T20 World Cup 2022: ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಪಂತ್: ರಾಹುಲ್ ಕಥೆಯೇನು?

| Updated By: ಝಾಹಿರ್ ಯೂಸುಫ್

Updated on: Oct 10, 2022 | 12:55 PM

T20 World Cup 2022: 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರೆ, 6ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಅಕ್ಷರ್ ಪಟೇಲ್ ಆಡಬಹುದು. ಇನ್ನು ಫಿನಿಶರ್ ಪಾತ್ರದಲ್ಲಿ ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

T20 World Cup 2022: ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಪಂತ್: ರಾಹುಲ್ ಕಥೆಯೇನು?
Rohit sharma-Rishabh Pant
Follow us on

T20 World Cup 2022: ಟಿ20 ವಿಶ್ವಕಪ್​ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಬಹುತೇಕ ತಂಡಗಳು ಆಸ್ಟ್ರೇಲಿಯಾಗೆ ಬಂದಿಳಿದಿವೆ. ಅದರಲ್ಲೂ ನಾಲ್ಕು ದಿನಗಳ ಹಿಂದೆಯೇ ತೆರಳಿದ್ದ ಟೀಮ್ ಇಂಡಿಯಾ (Team India) ಇದೀಗ ಅಭ್ಯಾಸ ಪಂದ್ಯ ಆಡುತ್ತಿದೆ. ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ವೆಸ್ಟರ್ನ್ ಆಸ್ಟ್ರೇಲಿಯಾ ಇಲೆವೆನ್ (IND vs WAXI) ವಿರುದ್ಧ ಕಣಕ್ಕಿಳಿದಿದ್ದು, ಈ ಪಂದ್ಯದಲ್ಲಿ ಭಾರತ ತಂಡ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದು ಕೂಡ ಆರಂಭಿಕ ಜೋಡಿಯಲ್ಲಿ ಎಂಬುದೇ ಅಚ್ಚರಿ. ಅಂದರೆ ಟಿ20 ವಿಶ್ವಕಪ್​ಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿರುವಾಗ ಟೀಮ್ ಇಂಡಿಯಾ ರೋಹಿತ್ ಶರ್ಮಾ ಜೊತೆ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸಿ ಪ್ರಯೋಗಕ್ಕೆ ಮುಂದಾಗಿದೆ. ಇಲ್ಲಿ ಬಲಗೈ-ಎಡಗೈ ಕಾಂಬಿನೇಷನ್​ನತ್ತ ಟೀಮ್ ಇಂಡಿಯಾ ಮುಖ ಮಾಡಿರುವುದು ಸ್ಪಷ್ಟ. ಆದರೆ ಮತ್ತೋರ್ವ ಆರಂಭಿಕ ಆಟಗಾರ ಕೆಎಲ್ ರಾಹುಲ್ ಕಥೆಯೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಏಕೆಂದರೆ ಟಿ20 ವಿಶ್ವಕಪ್​ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾ ನಾಲ್ಕು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಈ ಅಭ್ಯಾಸ ಪಂದ್ಯಗಳ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್​ ಅನ್ನು ರೂಪಿಸಿಕೊಳ್ಳಬೇಕಿದೆ. ಆದರೆ ಇದುವರೆಗೆ ಆರಂಭಿಕರಾಗಿಯೇ ಆಡಿದ್ದ ಕೆಎಲ್ ರಾಹುಲ್ ಬದಲು ಮಹತ್ವದ ಟೂರ್ನಿಗೂ ಮುನ್ನ ರಿಷಭ್ ಪಂತ್ ಅವರನ್ನು ಕಣಕ್ಕಿಳಿಸುತ್ತಿರುವ ಉದ್ದೇಶವೇನು ಎಂಬುದೇ ಈಗ ಚರ್ಚಾ ವಿಷಯವಾಗಿದೆ.

ಸೌತ್ ಆಫ್ರಿಕಾ ವಿರುದ್ಧದ ಕೊನೆಯ ಟಿ20 ಪಂದ್ಯದ ವೇಳೆ ವಿಶ್ರಾಂತಿ ಪಡೆದಿದ್ದ ಕೆಎಲ್ ರಾಹುಲ್ ಹಾಗೂ ವಿರಾಟ್ ಕೊಹ್ಲಿ ಮೊದಲ ಅಭ್ಯಾಸ ಪಂದ್ಯದಿಂದ ಕೂಡ ಹೊರಗುಳಿದಿದ್ದಾರೆ. ಹೀಗಾಗಿ ರಿಷಭ್ ಪಂತ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಗಿದೆ. ಆದರೆ ಟಿ20 ವಿಶ್ವಕಪ್​ಗೆ ದಿನಗಳು ಮಾತ್ರ ಉಳಿದಿರುವಾಗ ಆರಂಭಿಕ ಜೋಡಿಯ ಬದಲಾವಣೆ ಮಾಡಿ ಪ್ರಯೋಗ ನಡೆಸುತ್ತಿರುವುದೇ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ
Anna Rajan: ಸಿಮ್ ಖರೀದಿಸಲು ಹೋದ ನಟಿಯನ್ನು ಶೋ ರೂಮ್​ನಲ್ಲಿ ಕೂಡಿ ಹಾಕಿದ ಸಿಬ್ಬಂದಿ..!
David Miller: ಕಿಲ್ಲರ್ ಮಿಲ್ಲರ್ ಆರ್ಭಟಕ್ಕೆ ಧೋನಿ ದಾಖಲೆ ಧೂಳೀಪಟ
Dinesh Karthik: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಹೊಸ ವಿಶ್ವ ದಾಖಲೆ ಬರೆದ DK
Virat Kohli: ಸ್ಪೋಟಕ ಬ್ಯಾಟಿಂಗ್ ಮೂಲಕ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ

