ಸತತ ಸೋಲುಗಳಿಂದ ಕಂಗೆಟ್ಟಿದ್ದ ಶ್ರೀಲಂಕಾ ತಂಡವು ಇದೀಗ ಗೆಲುವಿನ ನಾಗಾಲೋಟದೊಂದಿಗೆ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಅದು ಕೂಡ ಐತಿಹಾಸಿಕ ಗೆಲುವುಗಳ ಮೂಲಕ. ಈ ಗೆಲುವುಗಳ ಹಿಂದಿರುವ ಮಾಸ್ಟರ್ ಮೈಂಡ್ ಮಾಜಿ ಕ್ರಿಕೆಟಿಗ, ಪ್ರಸ್ತುತ ಶ್ರೀಲಂಕಾ ತಂಡದ ಕೋಚ್ ಸನತ್ ಜಯಸೂರ್ಯ.
ಸನತ್ ಜಯಸೂರ್ಯ ಶ್ರೀಲಂಕಾ ತಂಡದ ಮುಖ್ಯ ಕೋಚ್ ಆದ ಬಳಿಕ ಹಲವು ಐತಿಹಾಸಿಕ ಜಯ ಸಾಧಿಸಿದೆ. ಇದೀಗ ನ್ಯೂಝಿಲೆಂಡ್ ವಿರುದ್ಧ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಈ ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಸನತ್ ಜಯಸೂರ್ಯ ಅವರ ಗರಡಿಯಲ್ಲಿ ಶ್ರೀಲಂಕಾ ತಂಡದ ಇತ್ತೀಚಿನ ಪ್ರದರ್ಶನವನ್ನು ನೋಡುವುದಾದರೆ….
ಅಂದರೆ ಶ್ರೀಲಂಕಾ ಪಾಲಿಗೆ ಮರೀಚಿಕೆಯಾಗಿದ್ದ ಗೆಲುವುಗಳು ಇದೀಗ ಕೇವಲ ಎರಡು ತಿಂಗಳುಗಳ ಅಂತರದಲ್ಲಿ ದಕ್ಕಿರುವುದು ವಿಶೇಷ. ಹೀಗಾಗಿಯೇ ಸನತ್ ಜಯಸೂರ್ಯ ಅವರ ಮುಂದಾಳತ್ವದಲ್ಲಿ ಶ್ರೀಲಂಕಾ ತಂಡವು ತನ್ನ ಗತಕಾಲದ ವೈಭವಕ್ಕೆ ಮರಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸ್ತುತ ತಂಡದ ಪ್ರದರ್ಶನವನ್ನು ಗಮನಿಸಿದರೆ, ಅಂತಹದೊಂದು ವೈಭವಕ್ಕೆ ಶ್ರೀಲಂಕಾ ತಂಡ ಮರಳಿದರೂ ಅಚ್ಚರಿಪಡಬೇಕಿಲ್ಲ. ಇದಾಗ್ಯೂ ಶ್ರೀಲಂಕಾ ತಂಡದ ಅಸಲಿ ಆಟ ಗೊತ್ತಾಗುವುದು ಐಸಿಸಿ ಟೂರ್ನಿಯಲ್ಲಿ. ಆದರೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಗೆ ಶ್ರೀಲಂಕಾ ಅರ್ಹತೆ ಪಡೆದಿಲ್ಲ. ಹೀಗಾಗಿ ಪ್ರಮುಖ ಟೂರ್ನಿಯಲ್ಲಿ ಸನತ್ ಜಯಸೂರ್ಯ ಮುಂದಾಳತ್ವದಲ್ಲಿ ಶ್ರೀಲಂಕಾ ಹೇಗೆ ಪ್ರದರ್ಶನ ನೀಡಲಿದೆ ಎಂದು ತಿಳಿಯಲು 2026ರ ಟಿ20 ವಿಶ್ವಕಪ್ವರೆಗೂ ಕಾಯಲೇಬೇಕು.
ಶ್ರೀಲಂಕಾ ಪರ 110 ಟೆಸ್ಟ್ ಪಂದ್ಯಗಳನ್ನಾಡಿರುವ ಸನತ್ ಜಯಸೂರ್ಯ ಒಟ್ಟು 6973 ರನ್ ಕಲೆಹಾಕಿದ್ದಾರೆ. ಈ ವೇಳೆ 3 ದ್ವಿಶತಕ, 31 ಅರ್ಧಶತಕ ಹಾಗೂ 14 ಶತಕಗಳನ್ನು ಸಿಡಿಸಿದ್ದಾರೆ. ಹಾಗೆಯೇ 445 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಎಡಗೈ ದಾಂಡಿಗ, 28 ಶತಕ ಹಾಗೂ 68 ಅರ್ಧಶತಕಗಳೊಂದಿಗೆ ಒಟ್ಟು 13430 ರನ್ ಕಲೆಹಾಕಿದ್ದಾರೆ. ಇದರ ಜೊತೆಗೆ 31 ಟಿ20 ಪಂದ್ಯಗಳಲ್ಲಿ ಕಾಣಿಸಿಕೊಂಡಿರುವ ಸನತ್ ಜಯಸೂರ್ಯ 4 ಅರ್ಧಶತಕಗಳೊಂದಿಗೆ 629 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಟೆಸ್ಟ್ಗೆ ಇಬ್ಬರು ಅಲಭ್ಯ: ಜಸ್ಪ್ರೀತ್ ಬುಮ್ರಾ ಕ್ಯಾಪ್ಟನ್
ಇನ್ನು ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಕ್ರಮವಾಗಿ 98, 323 ಮತ್ತು 19 ವಿಕೆಟ್ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಶ್ರೀಲಂಕಾ ತಂಡ ಕಂಡ ಅತ್ಯಂತ ಶ್ರೇಷ್ಠ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕೋಚ್ ಆಗಿಯೂ ಸನತ್ ಜಯಸೂರ್ಯ ಹೊಸ ಸಂಚಲನ ಸೃಷ್ಟಿಸಿದ್ದಾರೆ.