2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಲಾಗಿದೆ. ಸೋಮವಾರ ನಡೆದ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಯಲ್ಲಿ ಈ ಮಹ್ವದ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಅದರಂತೆ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯಾಟಗಳು ಇರಲಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯನಿರ್ವಾಹಕ ಮಂಡಳಿಯು ಕಳೆದ ವಾರ ಲಾಸ್ ಏಂಜಲೀಸ್ ಕ್ರೀಡಾಕೂಟದ ಸಂಘಟಕರ ಪ್ರಸ್ತಾವನೆಗೆ ಕ್ರಿಕೆಟ್ ಅನ್ನು ಸೇರಿಸಲು ಅನುಮೋದನೆ ನೀಡಿತ್ತು. ಇದೀಗ ಅಧಿಕೃತವಾಗಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಯಾಗಿದೆ.
2028 ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಟಿ20 ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ಹೀಗಾಗಿ ಬಹು ದೇಶಗಳ ನಡುವಣ ರಣರೋಚಕ ಕಾದಾಟವನ್ನು ನಿರೀಕ್ಷಿಸಬಹುದು.
2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಜೊತೆಗೆ ಬೇಸ್‌ಬಾಲ್-ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸಸ್) ಮತ್ತು ಸ್ಕ್ವಾಷ್ ಕ್ರೀಡೆಗಳಿಗೂ ಅನುಮೋದನೆ ನೀಡಲಾಗಿದೆ.
ಅದರಂತೆ 1900 ರಿಂದ ಮೊದಲ ಬಾರಿಗೆ ಕ್ರಿಕೆಟ್, ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸಸ್), ಸ್ಕ್ವಾಷ್ ಮತ್ತು ಫ್ಲ್ಯಾಗ್ ಫುಟ್‌ಬಾಲ್ ಒಲಿಂಪಿಕ್ಸ್‌ನ ಭಾಗವಾಗಲಿದೆ.
2024 ರಲ್ಲಿ ಪ್ಯಾರಿಸ್ನಲ್ಲಿ ಮುಂಬರುವ ಒಲಿಂಪಿಕ್ಸ್ ನಡೆಯಲಿದ್ದು, ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾಟಗಳಿರುವುದಿಲ್ಲ. ಏಕೆಂದರೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಕಾರ್ಯನಿರ್ವಾಹಕ ಮಂಡಳಿಯು 2028 ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಈ ಪಂದ್ಯಾವಳಿಯನ್ನು ವೀಕ್ಷಿಸಲು ಇನ್ನು ಐದು ವರ್ಷಗಳ ಕಾಲ ಕಾಯಬೇಕಿದೆ.
1900 ರಲ್ಲಿತ್ತು ಕ್ರಿಕೆಟ್:
1900 ರಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಡಲಾಗಿತ್ತು. 128 ವರ್ಷಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಏಕೈಕ ಪಂದ್ಯವನ್ನು ಆಡಲಾಗಿತ್ತು. ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು 185 ರನ್‌ಗಳಿಂದ ಸೋಲಿಸಿದ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದುಕೊಂಡಿತ್ತು. ಇದೀಗ 128 ವರ್ಷಗಳ ಬಳಿಕ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಕಾದಾಟಕ್ಕೆ ಅವಕಾಶ ದೊರೆಯುತ್ತಿದೆ.
ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ನ್ನು ಸೇರಿಸಲಾಗಿತ್ತು. ಈ ಗೇಮ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ ಚಿನ್ನದ ಪದಕ ಗೆದ್ದರೆ, ಭಾರತ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.