ಒಂದು ವೇಳೆ ಅಭ್ಯಾಸ ಪಂದ್ಯಗಳಲ್ಲಿ ರಿಷಭ್ ಪಂತ್ ಮಿಂಚಿದರೆ ಕೆಎಲ್ ರಾಹುಲ್ ಅವರು ಯಾವ ಸ್ಥಾನದಲ್ಲಿ ಆಡಲಿದ್ದಾರೆ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಸರಣಿಯ ಮೂಲಕ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್​ ಅನ್ನು ಸರಿ ಮಾಡಿಕೊಂಡಿದೆ. ಅದರಂತೆ ಆರಂಭಿಕರಾಗಿ ಕೆಎಲ್ ರಾಹುಲ್-ರೋಹಿತ್ ಶರ್ಮಾ ಆಡಿದರೆ, 3ನೇ ಮತ್ತು 4ನೇ ಕ್ರಮಾಂಕವು ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್​ಗೆ ಫಿಕ್ಸ್ ಎಂದೇ ಹೇಳಬಹುದು.

ಇನ್ನು 5ನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಕಣಕ್ಕಿಳಿದರೆ, 6ನೇ ಕ್ರಮಾಂಕದಲ್ಲಿ ಆಲ್​ರೌಂಡರ್ ಅಕ್ಷರ್ ಪಟೇಲ್ ಆಡಬಹುದು. ಇನ್ನು ಫಿನಿಶರ್ ಪಾತ್ರದಲ್ಲಿ ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.
ಇನ್ನುಳಿದಂತೆ ಬೌಲರ್​ಗಳಾಗಿ ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್ ಹಾಗೂ ಮತ್ತೋರ್ವ ವೇಗಿಯನ್ನು ಟೀಮ್ ಇಂಡಿಯಾ ಆಡಿಸಬಹುದು. ಇದರಿಂದ ರಿಷಭ್ ಪಂತ್ ಅವರು ಹೊರಗುಳಿಯಬೇಕಾಗುತ್ತದೆ.

ಆದರೆ ಇದೀಗ ರಿಷಭ್ ಪಂತ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಲು ಬಯಸಿದರೆ ಕೆಎಲ್ ರಾಹುಲ್ ತಂಡದಿಂದ ಹೊರಗುಳಿಯಬೇಕಾಗಿ ಬರಬಹುದು. ಮತ್ತೊಂದೆಡೆ ಅಭ್ಯಾಸ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಪಡೆದಿರುವ ರಿಷಭ್ ಪಂತ್ ಕೇವಲ 9 ರನ್​ಗಳಿಸಿ ಔಟಾಗಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶ ಎಂದರೆ ಪಂತ್ ಈ ವರ್ಷ 17 ಪಂದ್ಯಗಳಲ್ಲಿ ಕೇವಲ 1 ಅರ್ಧಶತಕ ಮಾತ್ರ ಬಾರಿಸಿದ್ದಾರೆ. ಇನ್ನು ಅವರ ಅವರೇಜ್ ಸ್ಕೋರ್ ಇರುವುದು ಕೇವಲ 26 ರನ್​ ಮಾತ್ರ. ಹಾಗೆಯೇ ಕೊನೆಯ 10 ಟಿ20 ಇನಿಂಗ್ಸ್​ಗಳಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಅದೇ ಕೆಎಲ್ ರಾಹುಲ್ ಸೌತ್ ಆಫ್ರಿಕಾ ವಿರುದ್ಧದ 2 ಪಂದ್ಯಗಳಲ್ಲೂ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಇದಾಗ್ಯೂ ಮಹತ್ವದ ಟೂರ್ನಿಗೂ ಮುನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿಯನ್ನು ನೀಡುತ್ತಿರುವುದೇಕೆ ಎಂಬುದೇ ಪ್ರಶ್ನೆ.

ಒಟ್ಟಿನಲ್ಲಿ ಟಿ20 ವಿಶ್ವಕಪ್​ ಆರಂಭಕ್ಕೆ ವಾರಗಳು ಮಾತ್ರ ಉಳಿದಿರುವಾಗಲೂ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸುವ ಬದಲು ಪ್ರಯೋಗದತ್ತ ಮುಖ ಮಾಡಿರುವುದು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಈ ಪ್ರಯೋಗಗಳೇ ಟೀಮ್ ಇಂಡಿಯಾ ಪಾಲಿಗೆ ಮುಳುವಾಗಲಿದೆಯಾ ಕಾದು ನೋಡಬೇಕಿದೆ.

ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್

 

Published On - 12:55 pm, Mon, 10 October 22