T20 World Cup 2022: ಅಬ್ಬರಿಸಿದ ಸೂರ್ಯ: ವೆಸ್ಟರ್ನ್ ಆಸ್ಟ್ರೇಲಿಯಾಗೆ ಸ್ಪರ್ಧಾತ್ಮಕ ಸವಾಲು
T20 World Cup 2022: ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟವಾಡಿದರು. ಆದರೆ 22 ರನ್ಗಳಿಸಿದ್ದ ವೇಳೆ ಬೆಹ್ರೆಂಡಾರ್ಫ್ ಎಸೆತದಲ್ಲಿ ದೀಪಕ್ ಹೂಡಾ ವಿಕೆಟ್ ಅನ್ನು ಕೈಚೆಲ್ಲಿದರು.
ಆಸ್ಟ್ರೇಲಿಯಾದ ಪರ್ತ್ನಲ್ಲಿ ನಡೆಯುತ್ತಿರುವ ವೆಸ್ಟರ್ನ್ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಕೆಎಲ್ ರಾಹುಲ್ ವಿಶ್ರಾಂತಿ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾ ಪರ ರಿಷಭ್ ಪಂತ್ ಹಾಗೂ ರೋಹಿತ್ ಶರ್ಮಾ ಇನಿಂಗ್ಸ್ ಆರಂಭಿಸಿದ್ದರು. ಆದರೆ ಕೇವಲ 3 ರನ್ಗಳಿಸಿ ರೋಹಿತ್ ಶರ್ಮಾ ಜೇಸನ್ ಬೆಹ್ರೆಂಡಾರ್ಫ್ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇದರ ಬೆನ್ನಲ್ಲೇ 17 ಎಸೆತಗಳಲ್ಲಿ 9 ರನ್ ಬಾರಿಸಿ ರಿಷಭ್ ಪಂತ್ ಕೂಡ ಪೆವಿಲಿಯನ್ ಕಡೆ ಮುಖ ಮಾಡಿದರು.
ಈ ಹಂತದಲ್ಲಿ ಜೊತೆಗೂಡಿದ ದೀಪಕ್ ಹೂಡಾ ಹಾಗೂ ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟವಾಡಿದರು. ಆದರೆ 22 ರನ್ಗಳಿಸಿದ್ದ ವೇಳೆ ಬೆಹ್ರೆಂಡಾರ್ಫ್ ಎಸೆತದಲ್ಲಿ ದೀಪಕ್ ಹೂಡಾ ಔಟಾದರು. ಇದಾಗ್ಯೂ ಸೂರ್ಯಕುಮಾರ್ ಯಾದವ್ ಮಾತ್ರ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದ್ದರು.
ಇನ್ನು ಐದನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಹಾರ್ದಿಕ್ ಪಾಂಡ್ಯ 20 ಎಸೆತಗಳಲ್ಲಿ ಬಿರುಸಿನ 29 ರನ್ಗಳಿಸಿ ನಿರ್ಗಮಿಸಿದರು. ಮತ್ತೊಂದೆಡೆ 35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ತಂಡಕ್ಕೆ ಆಸರೆಯಾದರು. ಅಂತಿಮವಾಗಿ 35 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ನೊಂದಿಗೆ ಸೂರ್ಯಕುಮಾರ್ ಯಾದವ್ 52 ರನ್ ಕಲೆಹಾಕಿದರು. ಹಾಗೆಯೇ ಕೊನೆಯ ಓವರ್ಗಳ ವೇಳೆ ದಿನೇಶ್ ಕಾರ್ತಿಕ್ ಬಿರುಸಿನ 19 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 158 ಕ್ಕೆ ತಂದು ನಿಲ್ಲಿಸಿದರು.
ಇದೀಗ ಇನಿಂಗ್ಸ್ ಆರಂಭಿಸಿರುವ ವೆಸ್ಟರ್ನ್ ಆಸ್ಟ್ರೇಲಿಯಾ ತಂಡವು ಕೇವಲ 12 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದೆ.
ಭಾರತ (ಪ್ಲೇಯಿಂಗ್ XI): ರೋಹಿತ್ ಶರ್ಮಾ(ನಾಯಕ), ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ವೆಸ್ಟರ್ನ್ ಆಸ್ಟ್ರೇಲಿಯ (ಪ್ಲೇಯಿಂಗ್ XI): ಡಿ ಆರ್ಸಿ ಶಾರ್ಟ್, ಆರನ್ ಹಾರ್ಡಿ, ಕ್ಯಾಮೆರಾನ್ ಬ್ಯಾಂಕ್ರಾಫ್ಟ್, ಆಶ್ಟನ್ ಟರ್ನರ್(ನಾಯಕ), ಸ್ಯಾಮ್ ಫಾನ್ನಿಂಗ್, ಹ್ಯಾಮಿಶ್ ಮೆಕೆಂಜಿ, ಜೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ, ನಿಕ್ ಹಾಬ್ಸನ್