RCB vs CSK: ಕ್ವಾಲಿಫೈ ಆದ 3 ತಂಡಗಳು: ಕೊನೆಯ ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಪ್ಲೇಆಫ್‌ನ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ

IPL 2024 Playoff Qualification Scenarios: ಐಪಿಎಲ್ 2024 ರಲ್ಲಿ ಇದೀಗ ಪ್ಲೇಆಫ್‌ನಲ್ಲಿನ ಒಂದು ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಬ್ಬರು ಸ್ಪರ್ಧಿಗಳಿದ್ದಾರೆ. ಸಿಎಸ್​ಕೆ- ಆರ್​ಸಿಬಿ ತಂಡಗಳು ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ.

RCB vs CSK: ಕ್ವಾಲಿಫೈ ಆದ 3 ತಂಡಗಳು: ಕೊನೆಯ ಸ್ಥಾನಕ್ಕೆ ಆರ್​ಸಿಬಿ-ಸಿಎಸ್​ಕೆ ಪೈಪೋಟಿ, ಪ್ಲೇಆಫ್‌ನ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ
RCB SRH CSK

Updated on: May 17, 2024 | 8:04 AM

ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯ ಮಳೆಗೆ ಆಹುತಿಯಾದ ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ (SRH vs GT) ತಂಡ ಐಪಿಎಲ್ 2024ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆದುಕೊಂಡಿದೆ. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಿರೀಕ್ಷೆ ಹುಸಿಯಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಈಗಾಗಲೇ ಪ್ಲೇ ಆಫ್‌ನಲ್ಲಿವೆ. ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಪಯಣ ಅಂತ್ಯಗೊಂಡಿದೆ. ಇದೀಗ ಪ್ಲೇಆಫ್‌ನಲ್ಲಿನ ಒಂದು ಸ್ಥಾನಕ್ಕಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಬ್ಬರು ಸ್ಪರ್ಧಿಗಳಿದ್ದಾರೆ.

ಚೆನ್ನೈಗೆ ಪ್ಲೇಆಫ್ ಅವಕಾಶ:

ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಶನಿವಾರ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಚೆನ್ನೈ 13 ಪಂದ್ಯಗಳಲ್ಲಿ 14 ಅಂಕಗಳನ್ನು ಹೊಂದಿದ್ದರೆ, ಆರ್​ಸಿಬಿ ಅದೇ ಸಂಖ್ಯೆಯ ಪಂದ್ಯಗಳಲ್ಲಿ 12 ಅಂಕಗಳನ್ನು ಪಡೆದುಕೊಂಡಿದೆ. ಆದರೆ, ನೆಟ್ ರನ್ ರೇಟ್ ಆಧಾರದ ಮೇಲೆ ಸಿಎಸ್​ಕೆ ಮುಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ತಲುಪಬೇಕಾದರೆ ಆರ್‌ಸಿಬಿ ವಿರುದ್ಧ ಗೆಲ್ಲಲೇಬೇಕು. ಗೆದ್ದರೆ ತಂಡಕ್ಕೆ ಕೊನೆಯ ನಾಲ್ಕರಲ್ಲಿ ಸ್ಥಾನ ಸಿಗಲಿದೆ.

ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ಡ್ರೆಸ್ಸಿಂಗ್ ರೂಮ್​ಗೆ ದಿಢೀರ್ ಎಂಟ್ರಿ ಕೊಟ್ಟ ಎಂಎಸ್ ಧೋನಿ: ವಿಡಿಯೋ

ಆರ್​ಸಿಬಿ ಪ್ಲೇಆಫ್ ಅವಕಾಶ:

