India vs New Zealand: ಜೈಪುರದಲ್ಲಿ ಬೆಳಗಿದ ಸೂರ್ಯ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆದ್ದು ಬೀಗಿದ ಭಾರತ

| Updated By: Vinay Bhat

Updated on: Nov 18, 2021 | 7:20 AM

Suryakumar Yadav, IND vs NZ: ನ್ಯೂಜಿಲೆಂಡ್ ನೀಡಿದ್ದ 165 ರನ್‌ಗಳ ಗುರಿಯನ್ನ ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಭರ್ಜರಿ ಆರಂಭವನ್ನು ನೀಡಿದರು. ಪವರ್‌ಪ್ಲೇ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪರಿಣಾಮ 4.5 ಓವರ್‌ಗಳಲ್ಲಿ 50 ರನ್‌ಗಳ ಗಡಿ ಮುಟ್ಟಿತು.

India vs New Zealand: ಜೈಪುರದಲ್ಲಿ ಬೆಳಗಿದ ಸೂರ್ಯ: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಗೆದ್ದು ಬೀಗಿದ ಭಾರತ
Suryakumar yadav India vs New Zealand
Follow us on

ಜೈಪುರದ ಸವಾಯ್ ಮಾನ್​ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ (India vs New Zealand) ತಂಡ ಭರ್ಜರಿ ಗೆಲುವು ಸಾಧಿಸಿದೆ. ರೋಚಕ ಕದನದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಆಕರ್ಷಕ ಅರ್ಧಶತಕ ಮತ್ತು ರೋಹಿತ್ ಶರ್ಮಾ (Rohit Sharma) ಅವರ ನಾಯಕನ ಆಟದ ನೆರವಿನಿಂದ ಟೀಮ್ ಇಂಡಿಯಾ (Team India) 5 ವಿಕೆಟ್​ಗಳ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಅಲ್ಲದೆ ಪರಿಪೂರ್ಣ ನಾಯಕನಾಗಿ ರೋಹಿತ್​ಗೆ ಮತ್ತು ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್​ಗೆ (Rahul Dravid) ಸಿಕ್ಕ ಚೊಚ್ಚಲ ಗೆಲುವಾಗಿದೆ. ಪ್ರಮುಖ ಸ್ಟಾರ್ ಆಟಗಾರರ ಅಲಭ್ಯತೆ ನ್ಯೂಜಿಲೆಂಡ್ (New Zealand Cricket Team) ತಂಡದಲ್ಲಿ ಎದ್ದು ಕಾಣಿಸಿದ್ದು, ಅನುಭವಿಗಳ ಕೊರಯೆಯಿಂದ ಮೊದಲ ಪಂದ್ಯದಲ್ಲಿ ಮುಗ್ಗರಿಸಿದೆ.

ನ್ಯೂಜಿಲೆಂಡ್ ನೀಡಿದ್ದ 165 ರನ್‌ಗಳ ಗುರಿಯನ್ನ ಬೆನ್ನತ್ತಿದ ಟೀಮ್ ಇಂಡಿಯಾಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ಉಪನಾಯಕ ಕೆಎಲ್ ರಾಹುಲ್ ಭರ್ಜರಿ ಆರಂಭವನ್ನು ನೀಡಿದರು. ಪವರ್‌ಪ್ಲೇ ಓವರ್‌ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಪರಿಣಾಮ 4.5 ಓವರ್‌ಗಳಲ್ಲಿ 50 ರನ್‌ಗಳ ಗಡಿ ಮುಟ್ಟಿತು. ಆದ್ರೆ ಈ ಉತ್ತಮ ಆರಂಭಕ್ಕೆ ಮಿಚೆಲ್ ಸ್ಯಾಂಟ್ನರ್ ಬ್ರೇಕ್ ಹಾಕಿದರು. ರಾಹುಲ್ ಚಾಪ್‌ಮನ್‌ಗೆ ಕ್ಯಾಚಿತ್ತು 15 ರನ್‌ಗೆ ಪೆವಿಲಿಯನ್ ಸೇರಿಕೊಂಡರು.

