ಮ್ಯಾಥ್ಯೂ ವೇಡ್‌ಗೆ ಕೊರೊನಾ ಸೋಂಕು; ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ ಮ್ಯಾಕ್ಸ್​ವೆಲ್- ವಾರ್ನರ್..!

| Updated By: ಪೃಥ್ವಿಶಂಕರ

Updated on: Oct 28, 2022 | 6:08 PM

T20 World Cup 2022: ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪಿನ್ನರ್ ಆಡಮ್ ಝಂಪಾ ಕೋವಿಡ್ ಸೋಂಕಿಗೆ ಒಳಗಾಗಿದ್ದರು. ಇತ್ತೀಚೆಗೆ, ತಂಡದ ಏಕೈಕ ವಿಕೆಟ್ ಕೀಪರ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್‌ಗೆ ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ.

ಮ್ಯಾಥ್ಯೂ ವೇಡ್‌ಗೆ ಕೊರೊನಾ ಸೋಂಕು; ವಿಕೆಟ್ ಕೀಪಿಂಗ್ ಅಭ್ಯಾಸ ಆರಂಭಿಸಿದ ಮ್ಯಾಕ್ಸ್​ವೆಲ್- ವಾರ್ನರ್..!
Matthew Wade, Maxwell
Follow us on

ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ (T20 World Cup) ಪ್ರವೇಶಿಸಿದ್ದ ಆಸ್ಟ್ರೇಲಿಯಾ (Australia), ನ್ಯೂಜಿಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು. ಆದರೆ ಶ್ರೀಲಂಕಾ ವಿರುದ್ಧದ ಎರಡನೇ ಪಂದ್ಯದಲ್ಲಿ ತಂಡ ಗೆಲುವು ಸಾಧಿಸಿದೆ. ಏತನ್ಮಧ್ಯೆ, ಈ ವಿಶ್ವಕಪ್‌ನಲ್ಲಿ ಆತಿಥೇಯ ತಂಡದ ಮೇಲೆ ಕೊರೊನಾ ವಕ್ರದೃಷ್ಠಿ ಬೀರಿದೆ. ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಸ್ಟಾರ್ ಸ್ಪಿನ್ನರ್ ಆಡಮ್ ಝಂಪಾ ಕೋವಿಡ್ (Covid) ಸೋಂಕಿಗೆ ಒಳಗಾಗಿದ್ದರು. ಇತ್ತೀಚೆಗೆ, ತಂಡದ ಏಕೈಕ ವಿಕೆಟ್ ಕೀಪರ್ ಮತ್ತು ಸ್ಟಾರ್ ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್‌ಗೆ (Mathew Wade) ಕೊರೊನಾ ಸೋಂಕು ತಗುಲಿರುವುದು ಖಚಿತವಾಗಿದೆ. ಇದು ತಂಡದ ಆತಂಕವನ್ನು ಹೆಚ್ಚಿಸಿದೆ.

ಆದರೆ ಇಂದು ಸೂಪರ್ 12 ರ ಅಂಗವಾಗಿ ಇಂಗ್ಲೆಂಡ್ ವಿರುದ್ಧ ನಡೆಯಬೇಕಿದ್ದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದೆ. ಹೀಗಾಗಿ ಆಸೀಸ್ ತಂಡ ಕೊಂಚ ನಿಟ್ಟುಸಿರು ಬಿಟ್ಟಿದೆ. ಆದರೆ ವೇಡ್‌ಗೆ ಕೋವಿಡ್ ಸೋಂಕು ತಗುಲಿರುವುದು ಮತ್ತು ತಂಡದಲ್ಲಿ ಮತ್ತೊಬ್ಬ ಬ್ಯಾಕ್‌ಅಪ್ ವಿಕೆಟ್ ಕೀಪರ್ ಇಲ್ಲದಿರುವುದರಿಂದ ಆಸೀಸ್ ಮ್ಯಾನೇಜ್‌ಮೆಂಟ್​ಗೆ ತಲೆನೋವು ತಂದಿದೆ. ಜೋಶ್ ಇಂಗ್ಲಿಷ್ ಅವರನ್ನು ವಿಶ್ವಕಪ್ ತಂಡದಲ್ಲಿ ಬ್ಯಾಕ್-ಅಪ್ ವಿಕೆಟ್‌ಕೀಪರ್ ಆಗಿ ಆರಂಭದಲ್ಲಿ ಆಯ್ಕೆ ಮಾಡಲಾಗಿತ್ತಾದರೂ, ಗಾಯದ ಕಾರಣದಿಂದಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ.

