- Kannada News Photo gallery Cricket photos IND vs ENG most sixes in test ravindra jadeja surpasses sanath jayasuriya
IND vs ENG: ಲಂಕಾ ಲೆಜೆಂಡ್ ಜಯಸೂರ್ಯ ದಾಖಲೆ ಮುರಿದ ರವೀಂದ್ರ ಜಡೇಜಾ..!
IND vs ENG: ಈ ಪಂದ್ಯದಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿರುವ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ಅಧಿಕ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದಿದ್ದಾರೆ.
Updated on: Jan 26, 2024 | 6:38 PM

ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಅಜೇಯ ಅರ್ಧಶತಕ ಸಿಡಿಸಿರುವ ರವೀಂದ್ರ ಜಡೇಜಾ ತಂಡದ ಬೃಹತ್ ಮುನ್ನಡೆಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಎರಡನೇ ದಿನದಾಟದಲ್ಲಿ ಕೆಎಲ್ ರಾಹುಲ್ ಜೊತೆ ಉತ್ತಮ ಜೊತೆಯಾಟ ನಡೆಸಿದ ಜಡೇಜಾ ಅಜೇಯ 81 ರನ್ ಕಲೆಹಾಕಿದ್ದಾರೆ.

ಇದರೊಂದಿಗೆ ಈ ಪಂದ್ಯದಲ್ಲಿ ಎರಡು ಭರ್ಜರಿ ಸಿಕ್ಸರ್ ಸಿಡಿಸಿರುವ ಜಡೇಜಾ ಟೆಸ್ಟ್ ಕ್ರಿಕೆಟ್ನಲ್ಲಿ ಅಧಿಕ ಸಿಕ್ಸರ್ ಸಿಡಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ಶ್ರೀಲಂಕಾದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸನತ್ ಜಯಸೂರ್ಯ ಅವರ ದಾಖಲೆಯನ್ನು ಮುರಿದಿದ್ದಾರೆ.

ಇದೀಗ ಟೆಸ್ಟ್‌ನಲ್ಲಿ 69 ಪಂದ್ಯಗಳನ್ನಾಡಿರುವ ಜಡೇಜಾ ಭರ್ತಿ 60 ಸಿಕ್ಸರ್‌ಗಳನ್ನು ಬಾರಿಸಿದ್ದು, ಈ ವಿಚಾರದಲ್ಲಿ 110 ಟೆಸ್ಟ್ ಪಂದ್ಯಗಳಲ್ಲಿ 59 ಸಿಕ್ಸರ್ ಬಾರಿಸಿದ್ದ ಸನತ್ ಜಯಸೂರ್ಯರನ್ನು ಹಿಂದಿಕ್ಕಿದ್ದಾರೆ.

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ 127 ಸಿಕ್ಸರ್ ಬಾರಿಸಿದ್ದಾರೆ. ಅವರ ನಂತರ ಎರಡನೇ ಸ್ಥಾನದಲ್ಲಿರುವ ಭಾರತದ ವೀರೇಂದ್ರ ಸೆಹ್ವಾಗ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 91 ಸಿಕ್ಸರ್ಗಳನ್ನು ಹೊಡೆದಿದ್ದಾರೆ.

ಇನ್ನು ಟೆಸ್ಟ್‌ನಲ್ಲಿ ಅಧಿಕ ಸಿಕ್ಸರ್ ಸಿಡಿಸಿರುವ ಭಾರತೀಯ ಬ್ಯಾಟರ್ಗಳ ವಿಚಾರಕ್ಕೆ ಬರುವುದಾದರೆ.. 104 ಟೆಸ್ಟ್‌ಗಳಲ್ಲಿ 91 ಸಿಕ್ಸರ್‌ಗಳನ್ನು ಬಾರಿಸಿರುವ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ.

ಎರಡನೇ ಸ್ಥಾನದಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ 90 ಟೆಸ್ಟ್‌ಗಳಲ್ಲಿ 78 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಇದುವರೆಗೆ 55 ಟೆಸ್ಟ್ ಪಂದ್ಯಗಳಲ್ಲಿ 77 ಸಿಕ್ಸರ್ ಬಾರಿಸಿದ್ದಾರೆ.

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 69 ಸಿಕ್ಸರ್‌ಗಳನ್ನು ಬಾರಿಸಿದ್ದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 131 ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮಾಜಿ ನಾಯಕ ಕಪಿಲ್ ದೇವ್ ಒಟ್ಟು 61 ಸಿಕ್ಸರ್‌ಗಳನ್ನು ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪ್ರಸ್ತುತ 60 ಸಿಕ್ಸರ್‌ಗಳನ್ನು ಬಾರಿಸಿರುವ ರವೀಂದ್ರ ಜಡೇಜಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಇನ್ನೇರಡು ಸಿಕ್ಸರ್ಗಳನ್ನು ಬಾರಿಸಿದರೆ ಕಪಿಲ್ ದೇವ್ ದಾಖಲೆಯನ್ನು ಮುರಿಯಲ್ಲಿದ್ದಾರೆ.

ಪಂದ್ಯದ ವಿಚಾರಕ್ಕೆ ಬರುವುದಾದರೆ.. ತಮ್ಮ ಇನ್ನಿಂಗ್ಸ್ನಲ್ಲಿ 155 ಎಸೆತಗಳನ್ನು ಎದುರಿಸಿರುವ ಜಡೇಜಾ 7 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ಸಹಾಯದಿಂದ ಅಜೇಯ 81 ರನ್ ಕಲೆಹಾಕಿದ್ದಾರೆ. ದಿನದಾಟದಂತ್ಯಕ್ಕೆ ಭಾರತ 7 ವಿಕೆಟ್ ಕಳೆದುಕೊಂಡು 421 ರನ್ ಕಲೆಹಾಕಿದೆ. ಈ ಮೂಲಕ 175 ರನ್ಗಳ ಮುನ್ನಡೆ ಕಾಯ್ದುಕೊಂಡಿದೆ.