ತದನಂತರ 2ನೇ ವಿಕೆಟ್ ಜೊತೆಯಾದ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಕಿವೀಸ್ ಬೌಲರ್‌ಗಳನ್ನು ಬೆಂಡೆತ್ತಿದರು. ಸೂರ್ಯ ತಮ್ಮ ನೈಜ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡಕ್ಕೆ ನೆರವಾದರೆ, ರೋಹಿತ್ ಶರ್ಮಾ ನಾಯಕನ ಆಟವಾಡಿದರು. 36 ಎಸೆತಗಳಲ್ಲಿ 48 ರನ್‌ಗಳಿಸಿ ಇನ್ನಿಂಗ್ಸ್‌ ಮುಗಿಸಿದ ರೋಹಿತ್ ಇನ್ನಿಂಗ್ಸ್‌ನಲ್ಲಿ ಎರಡು ಭರ್ಜರಿ ಸಿಕ್ಸರ್ ಮತ್ತು ಐದು ಬೌಂಡರಿಗಳಿದ್ದವು. ಯಾದವ್ 40 ಎಸೆತಗಳಲ್ಲಿ 62 ರನ್‌ ದಾಖಲಿಸಿದರು. ಮೂರು ಸ್ಫೋಟಕ ಸಿಕ್ಸರ್‌ಗಳು ಮತ್ತು ಆರು ಬೌಂಡರಿಗಳಿದ್ದವು.

 

ಗೆಲುವಿನ ಬಳಿ ಸಮೀಪಿಸಿದ್ದ ಭಾರತವು ಕೊನೆಯ ಓವರ್‌ಗಳಲ್ಲಿ ರನ್‌ಗಳಿಸಲು ತಡಬಡಾಯಿಸಿತು. ಶ್ರೇಯಸ್ ಅಯ್ಯರ್ 5 ರನ್‌ಗಳಿಸಿ ಟಿಮ್ ಸೌಥಿಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್‌ನಲ್ಲಿ 10 ರನ್‌ಗಳ ಅವಶ್ಯಕತೆಯಿತ್ತು. ಚೊಚ್ಚಲ ಟಿ20 ಪಂದ್ಯವನ್ನಾಡಿದ ವೆಂಕಟೇಶ್ ಅಯ್ಯರ್ ಒಂದು ಬೌಂಡರಿ ದಾಖಲಿಸಿ ಭರವಸೆ ಮೂಡಿಸಿ ಔಟ್ ಆದರು. ಇತ್ತ ರಿಷಭ್ ಪಂತ್ ಬೌಂಡರಿ ಸಿಡಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು. ಟೀಮ್ ಇಂಡಿಯಾ ಎರಡು ಎಸೆತ ಬಾಕಿ ಇರುವಂತೆಯೇ ಐದು ವಿಕೆಟ್‌ಗಳ ಗೆಲುವು ದಾಖಲಿಸಿತು.

ಇದಕ್ಕೂ ಮುನ್ನ ನ್ಯೂಜಿಲೆಂಡ್ ಮಾರ್ಟಿನ್‌ ಗಪ್ಟಿಲ್‌ (70) ಮತ್ತು ಮಾರ್ಕ್‌ ಚಾಪ್ಮನ್‌ (63) ಬಾರಿಸಿದ ಅರ್ಧಶತಕಗಳ ಬಲದಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 164 ರನ್‌ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಸದ್ಯ ಭಾರತ ಇಂಡಿಯಾ 5 ವಿಕೆಟ್​ಗಳ ಜಯ ಸಾಧಿಸಿದ್ದು, ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಎರಡನೇ ಟಿ20 ಪಂದ್ಯ ನವೆಂಬರ್ 19 ರಂದು ಶುಕ್ರವಾರ ರಾಂಚಿಯ ಜೆಎಸ್​ಸಿಎ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ.

(Suryakumar Yadav and Rohit Sharma Shine India five-wicket win over New Zealand in the first T20I)