ಭಾರತ-ಸೌತ್ ಆಫ್ರಿಕಾ (India vs South Africa) ನಡುವಣ ಟೆಸ್ಟ್ ಸರಣಿಯು ಮಂಗಳವಾರದಿಂದ (ಡಿ.26) ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯಕ್ಕೆ ಸೆಂಚುರಿಯನ್ನಲ್ಲಿರುವ ಸೂಪರ್ಸ್ಪೋರ್ಟ್ ಪಾರ್ಕ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ವಿಶೇಷ ಎಂದರೆ ಈ ಮೈದಾನವು ಸೌತ್ ಆಫ್ರಿಕಾ ಪಾಲಿಗೆ ಅದೃಷ್ಟ ಗ್ರೌಂಡ್ ಎಂದು ಗುರುತಿಸಿಕೊಂಡಿದೆ.
ಏಕೆಂದರೆ ಈ ಮೈದಾನದಲ್ಲಿ ಸೌತ್ ಆಫ್ರಿಕಾ ತಂಡವು ಇದುವರೆಗೆ 28 ಪಂದ್ಯಗಳನ್ನಾಡಿದೆ. ಈ ವೇಳೆ ಸೋತಿರುವುದು ಕೇವಲ 3 ಬಾರಿ ಮಾತ್ರ. ಅಂದರೆ ಉಳಿದ 22 ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡ ಗೆಲುವು ದಾಖಲಿಸಿದೆ. ಹಾಗೆಯೇ ಮೂರು ಮ್ಯಾಚ್ಗಳನ್ನು ಡ್ರಾನಲ್ಲಿ ಅಂತ್ಯಗೊಳಿಸಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲೂ ಗೆಲ್ಲುವ ಫೇವರೇಟ್ ಆಗಿ ಸೌತ್ ಆಫ್ರಿಕಾ ಗುರುತಿಸಿಕೊಂಡಿದೆ.
ಆದರೆ ಈ ಬಾರಿ ಸೌತ್ ಆಫ್ರಿಕಾ ಮುಖಾಮುಖಿಯಾಗುತ್ತಿರುವುದು ಬಲಿಷ್ಠ ಭಾರತ ತಂಡದ ವಿರುದ್ಧ ಎಂಬುದು ಇಲ್ಲಿ ಉಲ್ಲೇಖಾರ್ಹ. ಏಕೆಂದರೆ ಇದೇ ಮೈದಾನದಲ್ಲಿ ಸೌತ್ ಆಫ್ರಿಕಾ ತಂಡವನ್ನು ಸೋಲಿಸಿದ ಮೂರು ತಂಡಗಳಲ್ಲಿ ಒಂದು ಭಾರತ.
ಸೆಂಚುರಿಯನ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಗೆದ್ದ ಮೊದಲ ತಂಡ ಇಂಗ್ಲೆಂಡ್. 2000ರಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 2 ವಿಕೆಟ್ಗಳ ರೋಚಕ ಜಯ ಸಾಧಿಸಿತ್ತು. ಇದಾದ ಬಳಿಕ 2014 ರಲ್ಲಿ ಆಸ್ಟ್ರೇಲಿಯಾ ತಂಡವು ಇದೇ ಮೈದಾನದಲ್ಲಿ ಸೌತ್ ಆಫ್ರಿಕಾವನ್ನು 281 ರನ್ಗಳಿಸಿ ಮಣಿಸಿತ್ತು.
ಈ ಎರಡು ಸೋಲುಗಳ ಬಳಿಕ ಈ ಮೈದಾನದಲ್ಲಿ ಸೌತ್ ಆಫ್ರಿಕಾ ಪಾರುಪತ್ಯ ಮೆರೆಯುತ್ತಾ ಬಂದಿದೆ. ಆದರೆ 2021 ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ 113 ರನ್ಗಳಿಂದ ಆಫ್ರಿಕಾ ಪಡೆಯನ್ನು ಬಗ್ಗು ಬಡಿದು ಹೊಸ ಇತಿಹಾಸ ನಿರ್ಮಿಸಿತ್ತು.
ಹಾಗೆಯೇ ಈ ಮೈದಾನದಲ್ಲಿ ನಡೆದ ಕೊನೆಯ 9 ಟೆಸ್ಟ್ ಪಂದ್ಯಗಳಲ್ಲಿ ಸೌತ್ ಆಫ್ರಿಕಾ ತಂಡ 8 ರಲ್ಲಿ ಜಯ ಸಾಧಿಸಿದೆ. ಇನ್ನು ಸೋತಿರುವುದು ಟೀಮ್ ಇಂಡಿಯಾ ವಿರುದ್ಧ ಮಾತ್ರ. ಹೀಗಾಗಿಯೇ ಸೆಂಚುರಿಯನ್ ಮೈದಾನದಲ್ಲಿ ಸೌತ್ ಆಫ್ರಿಕಾ ಗೆಲ್ಲುವ ಫೇವರೇಟ್ ತಂಡ ಎನಿಸಿಕೊಂಡರೂ ಈ ಬಾರಿ ಕಣಕ್ಕಿಳಿಯುತ್ತಿರುವುದು ಭಾರತ ತಂಡದ ವಿರುದ್ಧ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಹೀಗಾಗಿ ಈ ಪಂದ್ಯದಲ್ಲೂ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸಬಹುದು.
ಭಾರತ ಟೆಸ್ಟ್ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಪ್ರಸಿದ್ಧ್ ಕೃಷ್ಣ, ಅಭಿಮನ್ಯು ಈಶ್ವರನ್.
ಸೌತ್ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ನಾಂಡ್ರೆ ಬರ್ಗರ್, ಐಡೆನ್ ಮಾರ್ಕ್ರಾಮ್, ವಿಯಾನ್ ಮುಲ್ಡರ್, ಕಗಿಸೊ ರಬಾಡ, ಟ್ರಿಸ್ಟಾನ್ ಸ್ಟಬ್ಸ್, ಕೈಲ್ ವೆರ್ರೆನ್ನೆ, ಜೆರಾಲ್ಡ್ ಕೊಯೆಟ್ಝಿ, ಟೋನಿ ಡಿ ಝೋರ್ಝಿ, ಡೀನ್ ಎಲ್ಗರ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಲುಂಗಿ ಎನ್‌ಗಿಡಿ, ಕೀಗನ್ ಪೀಟರ್ಸನ್.
ಇದನ್ನೂ ಓದಿ: IPL 2024: ಒಂದು ಎಸೆತದ ಬೆಲೆ ಬರೋಬ್ಬರಿ 7.40 ಲಕ್ಷ ರೂ..!