Suryakumar Yadav: ಎಲ್ಲರನ್ನ ಖುಷಿ ಪಡಿಸಲು ಸಾಧ್ಯವಿಲ್ಲ: ಕ್ಯಾಚ್ ಬಗ್ಗೆ ಸೂರ್ಯನ ಮನದಾಳದ ಮಾತು

|

Updated on: Jul 09, 2024 | 2:27 PM

Suryakumar Yadav: ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿದು ಸೂರ್ಯಕುಮಾರ್ ಯಾದವ್ ಸಂಚಲನ ಸೃಷ್ಟಿಸಿದ್ದರು. ಈ ಸಂಚಲನದ ಬೆನ್ನಲ್ಲೇ ಕ್ಯಾಚ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿತ್ತು. ಇದೀಗ ವಿವಾದದ ಬಗ್ಗೆ ಸೂರ್ಯಕುಮಾರ್ ಯಾದವ್ ಮಾತನಾಡಿದ್ದಾರೆ. ಅಲ್ಲದೆ ಕರಾವಳಿ ಭೇಟಿ ಬಗ್ಗೆ ಮನದನಿಸಿಕೆಯನ್ನು ಹಂಚಿಕೊಂಡಿದ್ದಾರೆ.

Suryakumar Yadav: ಎಲ್ಲರನ್ನ ಖುಷಿ ಪಡಿಸಲು ಸಾಧ್ಯವಿಲ್ಲ: ಕ್ಯಾಚ್ ಬಗ್ಗೆ ಸೂರ್ಯನ ಮನದಾಳದ ಮಾತು
Suryakumar Yadav
Follow us on

ಟಿ20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸೂರ್ಯಕುಮಾರ್ ಯಾದವ್ (Suryakumar Yadav) ಇಡೀ ಪಂದ್ಯದ ಚಿತ್ರಣ ಬದಲಿಸಿದ್ದರು. ಫೈನಲ್ ಓವರ್​ನ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಲಾಂಗ್ ಆಫ್​ನತ್ತ ಬಾರಿಸಿದ್ದರು. ಈ ವೇಳೆ ಬೌಂಡರಿ ಲೈನ್​ನಲ್ಲಿ ಓಡಿ ಬಂದು ಸೂರ್ಯಕುಮಾರ್ ಯಾದವ್ ಅದ್ಭುತವಾಗಿ ಚೆಂಡನ್ನು ಹಿಡಿದಿದ್ದರು. ಈ ಮೂಲಕ ಟೀಮ್ ಇಂಡಿಯಾ ವಿಶ್ವಕಪ್​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಆದರೆ ಈ ಗೆಲುವಿನ ಬಳಿಕ ಸೂರ್ಯಕುಮಾರ್ ಯಾದವ್ ಅವರ ಕ್ಯಾಚ್ ಚರ್ಚೆಗೆ ಕಾರಣವಾಗಿತ್ತು. ಚೆಂಡು ಹಿಡಿದಾಗ ಸೂರ್ಯಕುಮಾರ್ ಯಾದವ ಶೂಸ್ ಬೌಂಡರಿ ಲೈನ್​ಗೆ ತಾಗಿದೆ ಎಂಬ ವಾದಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದ್ದವು. ಇದಕ್ಕೆ ಪುರಾವೆಯಾಗಿ ಕೆಲ ವಿಡಿಯೋಗಳನ್ನು ಸಹ ವೈರಲ್ ಮಾಡಲಾಗಿತ್ತು. ಆದರೆ ಅಸಲಿ ವಿಡಿಯೋ ಬಿಡುಗಡೆಯಾಗುತ್ತಿದ್ದಂತೆ ಎಲ್ಲರೂ ಸುಮ್ಮನ್ನಾಗಿದ್ದರು. ಇದೀಗ ತಾವು ಹಿಡಿದ ಅದ್ಭುತ ಕ್ಯಾಚ್ ಬಗ್ಗೆ ಸೂರ್ಯಕುಮಾರ್ ಯಾದವ್ ಮಾತನಾಡಿದ್ದಾರೆ.

