ಗೆಬ್ಬಾಗದಲ್ಲಿ ನಡೆದ ಸೌತ್ ಆಫ್ರಿಕಾ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 56 ರನ್ ಬಾರಿಸಿದ್ದರು. ಈ ಅರ್ಧಶತಕದೊಂದಿಗೆ ಟಿ20 ಕ್ರಿಕೆಟ್ನಲ್ಲಿ 2000 ರನ್ ಪೂರೈಸಿದ್ದರು.
ಟಿ20 ಕ್ರಿಕೆಟ್ನಲ್ಲಿ 2 ಸಾವಿರ ರನ್ ಪೂರೈಸುವ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ವಿಶೇಷ ದಾಖಲೆಯನ್ನೂ ಕೂಡ ಸರಿಗಟ್ಟಿದ್ದಾರೆ. ಅಂದರೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 2000 ರನ್ ಕಲೆಹಾಕಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು.
ಕಿಂಗ್ ಕೊಹ್ಲಿ 56 ಇನಿಂಗ್ಸ್ಗಳ ಮೂಲಕ ಈ ಸಾಧನೆ ಮಾಡಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಕೂಡ 56 ಟಿ20 ಇನಿಂಗ್ಸ್ಗಳ ಮೂಲಕ 2 ಸಾವಿರ ರನ್ ಪೂರೈಸಿ ವಿರಾಟ್ ಕೊಹ್ಲಿಯ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇನ್ನು ಟಿ20 ಕ್ರಿಕೆಟ್ನಲ್ಲಿ ಅತೀ ಕಡಿಮೆ ಇನಿಂಗ್ಸ್ಗಳಲ್ಲಿ 2 ಸಾವಿರ ರನ್ಗಳನ್ನು ಪೂರೈಸಿದ ವಿಶ್ವ ದಾಖಲೆ ಇರುವುದು ಪಾಕಿಸ್ತಾನದ ಬಾಬರ್ ಆಝಂ ಹಾಗೂ ಮೊಹಮ್ಮದ್ ರಿಝ್ವಾನ್ ಹೆಸರಿನಲ್ಲಿ ಎಂಬುದು ವಿಶೇಷ. ಈ ಇಬ್ಬರು ಆಟಗಾರರು 52 ಟಿ20 ಇನಿಂಗ್ಸ್ಗಳ ಮೂಲಕ 2000 ರನ್ ಪೂರೈಸಿ ವಿಶ್ವ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ: RCB ತಂಡದ ಅತ್ಯಂತ ಕೆಟ್ಟ ಆಯ್ಕೆಗಳಾವುವು ಗೊತ್ತಾ?