
ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಹಂಗಾಮಿ ನಾಯಕರಾಗಿ ಕಾಣಿಸಿಕೊಂಡಿದ್ದ ಸ್ಮಿತ್ ಟೀಮ್ ಇಂಡಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 71 ರನ್ ಬಾರಿಸಿ ಮಿಂಚಿದ್ದರು. ಇದಾಗ್ಯೂ ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಿರಲಿಲ್ಲ. ಈ ಸೋಲಿನ ಬೆನ್ನಲ್ಲೇ 35 ವರ್ಷದ ಸ್ಮಿತ್ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನ ಸ್ಮಿತ್ ಕೇವಲ ಬ್ಯಾಟರ್ ಆಗಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಗಾಯದ ಕಾರಣ ಟೂರ್ನಿಯಿಂದ ಹಿಂದೆ ಸರಿದ ಹಿನ್ನಲೆ ಸ್ಮಿತ್ ಅವರಿಗೆ ನಾಯಕತ್ವ ನೀಡಲಾಗಿತ್ತು. ಅದರಂತೆ ಸೆಮಿಫೈನಲ್ವರೆಗೆ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಆಸ್ಟ್ರೇಲಿಯಾ ಪರ 170 ಏಕದಿನ ಪಂದ್ಯಗಳನ್ನಾಡಿರುವ ಸ್ಟೀವ್ ಸ್ಮಿತ್ 155 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 12 ಶತಕ ಹಾಗೂ 35 ಅರ್ಧಶತಕಗಳೊಂದಿಗೆ ಒಟ್ಟು 5800 ರನ್ ಕಲೆಹಾಕಿದ್ದಾರೆ. ಇನ್ನು ಸ್ಮಿತ್ ಅವರನ್ನು ಕಳೆದ ಟಿ20 ವಿಶ್ವಕಪ್ ವೇಳೆ ಆಯ್ಕೆಗೆ ಪರಿಗಣಿಸಲಾಗಿಲ್ಲ. ಇದಾಗ್ಯೂ ಅವರು ಟಿ20 ಮತ್ತು ಟೆಸ್ಟ್ ತಂಡಗಳಲ್ಲಿ ಮುಂದುವರೆಯುವುದಾಗಿ ತಿಳಿಸಿದ್ದಾರೆ. ಅದರಂತೆ ಮುಂಬರುವ ದಿನಗಳಲ್ಲಿ ಸ್ಮಿತ್ ಆಸ್ಟ್ರೇಲಿಯಾ ಟೆಸ್ಟ್ ತಂಡದಲ್ಲಿ ಮಾತ್ರ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಇನ್ನು ನಿವೃತ್ತಿ ಬಗ್ಗೆ ಮಾತನಾಡಿರುವ ಸ್ಟೀವ್ ಸ್ಮಿತ್, ಇದೊಂದು ಅದ್ಭುತ ಪ್ರಯಾಣವಾಗಿತ್ತು. ನಾನು ಪ್ರತಿ ನಿಮಿಷವನ್ನು ಆನಂದಿಸಿದ್ದೇನೆ. ಅಲ್ಲಿ ಹಲವು ಅದ್ಭುತ ಕ್ಷಣಗಳು ಮತ್ತು ಅದ್ಭುತ ನೆನಪುಗಳಿವೆ. ಎರಡು ವಿಶ್ವಕಪ್ ಗೆಲ್ಲುವುದು ಒಂದು ದೊಡ್ಡ ಸಾಧನೆ. ಈ ಪಯಣದಲ್ಲಿ ತಂಡದ ಅನೇಕ ಉತ್ತಮ ಸದಸ್ಯರು ಜೊತೆಗಿದ್ದರು. 2027 ರ ಏಕದಿನ ವಿಶ್ವಕಪ್‌ಗೆ ತಯಾರಿ ನಡೆಸಲು ಈಗ ಉತ್ತಮ ಅವಕಾಶ. ಆದ್ದರಿಂದ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ಹೀಗಾಗಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿರುವುದಾಗಿ ಸ್ಟೀವನ್ ಪೀಟರ್ ಡೆವೆರೆಕ್ಸ್ ಸ್ಮಿತ್ (ಸ್ಟೀವ್ ಸ್ಮಿತ್) ತಿಳಿಸಿದ್ದಾರೆ.
ಇದನ್ನೂ ಓದಿ: Virat Kohli: ಮಾಸ್ಟರ್ ಚೇಸ್ ಮಾಸ್ಟರ್ನ ವಿಶ್ವ ದಾಖಲೆ
Published On - 12:13 pm, Wed, 5 March 25