T20 World Cup 2024: ಯುಎಸ್ಎ ಟಿ20 ವಿಶ್ವಕಪ್ ತಂಡದಲ್ಲಿ ಕನ್ನಡಿಗ..!
T20 World Cup 2024: ಈ ಬಾರಿಯ ಟಿ20 ವಿಶ್ವಕಪ್ ಜೂನ್ 2 ರಿಂದ ಶುರುವಾಗಲಿದೆ. ಯುಎಸ್ಎ-ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ ಒಟ್ಟು 20 ತಂಡಗಳು ಕಣಕ್ಕಿಳಿಯಲಿದೆ. ಈ ಟೂರ್ನಿಗಾಗಿ ಇದೀಗ ಆತಿಥೇಯ ಯುಎಸ್ಎ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಕರ್ನಾಟಕ ಮೂಲದ ಆಟಗಾರರೊಬ್ಬರು ಕಾಣಿಸಿಕೊಂಡಿದ್ದಾರೆ.
Updated on:May 04, 2024 | 11:09 AM

T20 World Cup 2024: ಟಿ20 ವಿಶ್ವಕಪ್ಗಾಗಿ ಯುಎಸ್ಎ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ಬಳಗದಲ್ಲಿ ಕರುನಾಡ ಕುವರ ಕಾಣಿಸಿಕೊಂಡಿರುವುದು ವಿಶೇಷ. ಅಂದರೆ ಟಿ20 ವಿಶ್ವಕಪ್ನಲ್ಲಿ ಯುಎಸ್ಎ ಪರ ಕನ್ನಡಿಗನೋರ್ವ ಕೂಡ ಕಣಕ್ಕಿಳಿಯಲಿದ್ದಾರೆ.

ಹೌದು, ಯುಎಸ್ಎ ಟಿ20 ವಿಶ್ವಕಪ್ ತಂಡದಲ್ಲಿ ಚಿಕ್ಕಮಗಳೂರಿನ ನೋಸ್ತುಶ್ ಕೆಂಜಿಗೆ ಆಯ್ಕೆಯಾಗಿದ್ದಾರೆ. 2019 ರಲ್ಲಿ ಯುಎಸ್ಎ ಪರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದ ನೋಸ್ತುಶ್ ಇದೀಗ ಟಿ20 ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದವಾರದ ನೋಸ್ತುಶ್ ಈ ಹಿಂದೆ ಬೆಂಗಳೂರಿನಲ್ಲಿ ಕ್ಲಬ್ ಕ್ರಿಕೆಟ್ ಆಡಿದ್ದರು. ಟೀಮ್ ಇಂಡಿಯಾ ಆಟಗಾರರಾದ ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ತಂಡವನ್ನು ಪ್ರತಿನಿಧಿಸಿದ್ದರು.

ಆದರೆ ಹೆಚ್ಚಿನ ಅವಕಾಶ ಸಿಗದಿದ್ದ ಕಾರಣ ಅವರು ಅಮೆರಿಕದತ್ತ ಮುಖ ಮಾಡಿದ್ದರು. ಅಲ್ಲದೆ ಯುಎಸ್ಎ ಪರ ಆಲ್ರೌಂಡರ್ ಆಟದೊಂದಿಗೆ ಮಿಂಚಿದ ನೋಸ್ತುಶ್ ಕೆಂಜಿಗೆ ಇದೀಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಅಲ್ಲದೆ ಟಿ20 ವಿಶ್ವಕಪ್ನಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವ ವಿಶ್ವಾಸದಲ್ಲಿದ್ದಾರೆ.

ಎಡಗೈ ಸ್ಪಿನ್ನರ್-ಬಲಗೈ ಬ್ಯಾಟರ್ ಆಗಿ ಕಣಕ್ಕಿಳಿಯುವ ನೋಸ್ತುಶ್ ಕೆಂಜಿಗೆ ಈಗಾಗಲೇ ಯುಎಸ್ಎ ಪರ 40 ಏಕದಿನ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 38 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇನ್ನು 4 ಟಿ20 ಪಂದ್ಯಗಳಿಂದ ನಾಲ್ಕು ವಿಕೆಟ್ ಪಡೆದಿದ್ದಾರೆ. ಹಾಗೆಯೇ ಒಟ್ಟು 357 ರನ್ ಕಲೆಹಾಕಿದ್ದಾರೆ.

ಯುಎಸ್ಎ ಟಿ20 ವಿಶ್ವಕಪ್ ತಂಡ: ಮೊನಾಂಕ್ ಪಟೇಲ್ (ನಾಯಕ), ಆರೋನ್ ಜೋನ್ಸ್ (ಉಪನಾಯಕ), ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೋಸ್ತುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಶಾಲ್ಕ್ವಿಕ್ , ಸ್ಟೀವನ್ ಟೇಲರ್, ಶಯಾನ್ ಜಹಾಂಗೀರ್.
Published On - 11:07 am, Sat, 4 May 24