ಟಿ20 ವಿಶ್ವಕಪ್ ಗೆಲುವಿನ ಹರಕೆ ತೀರಿಸಲು ಉಡುಪಿಯ ಕಾಪುವಿನಲ್ಲಿರುವ ಮಾರಿಯಮ್ಮನ ಗುಡಿಗೆ ಆಗಮಿಸಿದ ಸೂರ್ಯಕುಮಾರ್ ಯಾದವ್ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಪೂಜೆಯ ಬಳಿಕ ಮಾತನಾಡಿದ ಸೂರ್ಯ, ಕ್ಯಾಚ್ ಹಿಡಿಯುವ ಸಂದರ್ಭ ನಾನು ಬೌಂಡರಿ ಲೈನ್ ಟಚ್ ಮಾಡಿರಲಿಲ್ಲ. ಈ ಬಗ್ಗೆ ಸುಖಾಸುಮ್ಮನೆ ಚರ್ಚೆ ಹುಟ್ಟುಹಾಕಲಾಗಿದೆ. ಅಲ್ಲದೆ ಪ್ರಪಂಚದ ಎಲ್ಲಾ ಜನರನ್ನ ಖುಷಿ ಪಡಿಸಲಂತು ಸಾಧ್ಯವಿಲ್ಲ. ನಾನು ಹಿಡಿದ ಕ್ಯಾಚ್ ಅಂತು ಕ್ಲಿಯರ್ ಆಗಿತ್ತು ಎಂದು ತಿಳಿಸಿದ್ದಾರೆ.

ದೇವರ ಆಶೀರ್ವಾದದಿಂದ ನಾನು ಆ ಸಂದರ್ಭದಲ್ಲಿ ಆ ಭಾಗದ ಬೌಂಡರಿ ಲೈನ್​ನಲ್ಲಿದ್ದೆ. ಇದರಿಂದ ಅಂತಹ ಒಂದು ಅದ್ಭುತ ಕ್ಯಾಚ್ ಹಿಡಿಯುವ ಅವಕಾಶ ನನಗೆ ಸಿಕ್ಕಿತು. ಅಲ್ಲದೆ ದೇಶಕ್ಕೆ ಕಪ್ ತಂದುಕೊಡಲು ಅಂತಹ ಸಂದರ್ಭವನ್ನು ದೇವರ ಸೃಷ್ಟಿ ಮಾಡಿದ್ದಾನೆ ಎಂಬುದು ನನ್ನ ಭಾವನೆ. ಆ ಸಂದರ್ಭದಲ್ಲೂ ನಾನು ದೇವರನ್ನು ನೆನೆದುಕೊಂಡೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

ಕಪ್ತಾನನಾಗಿ ಕಾಪುವಿಗೆ ಬನ್ನಿ:

ಪೂಜೆಯ ಬಳಿಕ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಮಾತನಾಡಿದ ಮಾರಿಗುಡಿ ದೇವಸ್ಥಾನದ ಆರ್ಚಕರು, ಟೀಮ್ ಇಂಡಿಯಾದ ನಾಯಕರಾಗಿ ಕಾಪುವಿಗೆ ಬನ್ನಿ ಎಂದು ಆಶೀರ್ವಾದ ಮಾಡಿದರು. ಇದೇ ವೇಳೆ ಭಾರತ ತಂಡದ ಕಪ್ತಾನ ಆಗೋದು ನಮ್ಮ ಕೈಯಲ್ಲಿಲ್ಲ. ದೇಶಕ್ಕಾಗಿ ಚೆನ್ನಾಗಿ ಆಡುವುದು ಮಾತ್ರ ನಮ್ಮ ಗುರಿ. ದೇವರು ಇಚ್ಚಿಸಿದರೆ ಹಣೆಯಲ್ಲಿ ಬರೆದಂತೆ ಆಗುತ್ತದೆ ಎಂದು ಸೂರ್ಯ ತಿಳಿಸಿದರು.

