Tri-Series: ಬೇಬಿ ಎಬಿ ಸಿಡಿಲಬ್ಬರ; ದಕ್ಷಿಣ ಆಫ್ರಿಕಾಕ್ಕೆ ಮೊದಲ ಜಯ

Tri-Series: ನಮೀಬಿಯಾದಲ್ಲಿ ನಡೆಯುತ್ತಿರುವ ತ್ರಿಕೋನ T20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸೋತಿದ್ದ ದ.ಆಫ್ರಿಕಾ, ಎರಡನೇ ಪಂದ್ಯದಲ್ಲಿ ಜಿಂಬಾಬ್ವೆಯನ್ನು 7 ವಿಕೆಟ್‌ಗಳಿಂದ ಸೋಲಿಸಿತು. 'ಬೇಬಿ ಎಬಿ' ಖ್ಯಾತಿಯ ಡೆವಾಲ್ಡ್ ಬ್ರೆವಿಸ್ 75* ರನ್ ಗಳಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಕೇವಲ 24 ಗಂಟೆಗಳಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿ, ಸರಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡಿದೆ.

Tri-Series: ಬೇಬಿ ಎಬಿ ಸಿಡಿಲಬ್ಬರ; ದಕ್ಷಿಣ ಆಫ್ರಿಕಾಕ್ಕೆ ಮೊದಲ ಜಯ
Sa Vs Zim

Updated on: Aug 30, 2026 | 3:52 PM

ನಮೀಬಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ (Tri-Series) ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಗೆಲುವು ದಾಖಲಿಸಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿಯೇ ನಮೀಬಿಯಾ ವಿರುದ್ಧ ಹೀನಾಯವಾಗಿ ಸೋತಿದ್ದ ದಕ್ಷಿಣ ಆಫ್ರಿಕಾ ಕೇವಲ 24 ಗಂಟೆಗಳಲ್ಲಿ ಮತ್ತೆ ಗೆಲುವಿನ ಹಾದಿಗೆ ಮರಳಿದೆ. ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ (South Africa vs Zimbabwe) ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ತಂಡದ ಈ ಗೆಲುವಿನ ಪ್ರಮುಖ ಪಾತ್ರವಹಿಸಿದ ಬೇಬಿ ಎಬಿ ಖ್ಯಾತಿಯ ಸ್ಫೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ (Dewald Brevis) 75 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಮೊದಲ ಪಂದ್ಯದಲ್ಲೂ 75 ರನ್

ವಾಸ್ತವವಾಗಿ ಈ ತ್ರಿಕೋನ ಟಿ20 ಸರಣಿಯ ಎರಡನೇ ಮೊದಲ ಪಂದ್ಯ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದಿತ್ತು. ಈ ಪಂದ್ಯದಲ್ಲಿ ನಮೀಬಿಯಾ, ಆಫ್ರಿಕಾ ತಂಡವನ್ನು 18 ರನ್‌ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಡೆವಾಲ್ಡ್ ಬ್ರೆವಿಸ್ 75 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಆದಾಗ್ಯೂ, ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮೊದಲೇ ಔಟಾಗಿದ್ದರು. ಆದರೆ ಈ ಬಾರಿ ಎಚ್ಚರಿಕೆಯಿಂದ ಬ್ಯಾಟಿಂಗ್‌ ಮಾಡಿದ ಬ್ರೆವಿಸ್ ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾದರು.

144 ರನ್ ಕಲೆಹಾಕಿದ ಜಿಂಬಾಬ್ವೆ

ತ್ರಿಕೋನ ಸರಣಿಯ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ 20 ಓವರ್‌ಗಳಲ್ಲಿ 144 ರನ್ ಕಲೆಹಾಕಿತು. ತಂಡದ ಪರ ಆರಂಭಿಕ ಬೆನ್ ಕರನ್ ಕೇವಲ 12 ಎಸೆತಗಳಲ್ಲಿ 24 ರನ್ ಗಳಿಸುವ ಮೂಲಕ ಚುರುಕಾದ ಇನ್ನಿಂಗ್ಸ್ ಆಡಿದರು. ಆದರೆ ಸಹ ಆರಂಭಿಕ ಆಟಗಾರ ಬ್ರಿಯಾನ್ ಬೆನೆಟ್ 34 ರನ್ ಗಳಿಸಲೂ ಬರೋಬ್ಬರಿ 35 ಎಸೆತಗಳನ್ನು ವ್ಯರ್ಥ ಮಾಡಿದರು. ಇದು ಸ್ಕೋರ್ ಮೇಲೆ ಪರಿಣಾಮ ಬೀರಿತು. ಜಿಂಬಾಬ್ವೆಯ ಸ್ಕೋರ್ ಇನ್ನೂ ಕಡಿಮೆಯಾಗುತ್ತಿತ್ತು ಆದರೆ ತಡಿವಾನಾಶಿ ಮರುಮಾನಿ ಕೇವಲ 13 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡವನ್ನು ಉತ್ತಮ ಸ್ಕೋರ್​ನತ್ತ ಕೊಂಡೊಯ್ದರು. ದಕ್ಷಿಣ ಆಫ್ರಿಕಾ ಪರ, ಡುವಾನೆ ಯಾನ್ಸನ್ ಗರಿಷ್ಠ 3 ವಿಕೆಟ್ ಪಡೆದರಾದರೂ 45 ರನ್ ಬಿಟ್ಟುಕೊಟ್ಟರು.

