ರವಾಸಿ ಸೌತ್ ಆಫ್ರಿಕಾ ವಿರುದ್ಧ ಗೆಲುವಿನ ನಗೆ ಬೀರಲು ಆಸ್ಟ್ರೇಲಿಯಾ ತಡಕಾಡುತ್ತಿದೆ. ಆಸ್ಟ್ರೇಲಿಯಾ ತಂಡವು ತನ್ನ ನೆಲದಲ್ಲಿ ಸೌತ್ ವಿರುದ್ಧ ಕೊನೆಯ ಬಾರಿ ಏಕದಿನ ಸರಣಿ ಗೆದ್ದಿದ್ದು ನವೆಂಬರ್ 2014 ರಲ್ಲಿ. ಅಂದರೆ ಆಸ್ಟ್ರೇಲಿಯಾ ಪಡೆ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಗೆದ್ದು ಬರೋಬ್ಬರಿ 12 ವರ್ಷಗಳು ಕಳೆದಿವೆ.
ಇದನ್ನೂ ಓದಿ: ವಿಂಡೀಸ್ ಆಟಗಾರರಿಗೆ ಬಿಗ್ ಶಾಕ್: ಟೂರ್ನಿಗಳು ರದ್ದು, ವೇತನಕ್ಕೆ ಕತ್ತರಿ!
ಒಟ್ಟಾರೆಯಾಗಿ ಹೇಳುವುದಾದರೆ, ವಿಶ್ವ ಕ್ರಿಕೆಟ್‌ನ ಬಲಿಷ್ಠ ತಂಡಗಳಲ್ಲೊಂದಾದ ಆಸ್ಟ್ರೇಲಿಯಾಕ್ಕೆ ಸೌತ್ ಆಫ್ರಿಕಾದ ಮಣ್ಣು ಮಾತ್ರ ಇಂದಿಗೂ ಭೇದಿಸಲಾಗದ ಕೋಟೆಯಾಗಿಯೇ ಉಳಿದಿದೆ. ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ 2011 ರಲ್ಲಿ ಬರೆದಿದ್ದ ಇತಿಹಾಸವನ್ನು ಪುನರಾವರ್ತಿಸಲು ಹೊರಟ ಮಿಚೆಲ್ ಮಾರ್ಷ್ ಪಡೆಗೆ ಪ್ರೊಟೀಸ್ ಪಡೆ ಮತ್ತೊಮ್ಮೆ ನಿರಾಸೆ ಮೂಡಿಸಿದೆ. ಈ ಸೋಲು ಆಸೀಸ್ ಪಡೆಯ 15 ವರ್ಷಗಳ ಸುದೀರ್ಘ ಕಾಯುವಿಕೆಯನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡಿದೆ. ಏಕದಿನ ಸರಣಿಯನ್ನು ಕೈಚೆಲ್ಲಿರುವ ಆಸ್ಟ್ರೇಲಿಯಾ ತಂಡವು, ಮುಂಬರುವ ಟೆಸ್ಟ್ ಸರಣಿಯಲ್ಲಾದರೂ ಪುಟಿದೆದ್ದು ತನ್ನ ಹಳೆಯ ಪ್ರಾಬಲ್ಯವನ್ನು ಮರಳಿ ಪಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.




