ಸಿಎಸ್ಕೆ ಡೆವಾಲ್ಡ್ ಬ್ರೆವಿಸ್ಗೆ ಅಧಿಕ ಹಣ ನೀಡಿದೆ..! ಆರ್ ಅಶ್ವಿನ್ ಸ್ಫೋಟಕ ಹೇಳಿಕೆ; ವಿಡಿಯೋ ನೋಡಿ
Dewald Brevis CSK Entry: ಐಪಿಎಲ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ದಕ್ಷಿಣ ಆಫ್ರಿಕಾದ ಡೆವಾಲ್ಡ್ ಬ್ರೆವಿಸ್ ಅವರ ಸೇರ್ಪಡೆಯ ರಹಸ್ಯವನ್ನು ಆರ್. ಅಶ್ವಿನ್ ಬಹಿರಂಗಪಡಿಸಿದ್ದಾರೆ. ಹರಾಜಿನಲ್ಲಿ ಖರೀದಿಸದ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ಹೆಚ್ಚುವರಿ ಹಣ ನೀಡಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇತರ ಫ್ರಾಂಚೈಸಿಗಳು ಬ್ರೆವಿಸ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದರೂ, ಬೆಲೆಯ ಕಾರಣದಿಂದ ವಿಫಲವಾಗಿದ್ದವು ಎಂದು ಅಶ್ವಿನ್ ಹೇಳಿದ್ದಾರೆ.
2025 ರ ಐಪಿಎಲ್ ಮಧ್ಯದಲ್ಲಿ ಸಿಎಸ್ಕೆ ತಂಡವನ್ನು ಸೇರಿಕೊಂಡಿದ್ದ ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್‌ಮನ್ ಡೆವಾಲ್ಡ್ ಬ್ರೆವಿಸ್ ಅಮೋಘ ಪ್ರದರ್ಶನ ನೀಡಿದ್ದರು. ಆದಾಗ್ಯೂ ಬ್ರೆವಿಸ್ ಅವರನ್ನು ಮೆಗಾ ಹರಾಜಿನಲ್ಲಿ ಯಾರೂ ಖರೀದಿಸಿರಲಿಲ್ಲ. ಆದರೆ ಸಿಎಸ್ಕೆ ಖರೀದಿಸಿದ್ದ ವೇಗದ ಬೌಲರ್ ಗುರ್ಜ್‌ಪನಿತ್ ಸಿಂಗ್ ಗಾಯಗೊಂಡಿದ್ದರಿಂದಾಗಿ ಅವರ ಬದಲಿಗೆ ಡೆವಾಲ್ಡ್ ಬ್ರೆವಿಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 2.2 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತ್ತು. ಇದು ನಮಗೆಲ್ಲರಿಗೂ ಗೊತ್ತಿರುವ ವಿಚಾರ. ಆದರೀಗ ಬ್ರೆವಿಸ್ ಹೇಗೆ ಸಿಎಸ್ಕೆ ತಂಡವನ್ನು ಸೇರಿಕೊಂಡರು ಎಂಬುದನ್ನು ತಂಡದ ಸಹ ಆಟಗಾರ ಆರ್ ಅಶ್ವಿನ್ ಬಹಿರಂಗಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿರುವ ಆರ್ ಅಶ್ವಿನ್, ಡೆವಾಲ್ಡ್ ಬ್ರೆವಿಸ್ ಬಗ್ಗೆ ನಾನು ನಿಮಗೆ ಹೇಳುತ್ತೇನೆ, ಅವರು ಚೆನ್ನೈ ತಂಡವನ್ನು ಸೇರಿಕೊಂಡ ಬಳಿಕ ಉತ್ತಮ ಪ್ರದರ್ಶನ ನೀಡಿದರು. ಆದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಹಲವು ಫ್ರಾಂಚೈಸಿಗಳು ಪ್ರಯತ್ನ ಪಟ್ಟಿದ್ದವು. ಆದರೆ ಬೆಲೆಯ ಕಾರಣದಿಂದಾಗಿ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಕೆಲವು ಫ್ರಾಂಚೈಸಿಗಳಿಗೆ ಸಾಧ್ಯವಾಗಿರಲಿಲ್ಲ. ಏಕೆಂದರೆ ಬ್ರೆವಿಸ್ ಅವರನ್ನು ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಬೇಕಾದರೆ, ಅವರನ್ನು ಮೂಲ ಬೆಲೆಗೆ ಖರೀದಿಸಬೇಕಿತ್ತು. ಆದರೆ ಇದಕ್ಕೆ ಆಟಗಾರರು ಒಪ್ಪುವುದಿಲ್ಲ. ಹೀಗಾಗಿ ಏಜೆಂಟ್‌ಗಳ ಮೂಲಕ ಮಾತುಕತೆ ನಡೆಸಬೇಕಾಗುತ್ತದೆ. ಆ ಸಮಯದಲ್ಲಿ ಆಟಗಾರರು ನೀವು ನನಗೆ ಸ್ವಲ್ಪ ಹೆಚ್ಚುವರಿ ಮೊತ್ತವನ್ನು ನೀಡಿದರೆ, ನಾನು ಆಡುತ್ತೇನೆ ಎಂದು ಹೇಳುತ್ತಾರೆ.
ಅದರಂತೆಯೇ ಏಜೆಂಟರೊಂದಿಗೆ ಮಾತುಕತೆ ನಡೆಸಿದ ನಂತರವೇ ಚೆನ್ನೈ ಸೂಪರ್ ಕಿಂಗ್ಸ್ ಬ್ರೆವಿಸ್ಗೆ ಹೆಚ್ಚುವರಿ ಹಣವನ್ನು ಪಾವತಿಸುವ ಮೂಲಕ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು. ಐಪಿಎಲ್‌ನಲ್ಲಿ ಈ ರೀತಿ ನಡೆಯುವುದು ಸಹಜ. ಏಕೆಂದರೆ ಮುಂದಿನ ಸೀಸನ್ಗೂ ಮುನ್ನ ತಂಡ ನನ್ನನ್ನು ಬಿಡುಗಡೆ ಮಾಡಿದರೆ, ಹರಾಜಿನಲ್ಲಿ ನನಗೆ ಅಧಿಕ ಮೊತ್ತ ಸಿಗಲಿದೆ ಎಂಬುದು ಆಟಗಾರರ ಉದ್ದೇಶವಾಗಿರುತ್ತದೆ. ಹೀಗಾಗಿಯೇ ಅವರು ಅಧಿಕ ಮೊತ್ತಕ್ಕೆ ಬೇಡಿಕೆ ಇಡುತ್ತಾರೆ. ಅದರಂತೆ ಬ್ರೆವಿಸ್ ಅವರನ್ನು ಸಹ ನಿಗದಿತ ಮೊತ್ತಕ್ಕೂ ಅಧಿಕ ಹಣ ನೀಡಿ ಸಿಎಸ್ಕೆ ಅವರನ್ನು ತಂಡಕ್ಕೆ ಸೇರಿಸಿಕೊಂಡಿತ್ತು ಎಂದು ಅಶ್ವಿನ್ ಹೇಳಿದ್ದಾರೆ.

