Suryakumar Yadav: ಟೆಸ್ಟ್ ಕ್ರಿಕೆಟ್ಗೆ ಕಾಲಿಟ್ಟ ನಂಬರ್ ಒನ್ ಬ್ಯಾಟರ್: ರವಿಶಾಸ್ತ್ರಿಯಿಂದ ಕ್ಯಾಪ್ ಪಡೆದ ಸೂರ್ಯಕುಮಾರ್
India vs Australia 1st Test: ಟಿ20 ಕ್ರಿಕೆಟ್ನ ನಂಬರ್ ಒನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಹಾಗೂ ವಿಕೆಟ್ ಕೀಪರ್ ಶ್ರೀಕರ್ ಭರತ್ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಪರ ಪದಾರ್ಪಣೆ ಮಾಡಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಟೆಸ್ಟ್ ಸರಣಿಗೆ ಚಾಲನೆ ಸಿಕ್ಕಿದೆ. ಇಂದು ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಪಂದ್ಯ ಶುರುವಾಗಿದ್ದು ಬ್ಯಾಟಿಂಗ್ ಆರಂಭಿಸಿರುವ ಆಸೀಸ್ಗೆ ಭಾರತದ ವೇಗಿಗಳು ಆರಂಭದಲ್ಲೇ ಶಾಕ್ ನೀಡಿದರು. ಇದರ ನಡುವೆ ಭಾರತ ಪರ ಟೆಸ್ಟ್ ಕ್ರಿಕೆಟ್ಗೆ ಇಬ್ಬರು ಆಟಗಾರರು ಪದಾರ್ಪಣೆ ಮಾಡಿದ್ದಾರೆ. ಟಿ20 ಕ್ರಿಕೆಟ್ನ ನಂಬರ್ ಒನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (Suryakumar Yadav) ಹಾಗೂ ವಿಕೆಟ್ ಕೀಪರ್ ಶ್ರೀಕರ್ ಭರತ್ (KS Bharat) ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ.
ಟಾಸ್ ಪ್ರಕ್ರಿಯೆಗೂ ಮುನ್ನ ಟೀಮ್ ಇಂಡಿಯಾದ ಮಾಜಿ ದಿಗ್ಗಜ ಆಟಗಾರ, ಮಾಜಿ ಕೋಚ್ ರವಿಶಾಸ್ತ್ರಿ ಅವರು ಸೂರ್ಯಕುಮಾರ್ ಹಾಗೂ ಭರತ್ಗೆ ಟೆಸ್ಟ್ ಕ್ಯಾಪ್ ನೀಡಿದರು. ಇದರ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಭರತ್ಗೆ ಕ್ಯಾಪ್ ನೀಡಿದ ಬಳಿಕ ಅವರ ತಾಯಿ ಮೈದಾನದಲ್ಲೇ ಮಗನಿಗೆ ಮುತ್ತಿಟ್ಟ ಘಟನೆ ಕೂಡ ನಡೆಯಿತು. ಇತ್ತ ಆಸ್ಟ್ರೇಲಿಯಾ ಪರ ಕೂಡ ಟಾಡ್ ಮರ್ಫಿ ಪದಾರ್ಪಣೆ ಮಾಡಿದ್ದಾರೆ. ಭಾರತದ ಪ್ಲೇಯಿಂಗ್ ಇಲೆವೆನ್ನಲ್ಲಿ ಶುಭ್ಮನ್ ಗಿಲ್ ಅವಕಾಶ ಪಡೆದಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಸೂರ್ಯ ಹಾಗೂ ಗಿಲ್ ನಡುವೆ ಯಾರಿಗೆ ಅವಕಾಶ ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಅಂತಿಮವಾಗಿ ಸೂರ್ಯಗೆ ಅವಕಾಶ ನೀಡಲಾಗಿದೆ.
SKY makes his TEST DEBUT as he receives the Test cap from former Head Coach @RaviShastriOfc ? ?
Good luck @surya_14kumar ? ?#TeamIndia | #INDvAUS | @mastercardindia pic.twitter.com/JVRyK0Vh4u
— BCCI (@BCCI) February 9, 2023
India vs Australia: ಮೊದಲ ಟೆಸ್ಟ್ನಲ್ಲೇ ನಿರ್ಮಾಣವಾಗುತ್ತಾ 5 ವಿಶ್ವ ದಾಖಲೆಗಳು?
ಟಾಸ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ”ನಾವು ಕೂಡ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡುವ ಯೋಜನೆಯಲ್ಲಿದ್ದೆವು. ಈ ಪಿಚ್ ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುತ್ತದೆ. ಇದು ಎಷ್ಟರ ಮಟ್ಟಿಗೆ ಯಶಸ್ಸಿಯಾಗುತ್ತೆ ಎಂಬುದು ಕಾದುನೋಡಬೇಕಿದೆ. ನಿನ್ನೆ ಟ್ರೈನಿಂಗ್ ಸೆಷನ್ ಶುರು ಮಾಡಿದಾಗ ವೇಗಿಗಳಿಗೂ ಸಹಾಯ ಆಗಲಿದೆ ಎಂಬಂತೆ ಗೋಚರಿಸಿತು. ಕಳೆದ 5-6 ದಿನಗಳಿಂದ ಈ ಟೆಸ್ಟ್ಗೆ ಸತತ ಅಭ್ಯಾಸ ನಡೆಸುತ್ತಿದ್ದೇವೆ. ಈ ಟೆಸ್ಟ್ ಸರಣಿ ಎಷ್ಟು ಮುಖ್ಯ ಎಂಬುದು ನಮಗೆ ತಿಳಿದಿದೆ. ನಾವು ಮೂವರು ಸ್ನಿನ್ನರ್ಗಳು, ಇಬ್ಬರು ವೇಗಿಗಳೊಂದಿಗೆ ಆಡುತ್ತಿದ್ದೇವೆ. ಸೂರ್ಯಕುಮಾರ್ ಮತ್ತು ಭರತ್ ಪದಾರ್ಪಣೆ ಮಾಡುತ್ತಿದ್ದಾರೆ,” ಎಂದು ರೋಹಿತ್ ಹೇಳಿದರು.
ಭಾರತ ಪರ ಓಪನರ್ ಆಗಿ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಕಣಕ್ಕಿಳಿಯಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ್ ಪೂಜಾರ ಆಡಲಿದ್ದು ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಬ್ಯಾಟ್ ಬೀಸಲಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಆಯ್ಕೆ ಆಗಿದ್ದಾರೆ. ಐದನೇ ಕ್ರಮಾಂಕದಲ್ಲಿ ಕೆಎಸ್ ಭರತ್ ಆಡುತ್ತಿದ್ದು ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್ ಹಾಗೂ ಅಕ್ಷರ್ ಪಟೇಲ್ ಸ್ಪಿನ್- ಆಲ್ರೌಂಡರ್ಗಳಾಗಿದ್ದಾರೆ. ವೇಗಿಗಳಾಗಿ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಭಾರತ ಪ್ಲೇಯಿಂಗ್ XI: ರೋಹಿತ್ ಶರರ್ಮಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್/ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ ಪ್ಲೇಯಿಂಗ್ XI: ಡೇವಿಡ್ ವಾರ್ನರ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್, ಪೀಟರ್ ಹ್ಯಾಂಡ್ಸ್ಕಾಂಬ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲಂಡ್, ಟಾಡ್ ಮರ್ಫಿ, ನೇಥನ್ ಲ್ಯಾನ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