South Africa: ಐತಿಹಾಸಿಕ ಜಯ… ಸೌತ್ ಆಫ್ರಿಕಾ ಫೈನಲ್ಗೆ
T20 World Cup 2024: ಟಿ20 ವಿಶ್ವಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶಿಸಿದೆ. ಟ್ರಿನಿಡಾಡ್ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಐಡೆನ್ ಮಾರ್ಕ್ರಾಮ್ ಪಡೆ ಈ ಸಾಧನೆ ಮಾಡಿದೆ. ಇದಕ್ಕೂ ಮುನ್ನ 2009 ಮತ್ತು 2014 ರಲ್ಲಿ ಸೆಮಿಫೈನಲ್ವರೆಗೆ ತಲುಪಿದ್ದು ಸೌತ್ ಆಫ್ರಿಕಾ ತಂಡದ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ಚೊಚ್ಚಲ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿದೆ.
T20 World Cup 2024: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಜಯ ಸಾಧಿಸಿ ಸೌತ್ ಆಫ್ರಿಕಾ ತಂಡ ಫೈನಲ್ಗೆ ಪ್ರವೇಶಿಸಿದೆ. ವಿಶ್ವಕಪ್ ಇತಿಹಾಸದಲ್ಲಿ ಇದು ಸೌತ್ ಆಫ್ರಿಕಾ ತಂಡದ ಮೊದಲ ಸೆಮಿಫೈನಲ್ ಗೆಲುವು ಎಂಬುದು ವಿಶೇಷ. ಅಂದರೆ 1992 ರಿಂದ ವಿಶ್ವಕಪ್ನಲ್ಲಿ ಕಣಕ್ಕಿಳಿಯುತ್ತಿರುವ ಆಫ್ರಿಕನ್ನರು ಒಮ್ಮೆಯೂ ಫೈನಲ್ಗೆ ಪ್ರವೇಶಿಸಿರಲಿಲ್ಲ. ಇದೀಗ ಅಫ್ಘಾನಿಸ್ತಾನ್ ತಂಡವನ್ನು ಬಗ್ಗು ಬಡಿದು ಚೊಚ್ಚಲ ಬಾರಿ ಫೈನಲ್ ಸುತ್ತಿಗೆ ಪ್ರವೇಶಿಸಿದೆ.
ಇದಕ್ಕೂ ಮುನ್ನ ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆದರೆ ಮೊದಲ ಓವರ್ನಿಂದಲೇ ಕರಾರುವಾಕ್ ದಾಳಿ ಸಂಘಟಿಸಿದ ಸೌತ್ ಆಫ್ರಿಕಾ ಬೌಲರ್ಗಳು ಆರಂಭದಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾದರು.
ಮಾರ್ಕೊ ಯಾನ್ಸೆನ್ ಮೊದಲ ಓವರ್ನಲ್ಲೇ ರಹಮಾನುಲ್ಲಾ ಗುರ್ಬಾಝ್ (0) ವಿಕೆಟ್ ಪಡೆದರೆ, ಆ ಬಳಿಕ ಬಂದ ಗುಲ್ಬದ್ದಿನ್ ನೈಬ್ (9) ಕ್ಲೀನ್ ಬೌಲ್ಡ್ ಆದರು. ಇನ್ನು ಇಬ್ರಾಹಿಂ ಝದ್ರಾನ್ (2) ರಬಾಡ ಎಸೆತದಲ್ಲಿ ವಿಕೆಟ್ ಕೈಚೆಲ್ಲಿದರು.
ಇದರ ನಡುವೆ ಅಝ್ಮತುಲ್ಲಾ ಒಮರ್ಝಾಹಿ 10 ರನ್ಗಳಿಸಿದರೂ ಅನ್ರಿಕ್ ನೋಕಿಯಾ ಎಸೆತದಲ್ಲಿ ಔಟಾದರು. ಇನ್ನು ಅನುಭವಿ ಬ್ಯಾಟರ್ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ನಂಗೆಯಾಲಿಯಾ ಖರೋಟೆ 2 ರನ್ಗಳಿಸಿ ಔಟಾದರು. ಪರಿಣಾಮ 23 ರನ್ ಕಲೆಹಾಕುವಷ್ಟರಲ್ಲಿ ಅಫ್ಘಾನಿಸ್ತಾನ್ ತಂಡವು 5 ವಿಕೆಟ್ ಕಳೆದುಕೊಂಡಿತು.
