
ಇಡೀ ಕ್ರಿಕೆಟ್ ಜಗತ್ತೇ ಕಿಂಗ್ ಕೊಹ್ಲಿಯ (Virat Kohli) ದಾಖಲೆಯ 49ನೇ ಏಕದಿನ ಶತಕವನ್ನು ಮುಕ್ತ ಕಂಠದಿಂದ ಹಾಡಿ ಹೊಗುಳಿದಿದೆ. ವಿಶ್ವ ಕ್ರಿಕೆಟ್ನ ಖ್ಯಾತ ಆಟಗಾರರಿಂದ ಹಿಡಿದು ಮಾಜಿ ಕ್ರಿಕೆಟಿಗರು ಸೇರಿದಂತೆ ಹಲವು ಗಣ್ಯರು ವಿರಾಟ್ ಕೊಹ್ಲಿಯವರ ಈ ಐತಿಹಾಸಿಕ ಸಾಧನೆಗೆ ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಆದರೆ ವಿಶ್ವಕಪ್ (ICC World Cup 2023) ಆಡಲು ಭಾರತಕ್ಕೆ ಬಂದಿರುವ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ಗೆ (Kusal Mendis) ಕಿಂಗ್ ಕೊಹ್ಲಿ ಈ ಸಾಧನೆ ಇಷ್ಟವಿಲ್ಲ ಎಂದು ತೊರುತ್ತದೆ. ಹೀಗಾಗಿಯೇ ಅವರು ಕೊಹ್ಲಿಯ ಈ ಶತಕಕ್ಕೆ ಅಭಿನಂದನೆ ಸಲ್ಲಿಸುವುದನ್ನು ನಿರಾಕರಿಸಿದ್ದಾರೆ.
ವಾಸ್ತವವಾಗಿ ಇಂದು ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ 38ನೇ ವಿಶ್ವಕಪ್ ಪಂದ್ಯ ನಡೆಯಲ್ಲಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡ ಈಗಾಗಲೇ ವಿಶ್ವಕಪ್‌ನಿಂದ ಹೊರಬಿದ್ದಿದೆ. ಶ್ರೀಲಂಕಾ ಕೂಡ ಟೂರ್ನಿಯಿಂದ ಭಾಗಶಃ ಹೊರಬಿದ್ದಿದ್ದರೂ, ಅದಕ್ಕಿನ್ನೂ ಸೆಮಿಫೈನಲ್ಗೇರುವ ಅವಕಾಶಗಳಿವೆ. ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ ತಂಡ ಒಂಬತ್ತನೇ ಸ್ಥಾನದಲ್ಲಿದ್ದರೆ ಶ್ರೀಲಂಕಾ ಏಳನೇ ಸ್ಥಾನದಲ್ಲಿದೆ. ಇನ್ನು ಈ ಪಂದ್ಯಕ್ಕೆ ಒಂದು ದಿನ ಮುನ್ನ ಉಭಯ ತಂಡಗಳ ನಾಯಕ ಪತ್ರಿಕಾಗೋಷ್ಠಿ ನಡೆಸಲಾಗಿದೆ.
‘ನನಗೆ 365 ದಿನಗಳು ಬೇಕಾಯ್ತು’; ಕೊಹ್ಲಿಯ ಶತಕವನ್ನು ಸಚಿನ್ ತೆಂಡೂಲ್ಕರ್ ಅಭಿನಂದಿಸಿದ್ದು ಹೀಗೆ
ಈ ವೇಳೆ ತಂಡದ ತಯಾರಿ ಬಗ್ಗೆ ಮಾತನಾಡಿದ ಶ್ರೀಲಂಕಾ ತಂಡದ ನಾಯಕ ಕುಸಾಲ್ ಮೆಂಡಿಸ್ ಬಳಿ, ವಿರಾಟ್ ಕೊಹ್ಲಿ ಅವರ ಶತಕದ ಬಗ್ಗೆ ಪ್ರಶ್ನೆ ಮಾಡಲಾಯಿತು. ಆದರೆ ಈ ಪ್ರಶ್ನೆಗೆ ಲಂಕಾ ನಾಯಕ ನೀಡಿದ ಉತ್ತರ ಎಲ್ಲರನ್ನೂ ಅಚ್ಚರಿಗೊಳಿಸಿತು. ಪತ್ರಿಕಾಗೋಷ್ಠಿಯಲ್ಲಿ ನೆರೆದಿದ್ದವರಲ್ಲಿ ಒಬ್ಬರು, ದಾಖಲೆಯ 49ನೇ ಏಕದಿನ ಶತಕವನ್ನು ಸಿಡಿಸಿರುವ ವಿರಾಟ್ ಕೊಹ್ಲಿಯವರನ್ನು ಅಭಿನಂದಿಸುತ್ತೀರಾ ಎಂದು ಮೆಂಡಿಸ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮೆಂಡಿಸ್, ನಾನ್ಯಾಕೆ ಅವರನ್ನು ಅಭಿನಂದಿಸಬೇಕು? ಎಂಬ ಉತ್ತರ ನೀಡಿದ್ದಾರೆ. ವಿರಾಟ್ ಬಗ್ಗೆ ಕುಸಲ್ ನೀಡಿರುವ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಸಲ್ ಹೇಳಿಕೆ ಭಾರತೀಯರು ಮತ್ತು ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕೆರಳಿಸಿದೆ. ಒಂದು ತಂಡದ ನಾಯಕ ಆ ರೀತಿ ಮಾತನಾಡುವುದು ಸರಿಯಲ್ಲ ಎಂದು ನೆಟ್ಟಿಗರು ಕುಸಾಲ್ ಅವರನ್ನು ಟೀಕಿಸಿದ್ದಾರೆ.
Journalist " Virat Just scored his 49th ODI ton. Do you like to congratulate him?"
Kusak Mendis" Why I would congratulate him"😭😭😭#INDvSA #INDvsSA #SAvIND #ViratKohli #CWC2023 pic.twitter.com/DAqh2oeO5e
— Out Of Context Cricket PK (@GemsOfCrickett) November 5, 2023
ಏತನ್ಮಧ್ಯೆ, ಬಾಂಗ್ಲಾದೇಶ ವಿರುದ್ಧದ ಪಂದ್ಯವು ಶ್ರೀಲಂಕಾಕ್ಕೆ ಮಾಡು ಇಲ್ಲವೇ ಮಡಿ ಆಗಿದೆ. ವಿಶ್ವಕಪ್‌ನಲ್ಲಿ ಶ್ರೀಲಂಕಾ ತನ್ನ ಸವಾಲನ್ನು ಉಳಿಸಿಕೊಳ್ಳಬೇಕಾದರೆ, ಬಾಂಗ್ಲಾದೇಶದ ವಿರುದ್ಧ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕು. ಬಾಂಗ್ಲಾದೇಶ ಹಾಗೂ ಶ್ರೀಲಂಕಾ ನಡುವಿನ ಪಂದ್ಯ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