T20 World Cup 2024: ಅಪರೂಪದ ಘಟನೆ; ಒಂದು ಪಂದ್ಯದಲ್ಲಿ ಕಣಕ್ಕಿಳಿದ 10 ದೇಶಗಳ ಆಟಗಾರರು..!

|

Updated on: Jun 02, 2024 | 9:36 PM

T20 World Cup 2024: ಜೂನ್ 2 ರಿಂದ ಅಂದರೆ ಇಂದಿನಿಂದ 9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ ಮುಖಾಮುಖಿಯಾಗಿದ್ದವು. ಈ ಪಂದ್ಯದ ಅಚ್ಚರಿ ಸಂಗತಿಯೆಂದರೆ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​ನಲ್ಲಿ 10 ವಿವಿಧ ದೇಶಗಳ ಆಟಗಾರರು ಪ್ರತಿನಿಧಿಸಿದ್ದರು.

T20 World Cup 2024: ಅಪರೂಪದ ಘಟನೆ; ಒಂದು ಪಂದ್ಯದಲ್ಲಿ ಕಣಕ್ಕಿಳಿದ 10 ದೇಶಗಳ ಆಟಗಾರರು..!
ಅಮೆರಿಕ- ಕೆನಡಾ
Follow us on

ಜೂನ್ 2 ರಿಂದ ಅಂದರೆ ಇಂದಿನಿಂದ 9ನೇ ಆವೃತ್ತಿಯ ಟಿ20 ವಿಶ್ವಕಪ್​ಗೆ (T20 World Cup 2024) ಅದ್ಧೂರಿ ಚಾಲನೆ ಸಿಕ್ಕಿದೆ. ಲೀಗ್​ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಅಮೆರಿಕ ಮತ್ತು ಕೆನಡಾ (USA vs Canada) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆನಡಾ ನೀಡಿದ 195 ರನ್​​ಗಳ ಗುರಿಯನ್ನು ಅಮೆರಿಕ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಮೂಲಕ ಆತಿಥೇಯರು ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದರು. ಇದು ಪಂದ್ಯದ ವಿಚಾರವಾದರೆ, ಇದೇ ಪಂದ್ಯದಲ್ಲಿ ಇನ್ನೊಂದು ಅಚ್ಚರಿಯ ಸಂಗತಿಯೂ ನಡೆಯಿತು. ಅದೆನೆಂದರೆ ಈ ಪಂದ್ಯದಲ್ಲಿ ಉಭಯ ತಂಡಗಳಿಂದ ಒಟ್ಟು 10 ವಿವಿಧ ದೇಶಗಳ ಆಟಗಾರರು ಕಣಕ್ಕಿಳಿದಿದ್ದರು.

ಉಭಯ ತಂಡಗಳಲ್ಲಿ 10 ದೇಶಗಳ ಆಟಗಾರರು

ಅಮೆರಿಕ ಮತ್ತು ಕೆನಡಾ ನಡುವೆ ನಡೆದ ಈ ಉದ್ಘಾಟನಾ ಪಂದ್ಯದಲ್ಲಿ ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್​ನಲ್ಲಿ 10 ವಿವಿಧ ದೇಶಗಳ ಆಟಗಾರರು ಸ್ಥಾನ ಪಡೆದಿದ್ದರು. ಅಮೆರಿಕ ತಂಡದ ಪ್ಲೇಯಿಂಗ್ 11 ರಲ್ಲಿ ಸ್ಥಾನ ಪಡೆದಿದ್ದ ಆಟಗಾರರು 5 ವಿವಿಧ ದೇಶಗಳಲ್ಲಿ ಜನಿಸಿದವರಾಗಿದ್ದಾರೆ. ಈ 11 ಆಟಗಾರರಲ್ಲಿ ತಲಾ 3 ಆಟಗಾರರು ಅಮೆರಿಕ ಮತ್ತು ಭಾರತ ಮೂಲದವರಾಗಿದ್ದರೆ, ದಕ್ಷಿಣ ಆಫ್ರಿಕಾ ಮೂಲದ ಇಬ್ಬರು, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಕೆನಡಾ ಮೂಲದ ತಲಾ ಒಬ್ಬ ಆಟಗಾರರು ಸ್ಥಾನ ಪಡೆದಿದ್ದರು. ಅಂದರೆ ಈ ತಂಡವನ್ನು 6 ದೇಶಗಳ ಆಟಗಾರರು ಪ್ರತಿನಿಧಿಸಿದ್ದರು.