ಮ್ಯಾಕ್ಸಿ ಅಥವಾ ವಾರ್ನರ್..

ಪ್ರಸ್ತುತ, ವೇಡ್‌ ಅವರ ಕೊರೊನಾ ಸೋಂಕಿನ ಲಕ್ಷಣಗಳು ಸೌಮ್ಯವಾಗಿರುವಂತೆ ತೋರುತ್ತಿದೆ. ಇದರ ಜೊತೆಗೆ ಸೆಮಿಸ್ ರೇಸ್​ನಲ್ಲಿ ಉಳಿಯಲು ಇಂಗ್ಲೆಂಡ್ ವಿರುದ್ಧ ಆಸೀಸ್ ಗೆಲುವುದು ಅತೀ ಮುಖ್ಯವಾಗಿತ್ತು. ಆದರೆ ಅವರ ಗೆಲುವಿನ ಕನಸಿಗೆ ಮಳೆ ತಣ್ಣೀರು ಎರಚಿದೆ. ಹೀಗಾಗಿ ಆಸೀಸ್ ಪಡೆ ಮುಂದಿನ ಪಂದ್ಯಗಳ ಮೇಲೆ ಹೆಚ್ಚಿನ ಗಮನಹರಿಸಿದೆ. ಒಂದು ವೇಳೆ ಮುಂದಿನ ಪಂದ್ಯ ನಡೆಯುವ ಸಮಯದಲ್ಲಿ ವೇಡ್‌ ಚೇತರಿಸಿಕೊಳ್ಳದೆ ಆಡಲು ಸಾಧ್ಯವಾಗದಿದ್ದರೆ, ಅವರ ಸ್ಥಾನದಲ್ಲಿ ಮ್ಯಾಕ್ಸ್‌ವೆಲ್ ಅಥವಾ ವಾರ್ನರ್‌, ಈ ಇಬ್ಬರಲ್ಲಿ ಒಬ್ಬರಿಗೆ ವಿಕೆಟ್ ಕೀಪಿಂಗ್ ಜವಬ್ದಾರಿ ನೀಡಲು ಕ್ರಿಕೆಟ್ ಆಸ್ಟ್ರೇಲಿಯಾ ಮುಂದಾಗಿದೆ. ಇದರ ಭಾಗವಾಗಿ, ಮ್ಯಾಕ್ಸ್‌ವೆಲ್ ಮತ್ತು ವಾರ್ನರ್ ಇಬ್ಬರೂ ಅಭ್ಯಾಸದ ಅವಧಿಯಲ್ಲಿ ಕೀಪಿಂಗ್ ಅಭ್ಯಾಸ ಮಾಡಿದರು ಎಂಬುದು ಗಮನಾರ್ಹ.

ಆದರೆ ಟೂರ್ನಿ ಆರಂಭಕ್ಕೂ ಮುನ್ನ ಕೊರೊನಾ ಪೀಡಿತ ಆಟಗಾರರು ಕೂಡ ಪಂದ್ಯಗಳನ್ನು ಆಡಬಹುದು ಎಂದು ಐಸಿಸಿ ಇತ್ತೀಚೆಗೆ ಘೋಷಿಸಿದ್ದು ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ, ಐರ್ಲೆಂಡ್ ಆಲ್‌ರೌಂಡರ್ ಜಾರ್ಜ್ ಡಾಕ್ರೆಲ್ ಅವರು ಕೊರೊನಾ ಸೋಂಕು ತಗುಲಿದ್ದರ ಹೊರತಾಗಿಯೂ ಅಕ್ಟೋಬರ್ 23 ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಹೀಗಾಗಿ ವೇಡ್‌ ಅವರ ವಿಷಯದಲ್ಲೂ ಅದೇ ಆಗಬಹುದು ಎಂದು ತೋರುತ್ತದೆ.

ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:08 pm, Fri, 28 October 22