ಹಾಗೆಯೇ ಕರಾವಳಿಯ ಬೇರೆ ಬೇರೆ ದೇವಸ್ಥಾನಗಳಿಗೆ ಹೋಗಿದ್ದೇವೆ. ಮನಸ್ಸಿಗೆ ತುಂಬಾ ಶಾಂತಿ ಸಿಕ್ಕಿದೆ. ನಾನಿಲ್ಲಿಗೆ ಯಾವುದೇ ಸೆಲೆಬ್ರಿಟಿಯಾಗಿ ಬಂದಿಲ್ಲ. ಬದಲಾಗಿ ಸಾಮಾನ್ಯ ವ್ಯಕ್ತಿಯಾಗಿ ಬಂದಿದ್ದೇನೆ. ಸಾಮಾನ್ಯ ವ್ಯಕ್ತಿಯಾಗಿ ದೊಡ್ಡ ಜೀವನವನ್ನು ಸಾಗಿಸಬೇಕಾಗಿದೆ. ವಿಶ್ವಕಪ್​ ಅನ್ನೋದು ಇಡೀ ಜೀವನ ಅಲ್ಲ. ಅದೊಂದು ವೃತ್ತಿಜೀವನದ ಭಾಗ. ಜೀವನದಲ್ಲಿ ಇಂತಹ ಹಲವುಗಳನ್ನು ನೋಡುತ್ತಾ ಸಾಗಬೇಕಾಗಿದೆ ಎಂದರು.

ಇನ್ನು ಮಂಗಳೂರಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿರುವ ಬಗ್ಗೆ ಮಾತನಾಡಿದ ಸೂರ್ಯಕುಮಾರ್ ಯಾದವ್, ಜೀವನದಲ್ಲಿ ಒಂದೇ ಬಾರಿ ಇಷ್ಟು ಕೇಕ್ ಗಳನ್ನು ನಾನು ಕಟ್ ಮಾಡಿಲ್ಲ ತಿಂದಿಲ್ಲ. ಕ್ಯಾಚ್ ಹಿಡಿದು ಎಂಟು ದಿನ ಆಯಿತು. ಹಾಗೆಯೇ ವಿವಾಹ ವಾರ್ಷಿಕೋತ್ಸವ ಕಳೆದು ಎಂಟು ದಿನವಾಗಿದೆ. ಎರಡು ಖುಷಿ ಜೊತೆಯಾಗಿ ಬಂದಿರುವುದು ಸಂತೋಷದ ವಿಷಯ ಎಂದರು.

ಮಾರಿಯಮ್ಮನ ದರ್ಶನ:

ಕಾಪು ಮಾರಿಯಮ್ಮನ ದರ್ಶನ ಮಾಡಿದ ಮೇಲೆ ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ಪೂಜೆ ಸಲ್ಲಿಕೆ ಮಾಡಿ ಶಾಂತಿ ಪ್ರಾಪ್ತಿಯಾದ ಅನುಭವವಾಯ್ತು. ದೇವಸ್ಥಾನದ ಜೀರ್ಣೋದ್ಧಾರ ಸಂದರ್ಭ ಬರಬೇಕು ಎಂಬ ಇಚ್ಛೆ ಇದೆ. ಆ ಸಂದರ್ಭದಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಬರುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ: ಮಳೆ ಬಂದರೂ ನೋ ಟೆನ್ಶನ್… ಆಸ್ಟ್ರೇಲಿಯಾದಲ್ಲಿ ಹೊಸ ಕ್ರಿಕೆಟ್ ಸ್ಟೇಡಿಯಂ

ಟಿ20 ವಿಶ್ವಕಪ್​ ವಿಜಯೋತ್ಸವದ ವೇಳೆ ಜನಸ್ತೋಮ ನೋಡಿ ಬಹಳ ಖುಷಿಯಾಗಿತ್ತು. ಇದೀಗ ಕಾಪುವಿನಲ್ಲಿ ಕೂಡ ಜನರು ಪ್ರೀತಿಯಿಂದ ಬರಮಾಡಿಕೊಂಡದ್ದು ಮನಸ್ಸಿಗೆ ಮುಟ್ಟಿದೆ. ದೇವಸ್ಥಾನದಲ್ಲಿ ಇಷ್ಟು ಮಂದಿ ಸೇರುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ ಎಂದು ಸೂರ್ಯಕುಮಾರ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ.