ಟಿ20 ವಿಶ್ವಕಪ್ನ ಸೂಪರ್-8 ಸುತ್ತಿನ ಪಂದ್ಯಗಳು ಮುಗಿದಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳು ಜೂನ್ 27 ರಂದು ನಡೆಯಲಿವೆ. ಭಾರತದ ಕಾಲಮಾನ ಬೆಳಗ್ಗೆ 6 ಗಂಟೆಗೆ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವೆ ಮೊದಲ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಪ್ರಾವಿಡೆನ್ಸ್‌ನಲ್ಲಿ ರಾತ್ರಿ 8 ಗಂಟೆಗೆ ನಡೆಯಲಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಆಸ್ಟ್ರೇಲಿಯಾವನ್ನು ಮಣಿಸಿ ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಮತ್ತೊಂದೆಡೆ, ಇಂಗ್ಲೆಂಡ್ ಅಮೆರಿಕವನ್ನು ಸೋಲಿಸಿ ಸೆಮಿಫೈನಲ್‌ಗೆ ಅರ್ಹತೆ ಗಳಿಸಿತ್ತು. ಇನ್ನು ಈ ಮಹತ್ವದ ಪಂದ್ಯಕ್ಕೆ ಉಭಯ ತಂಡಗಳು ಹೇಗಿರಲಿವೆ ಎಂಬುದನ್ನು ನೋಡುವುದಾದರೆ..
ಭಾರತ ಈ ಪಂದ್ಯದಲ್ಲಿ ಮತ್ತೊಮ್ಮೆ ರೋಹಿತ್ ಶರ್ಮಾ ಅವರಿಂದ ಬಲಿಷ್ಠ ಆರಂಭದ ನಿರೀಕ್ಷೆಯಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ್ದ ರೋಹಿತ್ 92 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಮುಂಬರುವ ಪಂದ್ಯದಲ್ಲೂ ಅವರಿಂದ ಅಂತಹ ಪ್ರದರ್ಶನ ನಿರೀಕ್ಷಿಸಲಾಗಿದೆ. ಆದರೆ ವಿರಾಟ್ ಕೊಹ್ಲಿ ಅವರ ಫಾರ್ಮ್ ಇದುವರೆಗೆ ಕಳವಳಕಾರಿಯಾಗಿದೆ. ಪ್ರಸಕ್ತ ಟೂರ್ನಿಯಲ್ಲಿ ಇದುವರೆಗೆ ಕೊಹ್ಲಿ 66 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಅದಾಗ್ಯೂ ಈ ಆರಂಭಿಕ ಜೋಡಿಯಲ್ಲಿ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಎಂದಿನಂತೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮೂರನೇ ಸ್ಥಾನದಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ಆರು ಪಂದ್ಯಗಳಲ್ಲಿ ಅವರು 132.53 ಸ್ಟ್ರೈಕ್ ರೇಟ್‌ನಲ್ಲಿ 167 ರನ್ ಗಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದು, ಪ್ರಸಕ್ತ ಟೂರ್ನಿಯಲ್ಲಿ ಅವರು ಎರಡು ಅರ್ಧಶತಕಗಳ ನೆರವಿನಿಂದ 149 ರನ್ ಗಳಿಸಿದ್ದಾರೆ. ಶಿವಂ ದುಬೆ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲ್ಲಿದ್ದು, ಸಂಜು ಸ್ಯಾಮ್ಸನ್ಗೆ ಅವಕಾಶ ಸಿಗುವ ಸಾಧ್ಯತೆಗಳಿಲ್ಲ. ಉಪನಾಯಕ ಹಾರ್ದಿಕ್ ಪಾಂಡ್ಯ ಎಂದಿನಂತೆ ಗೇಮ್ ಫಿನಿಶರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸ್ಪಿನ್ ವಿಭಾಗದಲ್ಲಿ ರವೀಂದ್ರ ಜಡೇಜಾ, ಅಕ್ಸರ್ ಪಟೇಲ್ ಮತ್ತು ಕುಲ್ದೀಪ್ ಯಾದವ್ ಇರುವುದು ಖಚಿತ. ಈ ಮೂವರು ಸ್ಪಿನ್ನರ್ಗಳು ತಮ್ಮ ಮ್ಯಾಜಿಕಲ್ ಸ್ಪಿನ್ ಬೌಲಿಂಗ್ನಿಂದ ವೆಸ್ಟ್ ಇಂಡೀಸ್ ಪಿಚ್‌ಗಳ ಮೇಲೆ ವಿಶೇಷ ಪ್ರಭಾವ ಬೀರಿದ್ದಾರೆ. ಅದೇ ಸಮಯದಲ್ಲಿ, ಜಸ್ಪ್ರೀತ್ ಬುಮ್ರಾ ವೇಗದ ಬೌಲಿಂಗ್ ದಾಳಿಯ ಜವಾಬ್ದಾರಿಯನ್ನು ನಿಭಾಯಿಸಲ್ಲಿದ್ದು, ಅರ್ಷದೀಪ್ ಸಿಂಗ್ ಅವರಿಗೆ ಬೆಂಬಲ ನೀಡಲಿದ್ದಾರೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಷದೀಪ್ ಸಿಂಗ್.
ಇಂಗ್ಲೆಂಡ್ ಸಂಭಾವ್ಯ ತಂಡ: ಫಿಲ್ ಸಾಲ್ಟ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ರೀಸ್ ಟೋಪ್ಲಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