ಜೋಹಾನ್ಸ್ಬರ್ಗ್ನಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶುಭ್ಮನ್ ಗಿಲ್ 12 ರನ್ಗಳಿಸಿ ಔಟಾದರೆ, ಇದರ ಬೆನ್ನಲ್ಲೇ ತಿಲಕ್ ವರ್ಮಾ ಶೂನ್ಯಕ್ಕೆ ಔಟಾಗಿ ನಿರ್ಗಮಿಸಿದರು. ಈ ಹಂತದಲ್ಲಿ ಜೊತೆಗೂಡಿದ ಯಶಸ್ವಿ ಜೈಸ್ವಾಲ್ ಹಾಗೂ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಎಡಗೈ ದಾಂಡಿಗ ಯಶಸ್ವಿ 41 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 60 ರನ್ ಬಾರಿಸಿ ಔಟಾದರು. ಇದರ ಬೆನ್ನಲ್ಲೇ ಸಿಡಿಲಬ್ಬರ ಶುರು ಮಾಡಿದ ಸೂರ್ಯಕುಮಾರ್ ಯಾದವ್ ಸೌತ್ ಆಫ್ರಿಕಾ ಬೌಲರ್ಗಳ ಬೆಂಡೆತ್ತಿದರು. ಪರಿಣಾಮ ಕೇವಲ 55 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಸ್ಪೋಟಕ ಶತಕ ಪೂರೈಸಿದರು.
ಇದರೊಂದಿಗೆ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಶತಕ ಬಾರಿಸಿದ ರೋಹಿತ್ ಶರ್ಮಾ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಸರಿಗಟ್ಟಿದ್ದಾರೆ. ಹಿಟ್ಮ್ಯಾನ್ ಟಿ20 ಕ್ರಿಕೆಟ್ನಲ್ಲಿ 4 ಶತಕಗಳನ್ನು ಬಾರಿಸಿದ್ದರು.
ಇನ್ನು ಸೂರ್ಯಕುಮಾರ್ ಯಾದವ್ (100) ಅವರ ಈ ಶತಕದ ನೆರವಿನಿಂದ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆಹಾಕಿತು.
202 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಟ್ಝ್ಕೆ 4 ರನ್ಗಳಿಸಿ ಔಟಾದರೆ, ರೀಝ ಹೆಂಡ್ರಿಕ್ಸ್ 8 ರನ್ಗಳಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ನಾಯಕ ಐಡೆನ್ ಮಾರ್ಕ್ರಾಮ್ 25 ರನ್ ಬಾರಿಸಿ ತಂಡಕ್ಕೆ ಆಸರೆಯಾಗಿ ನಿಂತರು.
ಆದರೆ ಜಡೇಜಾ ಎಸೆತದಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾ ಮಾರ್ಕ್ರಾಮ್ ಕ್ಯಾಚ್ ನೀಡಿ ನಿರ್ಗಮಿಸಿದರು. ಇದರ ಬೆನ್ನಲ್ಲೇ ಹೆನ್ರಿಕ್ ಕ್ಲಾಸೆನ್ (5), ಡೆನೊವನ್ (12) ಹಾಗೂ ಆಂಡಿಲ್ ಫೆಹ್ಲುಕ್ವಾಯೊ (0) ವಿಕೆಟ್ ಒಪ್ಪಿಸಿದರು.
ಇತ್ತ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಟೀಮ್ ಇಂಡಿಯಾ ಬೌಲರ್ಗಳು ಅಂತಿಮವಾಗಿ ಸೌತ್ ಆಫ್ರಿಕಾ ತಂಡವನ್ನು13.5 ಓವರ್ಗಳಲ್ಲಿ 95 ರನ್ಗಳಿಗೆ ಆಲೌಟ್ ಮಾಡುವ ಮೂಲಕ 106 ರನ್ಗಳ ಭರ್ಜರಿ ಜಯ ಸಾಧಿಸಿದೆ. ಟೀಮ್ ಇಂಡಿಯಾ ಪರ ಕುಲ್ದೀಪ್ ಯಾದವ್ 2.5 ಓವರ್ಗಳಲ್ಲಿ ಕೇವಲ 17 ರನ್ ನೀಡಿ 5 ವಿಕೆಟ್ ಕಬಳಿಸಿದರು.
ಈ ಗೆಲುವಿನೊಂದಿಗೆ ಮೂರು ಪಂದ್ಯಗಳ ಟಿ20 ಸರಣಿಯು 1-1 ಅಂತರದಿಂದ ಡ್ರಾನಲ್ಲಿ ಅಂತ್ಯಗೊಂಡಿದೆ. ಇದಕ್ಕೂ ಮುನ್ನ ಮೊದಲ ಪಂದ್ಯವು ಮಳೆಯ ಕಾರಣ ರದ್ದಾಗಿತ್ತು. ಇನ್ನು 2ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದೆ.
ಸೌತ್ ಆಫ್ರಿಕಾ (ಪ್ಲೇಯಿಂಗ್ XI): ರೀಝ ಹೆಂಡ್ರಿಕ್ಸ್, ಮ್ಯಾಥ್ಯೂ ಬ್ರೀಟ್ಝ್ಕೆ, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ಡೊನೊವನ್ ಫೆರೆರಾ, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ಲಿಜಾದ್ ವಿಲಿಯಮ್ಸ್, ತಬ್ರೈಝ್ ಶಮ್ಸಿ, ನಾಂಡ್ರೆ ಬರ್ಗರ್.
ಇದನ್ನೂ ಓದಿ: Suryakumar Yadav: ದಾಖಲೆಯ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್
ಭಾರತ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್.