ಆ ಬಳಿಕ ಬಂದ ಕರೀಮ್ ಜನ್ನತ್ (8) ಮತ್ತು ರಶೀದ್ ಖಾನ್ (8) ಅಲ್ಪ ಹೊತ್ತು ಕ್ರೀಸ್ನಲ್ಲಿದ್ದರು. ಇವರಿಬ್ಬರ ಪತನದೊಂದಿಗೆ ಪೆವಿಲಿಯನ್ ಪರೇಡ್ ಮುಂದುವರೆಸಿದ ಅಫ್ಘಾನಿಸ್ತಾನ್ ತಂಡ 11.5 ಓವರ್ಗಳಲ್ಲಿ 56 ರನ್ಗಳಿಸಿ ಆಲೌಟ್ ಆಯಿತು.
ಸೌತ್ ಆಫ್ರಿಕಾ ಪರ ತಬ್ರೇಝ್ ಶಂಸಿ ಹಾಗೂ ಮಾರ್ಕೊ ಯಾನ್ಸೆನ್ ತಲಾ 3 ವಿಕೆಟ್ ಪಡೆದರೆ, ಕಗಿಸೊ ರಬಾಡ ಹಾಗೂ ಅನ್ರಿಕ್ ನೋಕಿಯಾ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.
ಕೇವಲ 57 ರನ್ಗಳ ಟಾರ್ಗೆಟ್:
ಕೇವಲ 57 ರನ್ಗಳ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಫಝಲ್ಹಕ್ ಫಾರೂಖಿ ಎಸೆದ 2ನೇ ಓವರ್ನ 5ನೇ ಎಸೆತದಲ್ಲಿ ಕ್ವಿಂಟನ್ ಡಿಕಾಕ್ (5) ಕ್ಲೀನ್ ಬೌಲ್ಡ್ ಆದರು. ಈ ಹಂತದಲ್ಲಿ ಜೊತೆಗೂಡಿದ ರೀಝ ಹೆಂಡ್ರಿಕ್ಸ್ ಹಾಗೂ ಐಡೆನ್ ಮಾರ್ಕ್ರಾಮ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಅಲ್ಲದೆ 8.5 ಓವರ್ಗಳಲ್ಲಿ 57 ರನ್ಗಳ ಗುರಿ ಮುಟ್ಟುವ ಮೂಲಕ ಸೌತ್ ಆಫ್ರಿಕಾ ತಂಡವು 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ಸೌತ್ ಆಫ್ರಿಕಾ ತಂಡವು ಟಿ20 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ. ಅಲ್ಲದೆ ಜೂನ್ 29 ರಂದು ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಅಥವಾ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಸೌತ್ ಆಫ್ರಿಕಾ ಪ್ಲೇಯಿಂಗ್ 11: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) , ರೀಝ ಹೆಂಡ್ರಿಕ್ಸ್ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಕ್ ಕ್ಲಾಸೆನ್ , ಡೇವಿಡ್ ಮಿಲ್ಲರ್ , ಟ್ರಿಸ್ಟಾನ್ ಸ್ಟಬ್ಸ್ , ಮಾರ್ಕೊ ಯಾನ್ಸೆನ್ , ಕೇಶವ್ ಮಹಾರಾಜ್ , ಕಗಿಸೋ ರಬಾಡ , ಅನ್ರಿಕ್ ನೋಕಿಯಾ, ತಬ್ರೇಝ್ ಶಂಸಿ.
ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ
ಅಫ್ಘಾನಿಸ್ತಾನ್ ಪ್ಲೇಯಿಂಗ್ 11: ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್) , ಇಬ್ರಾಹಿಂ ಝದ್ರಾನ್ , ಅಝ್ಮತುಲ್ಲಾ ಒಮರ್ಜಾಯ್ , ಗುಲ್ಬದಿನ್ ನೈಬ್ , ಮೊಹಮ್ಮದ್ ನಬಿ , ಕರೀಂ ಜನತ್ , ರಶೀದ್ ಖಾನ್ (ನಾಯಕ) , ನಂಗೆಯಾಲಿಯಾ ಖರೋಟೆ , ನೂರ್ ಅಹ್ಮದ್ , ನವೀನ್-ಉಲ್-ಹಕ್ , ಫಝಲ್ಹಕ್ ಫಾರೂಖಿ.
Published On - 8:08 am, Thu, 27 June 24