ಬ್ರೆವಿಸ್ ಗೆಲುವಿನ ಇನ್ನಿಂಗ್ಸ್

ಮೊದಲ ಪಂದ್ಯದಲ್ಲಿ ಕಳಪೆ ಆರಂಭ ನೀಡಿದ್ದ ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿ ಈ ಪಂದ್ಯದಲ್ಲಿ ಭರ್ಜರಿ ಆರಂಭವನ್ನೇ ನೀಡಿತು. ಲುವಾನ್ ಡೆಪ್ರೆಟೋರಿಯಸ್ ಮತ್ತು ಜೋರ್ಡಾನ್ ಹ್ಯಾಮನ್ ಅವರ ಬಲಿಷ್ಠ ಬ್ಯಾಟಿಂಗ್ ನಿಂದಾಗಿ ದಕ್ಷಿಣ ಆಫ್ರಿಕಾ ಪವರ್ ಪ್ಲೇನಲ್ಲಿ 61 ರನ್ ಕಲೆಹಾಕಿತು ನಂತರ ಡೆವಾಲ್ಡ್ ಬ್ರೆವಿಸ್ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬ್ರೆವಿಸ್ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, 32 ಎಸೆತಗಳಲ್ಲಿ ಅಜೇಯ 75 ರನ್ ಕಲೆಹಾಕುವ ಮೂಲಕ ದಕ್ಷಿಣ ಆಫ್ರಿಕಾವನ್ನು ಕೇವಲ 13.4 ಓವರ್‌ಗಳಲ್ಲಿ ಗೆಲುವಿನತ್ತ ಕೊಂಡೊಯ್ದರು.

ಸಿಎಸ್​ಕೆ ಡೆವಾಲ್ಡ್ ಬ್ರೆವಿಸ್​ಗೆ ಅಧಿಕ ಹಣ ನೀಡಿದೆ..! ಆರ್​ ಅಶ್ವಿನ್ ಸ್ಫೋಟಕ ಹೇಳಿಕೆ; ವಿಡಿಯೋ ನೋಡಿ

ಇದು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಬ್ರೆವಿಸ್ ಅವರ ಮೂರನೇ ಮತ್ತು ಸತತ ಎರಡನೇ ಅರ್ಧಶತಕವಾಗಿದೆ. ತಮ್ಮ ಇನ್ನಿಂಗ್ಸ್‌ನಲ್ಲಿ ಬ್ರೆವಿಸ್ ಏಳು ಬೌಂಡರಿಗಳು ಮತ್ತು ಆರು ಸಿಕ್ಸರ್‌ಗಳನ್ನು ಬಾರಿಸಿದರು. ಇದಕ್ಕೂ ಮೊದಲು ನಮೀಬಿಯಾ ವಿರುದ್ಧ 75 ರನ್​ಗಳ ಇನ್ನಿಂಗ್ಸ್ ಆಡಿದ್ದ ಬ್ರೆವಿಸ್ ಆ ಇನ್ನಿಂಗ್ಸ್‌ನಯೂ ಐದು ಸಿಕ್ಸರ್‌ಗಳು ಮತ್ತು ನಾಲ್ಕು ಬೌಂಡರಿಗಳನ್ನು ಬಾರಿಸಿದ್ದರು. ಅಂದರೆ ಬ್ರೆವಿಸ್ ಕೇವಲ 24 ಗಂಟೆಗಳಲ್ಲಿ 11 ಸಿಕ್ಸರ್‌ಗಳು ಮತ್ತು 11 ಬೌಂಡರಿಗಳನ್ನು ಬಾರಿಸುವ ಮೂಲಕ ತಾನು ಎಷ್ಟು ಅಪಾಯಕಾರಿ ಬ್ಯಾಟರ್ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us