IPL 2025: ಲೀಗ್​ನಿಂದ ಹೊರಬಿದ್ದ ಬೆನ್ನಲ್ಲೇ ಕಾವ್ಯಾ ತಂಡದಿಂದ ಸ್ಟಾರ್ ಆಟಗಾರರಿಗೆ ಗೇಟ್​ಪಾಸ್..!

Sunrisers Hyderabad IPL 2025: ಐಪಿಎಲ್ 2025ರಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಮುಂದಿನ ಸೀಸನ್‌ಗಾಗಿ ತಮ್ಮ ತಂಡದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲು ಸಿದ್ಧವಾಗಿದೆ. ಮೊಹಮ್ಮದ್ ಶಮಿ, ಕಮಿಂದು ಮೆಂಡಿಸ್, ಮತ್ತು ಅಥರ್ವ ಟೈಡೆ ಅವರಂತಹ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಆದರೆ, ಹೆನ್ರಿಕ್ ಕ್ಲಾಸೆನ್, ಪ್ಯಾಟ್ ಕಮ್ಮಿನ್ಸ್, ಮತ್ತು ಟ್ರಾವಿಸ್ ಹೆಡ್ ಅವರಂತಹ ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಲು ನಿರ್ಧರಿಸಲಾಗುವುದು.

IPL 2025: ಲೀಗ್​ನಿಂದ ಹೊರಬಿದ್ದ ಬೆನ್ನಲ್ಲೇ ಕಾವ್ಯಾ ತಂಡದಿಂದ ಸ್ಟಾರ್ ಆಟಗಾರರಿಗೆ ಗೇಟ್​ಪಾಸ್..!
Srh

Updated on: May 26, 2025 | 5:19 PM

ಐಪಿಎಲ್ 2025 (IPL 2025) ರ ಸೀಸನ್ ಸನ್‌ರೈಸರ್ಸ್ ಹೈದರಾಬಾದ್‌ಗೆ (SRH) ನಿರೀಕ್ಷೆಯಂತೆ ನಡೆಯಲಿಲ್ಲ. 14 ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳಲ್ಲಿ ಗೆದ್ದಿದ್ದ ತಂಡ, ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು. ಕಳೆದ ಸೀಸನ್‌ನಲ್ಲಿ ಬಲಿಷ್ಠ ಬ್ಯಾಟಿಂಗ್ ಮತ್ತು ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದ ಎಸ್‌ಆರ್‌ಹೆಚ್ ಈ ಬಾರಿ ತನ್ನ ಲಯವನ್ನು ಕಳೆದುಕೊಂಡಂತೆ ಕಾಣುತ್ತಿತ್ತು. ಇದೀಗ ಎಸ್‌ಆರ್‌ಹೆಚ್ ಸೀಸನ್ ಮುಗಿದಿರುವುದರಿಂದ, ತಂಡದ ಒಡತಿ ಕಾವ್ಯಾ ಮಾರನ್ (Kavya Maran) ಮತ್ತು ಆಡಳಿತ ಮಂಡಳಿಯು ಮೇಜರ್ ಸರ್ಜರಿಗೆ ತಯಾರಿ ನಡೆಸಿದೆ. ಆ ಪ್ರಕಾರ ಈ ಸೀಸನ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಕೆಲವು ಆಟಗಾರರನ್ನು ಬಿಡುಗಡೆ ಮಾಡುವುದರ ಜೊತೆಗೆ ಟ್ರೇಡ್ ವಿಂಡೋ ಮೂಲಕ ಹೊಸ ಮುಖಗಳನ್ನು ತಂಡಕ್ಕೆ ಸೇರಿಸಿಕೊಳ್ಳುವ ತಯಾರಿಯಲ್ಲಿದೆ.

ಯಾವ ಆಟಗಾರರನ್ನು ಬಿಡುಗಡೆ ಮಾಡಬಹುದು?