T20 World Cup : ಓವರ್‌ನಲ್ಲಿ 10 ಕ್ಕಿಂತ ಹೆಚ್ಚು ಎಸೆತಗಳನ್ನು ಬೌಲ್ ಮಾಡಿದ ಬೌಲರ್‌ಗಳಿವರು

ಕೆನಡಾ ತಂಡದಲ್ಲೂ ಇದೇ ಪರಿಸ್ಥಿತಿ ಇತ್ತು. ಈ ತಂಡದಲ್ಲಿ ಭಾರತ ಮತ್ತು ಪಾಕಿಸ್ತಾನ ಮೂಲದ 4 ಆಟಗಾರರು ಸ್ಥಾನ ಪಡೆದಿದ್ದರೆ,  ಗಯಾನಾ, ಬಾರ್ಬಡೋಸ್, ಜಮೈಕಾ ಮತ್ತು ಕುವೈತ್‌ನ ತಲಾ ಒಬ್ಬ ಆಟಗಾರ ಕೆನಡಾ ಪರ ಆಡಿದ್ದರು. ಅಂದರೆ ಈ ತಂಡವನ್ನು 6 ದೇಶಗಳ ಆಟಗಾರರೂ ಪ್ರತಿನಿಧಿಸಿದ್ದರು. ಈ ಮೂಲಕ 10 ದೇಶಗಳ ಆಟಗಾರರು ಟಿ20 ವಿಶ್ವಕಪ್ 2024ರ ಮೊದಲ ಪಂದ್ಯವನ್ನು ಆಡಿದ್ದಾರೆ.

10 ವರ್ಷಗಳ ದಾಖಲೆ ಮುರಿದ ಕೆನಡಾ

ಇದೇ ಮೊದಲ ಬಾರಿಗೆ ಕೆನಡಾ ಮತ್ತು ಅಮೆರಿಕ ಎರಡೂ ತಂಡಗಳು ಟಿ20 ವಿಶ್ವಕಪ್‌ ಆಡುತ್ತಿವೆ. ಚೊಚ್ಚಲ ಪಂದ್ಯದಲ್ಲಿ ಕೆನಡಾವನ್ನು ಅಮೆರಿಕ 7 ವಿಕೆಟ್‌ಗಳಿಂದ ಸೋಲಿಸಿ ಹೊಸ ದಾಖಲೆಯನ್ನೂ ನಿರ್ಮಿಸಿದೆ. ಗೆಲುವಿಗೆ 195 ರನ್ ಗುರಿ ಪಡೆದ ಅಮೆರಿಕ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ ಬೆನ್ನಟ್ಟಿತು. ಈ ಮೂಲಕ ಇದೇ ಮೊದಲ ಬಾರಿಗೆ ಇಷ್ಟು ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಾಖಲೆಯನ್ನು ಅಮೆರಿಕ ಬರೆಯಿತು. ಮತ್ತೊಂದೆಡೆ, ಅಸೋಸಿಯೇಟ್ ರಾಷ್ಟ್ರವಾಗಿ ಆಡುತ್ತಿರುವ ಕೆನಡಾ, ನೆದರ್ಲೆಂಡ್ಸ್‌ನ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆನಡಾ 194 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಇದು ಈ ಟೂರ್ನಿಯಲ್ಲಿ ಯಾವುದೇ ಸಹವರ್ತಿ ರಾಷ್ಟ್ರ ಕಲೆಹಾಕಿದ ಅತ್ಯಧಿಕ ಸ್ಕೋರ್ ಆಗಿದೆ. 2014ರಲ್ಲಿ ನೆದರ್ಲೆಂಡ್ 193 ರನ್ ಗಳಿಸಿದ್ದು, ಇಲ್ಲಿಯವರೆಗಿನ ದಾಖಲೆಯಾಗಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:33 pm, Sun, 2 June 24