ಚೆನ್ನೈ ಸೂಪರ್ ಕಿಂಗ್ಸ್ ಹಿಂದಿಕ್ಕಿ ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಎದುರು ನೋಡುತ್ತಿದೆ. ಒಂದು ವೇಳೆ ಆರ್‌ಸಿಬಿ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 18 ರನ್‌ಗಳಿಂದ ಪಂದ್ಯವನ್ನು ಗೆಲ್ಲಬೇಕಾಗುತ್ತದೆ. ಮೊದಲು ಬೌಲಿಂಗ್ ಮಾಡಿದರೆ 11 ಎಸೆತಗಳು ಬಾಕಿ ಇರುವಂತೆಯೇ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ಆರ್‌ಸಿಬಿ ಪ್ಲೇಆಫ್ ಟಿಕೆಟ್ ಪಡೆದು ಚೆನ್ನೈ ಸೂಪರ್ ಕಿಂಗ್ಸ್ ಹೊರಗುಳಿಯಲಿದೆ. ಆರ್​ಸಿಬಿ 18 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಅಥವಾ 11 ಎಸೆತಗಳು ಉಳಿದಿರುವಾಗ ಗೆಲ್ಲಲು ಸಾಧ್ಯವಾಗದಿದ್ದರೆ ಚೆನ್ನೈ ಕ್ವಾಲಿಫೈ ಆಗುತ್ತದೆ.

ಮಳೆಯಾದರೆ ಏನು?

ಮಳೆಯಿಂದ ಚೆನ್ನೈ ಸೂಪರ್ ಕಿಂಗ್ಸ್​ಗೆ ನೇರ ಲಾಭವಾಗಲಿದೆ. ಬೆಂಗಳೂರಿನಲ್ಲಿ ಶನಿವಾರವೂ ಮಳೆಯಾಗುವ ಮುನ್ಸೂಚನೆ ಇದೆ. ಮಳೆ ಸುರಿದು ಪಂದ್ಯ ರದ್ದಾದರೆ ಚೆನ್ನೈ ಸೂಪರ್ ಕಿಂಗ್ಸ್ 15 ಅಂಕಗಳೊಂದಿಗೆ ಪ್ಲೇ ಆಫ್ ತಲುಪಲಿದೆ. ಆದರೆ ಆರ್‌ಸಿಬಿ 13 ಅಂಕಗಳೊಂದಿಗೆ ಆರು ಅಥವಾ ಏಳನೇ ಸ್ಥಾನದಲ್ಲಿ ಉಳಿದು ಟೂರ್ನಿಯಿಂದ ಹೊರಬೀಳಲಿದೆ.

ಆರ್​ಸಿಬಿ- ಸಿಎಸ್​ಕೆ ಪಂದ್ಯದ ಟಿಕೆಟ್ ಬೇಕಾ? ಎಚ್ಚರಿಕೆ..!; 3 ಲಕ್ಷ ಕಳೆದುಕೊಂಡ ಬೆಂಗಳೂರಿನ ಅಭಿಮಾನಿ

ಚೆನ್ನೈ ಟಾಪ್-2ರಲ್ಲಿ ಬರಬಹುದು

ಚೆನ್ನೈ ಸೂಪರ್ ಕಿಂಗ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರ-2ರಲ್ಲಿ ಉಳಿಯುವ ಅವಕಾಶ ಕೂಡ ಹೊಂದಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ತಮ್ಮ ಕೊನೆಯ ಪಂದ್ಯಗಳಲ್ಲಿ ಸೋತರೆ ಮತ್ತು ಚೆನ್ನೈ, ಆರ್‌ಸಿಬಿಯನ್ನು ಸೋಲಿಸಿದರೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತಲುಪುತ್ತದೆ. ಸದ್ಯ ರಾಜಸ್ಥಾನ್ 16 ಅಂಕ ಹಾಗೂ ಹೈದರಾಬಾದ್ 15 ಅಂಕ ಹೊಂದಿದೆ. ಅಂತಿಮ ಪಂದ್ಯದಲ್ಲಿ ರಾಜಸ್ಥಾನ್ ಗೆದ್ದರೆ ಎರಡನೇ ಸ್ಥಾನ ಖಚಿತವಾಗಲಿದೆ. ಒಂದು ವೇಳೆ ಸೋತು ಹೈದರಾಬಾದ್ ಗೆದ್ದರೆ ಕಮ್ಮಿನ್ಸ್ ತಂಡ ಎರಡನೇ ಸ್ಥಾನಕ್ಕೇರಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