ಐಪಿಎಲ್ ಫ್ರಾಂಚೈಸಿಗಳು ಪ್ರತಿ ಆವೃತ್ತಿಯ ನಂತರ ನಿರೀಕ್ಷೆಗಳಿಗೆ ತಕ್ಕಂತೆ ಆಡದ ಆಟಗಾರರನ್ನು ಬಿಡುಗಡೆ ಮಾಡುತ್ತವೆ. ಅದರಂತೆ ಈ ಸೀಸನ್‌ನಲ್ಲಿ ಸರಾಸರಿ ಪ್ರದರ್ಶನ ನೀಡಿದ ಕೆಲವು ಆಟಗಾರರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಬಿಡುಗಡೆ ಮಾಡಬಹುದು. ಬಿಡುಗಡೆ ಪಟ್ಟಿಯಲ್ಲಿ ಮೊಹಮ್ಮದ್ ಶಮಿ ಮತ್ತು ಕಮಿಂದು ಮೆಂಡಿಸ್ ಅವರಂತಹ ದೊಡ್ಡ ಆಟಗಾರರ ಹೆಸರುಗಳು ಸೇರಿರಬಹುದು. ಈ ಸೀಸನ್ ಮೊಹಮ್ಮದ್ ಶಮಿಗೆ ತುಂಬಾ ಕೆಟ್ಟದಾಗಿತ್ತು. ಆಡಿದ 9 ಪಂದ್ಯಗಳಲ್ಲಿ ಶಮಿ ಕೇವಲ 6 ವಿಕೆಟ್‌ಗಳನ್ನು ಮಾತ್ರ ಪಡೆದರು. ಅದೇ ಸಮಯದಲ್ಲಿ, ಅವರ ಎಕಾನಮಿ ರೇಟ್​ ಕೂಡ 11 ಕ್ಕಿಂತ ಹೆಚ್ಚಿತ್ತು. ಮತ್ತೊಂದೆಡೆ, ಕಮಿಂದು ಮೆಂಡಿಸ್ ಕೂಡ ಆಡಿದ 5 ಪಂದ್ಯಗಳಲ್ಲಿ ಕೇವಲ 92 ರನ್ ಕಲೆಹಾಕಿದರಲ್ಲದೆ 2 ವಿಕೆಟ್‌ಗಳನ್ನು ಪಡೆದರು.

ಅಥರ್ವ ಟೈಡೆ ಕೂಡ ತಂಡದಿಂದ ಬಿಡುಗಡೆಯಾಗಬಹುದು. ಆದಾಗ್ಯೂ, ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲವಾದರೂ ತಂಡವು ಅವರ ಮೇಲೆ ಹೆಚ್ಚು ವಿಶ್ವಾಸ ತೋರಿಸಲಿಲ್ಲ, ಇದರಿಂದಾಗಿ ಅವರನ್ನು ಬಿಡುಗಡೆ ಮಾಡಬಹುದು. ಸಚಿನ್ ಬೇಬಿಗೂ ಕೂಡ ಕೇವಲ 1 ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿತ್ತು. ರಾಹುಲ್ ಚಹಾರ್ ಮತ್ತು ವಿಯಾನ್ ಮುಲ್ಡರ್ ಕೂಡ ತಲಾ 1 ಪಂದ್ಯ ಆಡುವ ಅವಕಾಶ ಪಡೆದಿದ್ದರು. ಆದ್ದರಿಂದ ಅವರ ಹೆಸರುಗಳು ಬಿಡುಗಡೆಯಾಗುವ ಆಟಗಾರರ ಪಟ್ಟಿಯಲ್ಲಿ ಸೇರಬಹುದು.

IPL 2025: 20 ಮಿಲಿಯನ್ ಫಾಲೋವರ್ಸ್; ಪ್ಲೇಆಫ್​ಗೂ ಮುನ್ನ ದಾಖಲೆ ಬರೆದ ಆರ್​ಸಿಬಿ

ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿ

ಸನ್‌ರೈಸರ್ಸ್ ಹೈದರಾಬಾದ್ ಮುಂದಿನ ಸೀಸನ್​ಗೆ ಉಳಿಸಿಕೊಳ್ಳಬಹುದಾದ ಆಟಗಾರರ ಪಟ್ಟಿಯಲ್ಲಿ ಹೆನ್ರಿಕ್ ಕ್ಲಾಸೆನ್ (ರೂ. 23 ಕೋಟಿ), ಪ್ಯಾಟ್ ಕಮ್ಮಿನ್ಸ್ (ರೂ. 18 ಕೋಟಿ), ಟ್ರಾವಿಸ್ ಹೆಡ್ (ರೂ. 14 ಕೋಟಿ), ಅಭಿಷೇಕ್ ಶರ್ಮಾ (ರೂ. 14 ಕೋಟಿ) ಮತ್ತು ನಿತೀಶ್ ಕುಮಾರ್ ರೆಡ್ಡಿ (ರೂ. 6 ಕೋಟಿ) ಸೇರಿದ್ದಾರೆ. ಈ ಆಟಗಾರರ ಪ್ರದರ್ಶನವೂ ಉತ್ತಮವಾಗಿತ್ತು, ಅಂತಹ ಪರಿಸ್ಥಿತಿಯಲ್ಲಿ ತಂಡವು ಈ ಸ್ಟಾರ್ ಆಟಗಾರರನ್ನು ತನ್ನೊಂದಿಗೆ ಉಳಿಸಿಕೊಳ್ಳಬಹುದು. ಇವರಲ್ಲದೆ, ಇಶಾನ್ ಕಿಶನ್ ಮತ್ತು ಹರ್ಷಲ್ ಪಟೇಲ್ ಕೂಡ ತಂಡದಲ್ಲೇ ಉಳಿಯಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:13 pm, Mon, 26 May 25