T20 World Cup 2022: ಟಿ20 ವಿಶ್ವಕಪ್ಗಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ (Australia) ಭರ್ಜರಿ ಸಿದ್ದತೆಯಲ್ಲಿದೆ. ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ ಬಹುತೇಕ ಬ್ಯಾಟರ್ಗಳು ಅದ್ಭುತ ಪ್ರದರ್ಶನವನ್ನೇ ನೀಡಿದ್ದಾರೆ. ಇದಾಗ್ಯೂ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಮಾತ್ರ ತಮ್ಮ ಹಳೆಯ ಖದರ್ ಮರೆತಿರುವುದು ಇದೀಗ ಆಸ್ಟ್ರೇಲಿಯಾ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಭಾರತದ ವಿರುದ್ಧದ ಸರಣಿಯಲ್ಲಿ ಅಟ್ಟರ್ ಫ್ಲಾಪ್ ಆಗಿದ್ದ ಮ್ಯಾಕ್ಸಿ ಇದೀಗ ಆಸ್ಟ್ರೇಲಿಯಾ ಪಿಚ್ನಲ್ಲೂ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ. ಟೀಮ್ ಇಂಡಿಯಾ ವಿರುದ್ಧ ಮೂರು ಪಂದ್ಯಗಳಲ್ಲಿ ಕ್ರಮವಾಗಿ 1, 0, 6 ರನ್ಗಳಿಗೆ ಔಟಾಗಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲೂ 0, 1, 8 ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಅಂದರೆ ಕಳೆದ 6 ಪಂದ್ಯಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ 2 ಬಾರಿ ಡಕ್ ಔಟ್ ಆಗಿದ್ದಾರೆ. ಅಲ್ಲದೆ ಎರಡಂಕಿ ಮೊತ್ತ ಕೂಡ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ಇದುವೇ ಈಗ ಆಸೀಸ್ ತಂಡದ ಚಿಂತೆಗೆ ಕಾರಣವಾಗಿದೆ.
ಏಕೆಂದರೆ ಗ್ಲೆನ್ ಮ್ಯಾಕ್ಸ್‌ವೆಲ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು. ಇದೀಗ ಕಳಪೆ ಫಾರ್ಮ್ನಲ್ಲಿರುವ ಅವರನ್ನು ಕೈ ಬಿಡುವುದೇ ದೊಡ್ಡ ಸವಾಲು. ಇತ್ತ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿದೆ.
ಇನ್ನೊಂದು ಟಿ20 ಪಂದ್ಯ ಉಳಿದಿದ್ದು, ಈ ಪಂದ್ಯದ ಮೂಲಕ ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಅಕ್ಟೋಬರ್ 22 ರಂದು ನಡೆಯಲಿರುವ ಟಿ20 ವಿಶ್ವಕಪ್ನ ಸೂಪರ್-12 ನ ಮೊದಲ ಪಂದ್ಯದಲ್ಲೇ ಆಸ್ಟ್ರೇಲಿಯಾ ಕಣಕ್ಕಿಳಿಯಲಿದ್ದು, ಅದಕ್ಕೂ ಮುನ್ನ ಸ್ಪೋಟಕ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಫಾರ್ಮ್ಗೆ ಮರಳುವುದು ಹಾಲಿ ಚಾಂಪಿಯನ್ ಆಸೀಸ್ ಪಾಲಿಗೆ ಅನಿವಾರ್ಯ ಎಂದೇ ಹೇಳಬಹುದು.
ಆಸ್ಟ್ರೇಲಿಯಾ ಟಿ20 ವಿಶ್ವಕಪ್ ತಂಡ:
ಆರೋನ್ ಫಿಂಚ್ (ನಾಯಕ), ಪ್ಯಾಟ್ ಕಮ್ಮಿನ್ಸ್ (ಉಪನಾಯಕ), ಆಷ್ಟನ್ ಅಗರ್, ಟಿಮ್ ಡೇವಿಡ್, ಜೋಶ್ ಹ್ಯಾಝಲ್‌ವುಡ್, ಜೋಶ್ ಇಂಗ್ಲಿಸ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್. ಕೇನ್ ರಿಚರ್ಡ್ಸನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್ ಮತ್ತು ಆ್ಯಡಂ ಝಂಪಾ.