USA vs BAN: ಐತಿಹಾಸಿಕ ಗೆಲುವು: ಬಾಂಗ್ಲಾ ತಂಡವನ್ನು ಬಗ್ಗು ಬಡಿದ ಯುಎಸ್​ಎ

USA vs Bangladesh: ಯುಎಸ್​ಎ ತಂಡವು ಬಲಿಷ್ಠ ಬಾಂಗ್ಲಾದೇಶ್ ವಿರುದ್ಧ ಭರ್ಜರಿ ಜಯ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ. ಈ ಮೂಲಕ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಗೆದ್ದ ಹಿರಿಮೆಗೆ ಪಾತ್ರವಾಗಿದೆ. ಇದಕ್ಕೂ ಮುನ್ನ ಯುಎಸ್​ಎ ತಂಡ ಏಕೈಕ ಬಾರಿ ಮಾತ್ರ ಐಸಿಸಿಯ ಪೂರ್ಣ ಸದಸ್ಯತ್ವ ಹೊಂದಿರುವ ಟೀಮ್ ವಿರುದ್ಧ ಗೆದ್ದಿತ್ತು.

USA vs BAN: ಐತಿಹಾಸಿಕ ಗೆಲುವು: ಬಾಂಗ್ಲಾ ತಂಡವನ್ನು ಬಗ್ಗು ಬಡಿದ ಯುಎಸ್​ಎ
USA

Updated on: May 22, 2024 | 12:07 PM

ಬಾಂಗ್ಲಾದೇಶ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಯುಎಸ್​ಎ (USA) ತಂಡ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟಿ20 ವಿಶ್ವಕಪ್​​ಗೂ ಮುನ್ನ ಯುಎಸ್​ಎ ಕಠಿಣ ಪೈಪೋಟಿ ಒಡ್ಡುವ ಸೂಚನೆ ನೀಡಿದೆ. ಹೂಸ್ಟನ್​ನ ಪ್ರೈರೀ ವ್ಯೂ ಕ್ರಿಕೆಟ್ ಕಾಂಪ್ಲೆಕ್ಸ್ ಸ್ಡೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ಬೌಲಿಂಗ್ ಆಯ್ದುಕೊಂಡಿತು.

ಅದರಂತೆ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ಪರ ತೌಹಿದ್ ಹೃದೋಯ್ 47 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 58 ರನ್ ಬಾರಿಸಿದರು. ಇನ್ನು ಅಂತಿಮ ಓವರ್​ಗಳ ವೇಳೆ ಮಹಮದುಲ್ಲಾ 31 ರನ್​ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು.

154 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಯುಎಸ್​ಎ ತಂಡಕ್ಕೆ ಆರಂಭಿಕ ಆಟಗಾರ ಸ್ಟೀವನ್ ಟೇಲರ್ (28) ಉತ್ತಮ ಆರಂಭ ಒದಗಿಸಿದರು. ಇನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಆ್ಯಂಡ್ರಿಸ್ ಗೌಸ್ 23 ರನ್​ಗಳನ್ನು ಬಾರಿಸಿದರು.

ಇದಾಗ್ಯೂ ಯುಎಸ್​ಎ ತಂಡವು 94 ರನ್​ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಕಣಕ್ಕಿಳಿದ ಅನುಭವಿ ಆಟಗಾರ ಕೋರಿ ಅ್ಯಂಡರ್ಸನ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಹರ್ಮೀತ್ ಸಿಂಗ್ ಜೊತೆಗೂಡಿ 6ನೇ ವಿಕೆಟ್​ಗೆ ಉತ್ತಮ ಜೊತೆಯಾಟ ಪ್ರದರ್ಶಿಸುವ ಮೂಲಕ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.

ಅಂತಿಮವಾಗಿ ಕೋರಿ ಅ್ಯಂಡರ್ಸನ್ ಅಜೇಯ 34 ರನ್ ಬಾರಿಸಿದರೆ, ಹರ್ಮೀತ್ ಸಿಂಗ್ ಅಜೇಯ 33 ರನ್​ ಸಿಡಿಸಿದರು. ಈ ಮೂಲಕ 19.3 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ಮಟ್ಟುವ ಮೂಲಕ ಯುಎಸ್​ಎ ತಂಡ ಭರ್ಜರಿ ಜಯ ಸಾಧಿಸಿದೆ.

ಐತಿಹಾಸಿಕ ಗೆಲುವು:

ಇದು ಯುಎಸ್​ಎ ತಂಡ 2ನೇ ಐತಿಹಾಸಿಕ ಗೆಲುವು. ಅಂದರೆ ಐಸಿಸಿ ಖಾಯಂ ಸದಸ್ಯತ್ವ ಹೊಂದಿರುವ ತಂಡದ ವಿರುದ್ಧ ಯುಎಸ್​ಎ ತಂಡ 2ನೇ ಬಾರಿ ಜಯ ಸಾಧಿಸಿದೆ. ಇದಕ್ಕೂ ಮುನ್ನ 2021 ರಲ್ಲಿ ಐರ್ಲೆಂಡ್ ವಿರುದ್ಧ ಅಮೋಘ ಗೆಲುವು ದಾಖಲಿಸಿತ್ತು. ಇದೀಗ ಬಾಂಗ್ಲಾದೇಶ್ ತಂಡವನ್ನು ಬಗ್ಗು ಬಡಿದು ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಯುಎಸ್​ಎ ಪ್ಲೇಯಿಂಗ್ 11: ಮೊನಾಂಕ್ ಪಟೇಲ್ (ನಾಯಕ) , ಸ್ಟೀವನ್ ಟೇಲರ್ , ಆರನ್ ಜೋನ್ಸ್ , ಆಂಡ್ರೀಸ್ ಗೌಸ್ , ಕೋರಿ ಅ್ಯಂಡರ್ಸನ್ , ನಿತೀಶ್ ಕುಮಾರ್ , ಅಲಿ ಖಾನ್ , ಹರ್ಮೀತ್ ಸಿಂಗ್ , ಜಸ್ದೀಪ್ ಸಿಂಗ್ , ನೋಸ್ತುಶ್ ಕೆಂಜಿಗೆ , ಸೌರಭ್ ನೇತ್ರವಲ್ಕರ್.

ಇದನ್ನೂ ಓದಿ: IPL 2024: ಈ ಸಲ RCB ಕಪ್ ಗೆದ್ದೇ ಗೆಲ್ಲುತ್ತೆ ಎಂದ ವಿಜಯ ಮಲ್ಯ..!

ಬಾಂಗ್ಲಾದೇಶ್ ಪ್ಲೇಯಿಂಗ್ 11: ಲಿಟ್ಟನ್ ದಾಸ್ , ನಜ್ಮುಲ್ ಹೊಸೈನ್ ಶಾಂಟೋ (ನಾಯಕ) , ಸೌಮ್ಯ ಸರ್ಕಾರ್ , ಶಕೀಬ್ ಅಲ್ ಹಸನ್ , ತೌಹಿದ್ ಹೃದೋಯ್ , ಮಹಮದುಲ್ಲಾ , ಜೇಕರ್ ಅಲಿ, ಮಹೇದಿ ಹಸನ್ , ರಿಶಾದ್ ಹೊಸೈನ್ , ಮುಸ್ತಫಿಜುರ್ ರೆಹಮಾನ್ , ಶೋರಿಫುಲ್ ಇಸ್ಲಾಂ.

 

Published On - 12:07 pm, Wed, 22 May 24