T20 World Cup 2024: ಟಿ20 ವಿಶ್ವಕಪ್ನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಗಯಾನಾದ ಪ್ರೊವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಇದೀಗ ಮಳೆ ಭೀತಿ ಎದುರಾಗಿದೆ. ಅಂದರೆ ಇಂದಿನ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಲಿದೆ ಎಂದು ಹವಾಮಾನ ವರದಿಗಳು ಹೇಳಿವೆ.
ಅಕ್ಯುವೆದರ್ ವರದಿ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡುವುದು ಖಚಿತ. ಏಕೆಂದರೆ ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮುಂಚೆ, ಅಂದರೆ ಸ್ಥಳೀಯ ಸಮಯ ಬೆಳಗ್ಗೆ 10 ಗಂಟೆಗೆ ಶೇ.66 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ಆ ಬಳಿಕ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, 11 ಗಂಟೆಯ ಬಳಿಕ ಮಳೆಯ ಸಂಭವನೀಯತೆ ಶೇಕಡಾ 75 ರಷ್ಟು ಇರಲಿದೆ ಎಂದು ತಿಳಿಸಲಾಗಿದೆ.
ಇನ್ನು 12 ಗಂಟೆಯ ಬಳಿಕ ಮಳೆ ಕಡಿಮೆಯಾದರೂ, ಶೇ.49 ರಷ್ಟು ವರ್ಷಧಾರೆಯಾಗಲಿದೆ. ಅಲ್ಲದೆ ಮುಂದಿನ ಮೂರು ಗಂಟೆಗಳ ಕಾಲ, ಅಂದರೆ ಸ್ಥಳೀಯ ಸಮಯ 3 PM (12:30 AM IST) ವರೆಗೆ, ಮೋಡ ಕವಿದ ವಾತಾವರಣ ಮುಂದುವರೆಯಲಿದೆ. ಈ ವೇಳೆ ಮಳೆಯ ಸಂಭವನೀಯತೆ 35-40 ಪ್ರತಿಶತದಷ್ಟು ಇರಲಿದೆ ಎಂದು ತಿಳಿಸಲಾಗಿದೆ.
ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ನಿಗದಿತ ಸಮಯದಲ್ಲಿ ನಡೆಯುವುದಿಲ್ಲ ಎಂದೇ ಹೇಳಬಹುದು. ಇನ್ನು ಹೆಚ್ಚುವರಿ ಸಮಯವನ್ನು ಬಳಸಿಕೊಂಡರೂ ಅದಕ್ಕೂ ಮಳೆ ಅಡಚಣೆಯನ್ನುಂಟು ಮಾಡುವ ಸಾಧ್ಯತೆ ಹೆಚ್ಚಿದೆ.
ಏಕೆಂದರೆ ಗಯಾನಾ ಸಮಯ ಸಂಜೆ 4 ರಿಂದ 5 ಗಂಟೆವರೆಗೆ ಶೇ.50 ರಷ್ಟು ಮಳೆಯಾಗಲಿದ್ದು, ರಾತ್ರಿ 7 ಗಂಟೆಯಿಂದ ಮಳೆಯ ಪ್ರಮಾಣ ಶೇ.20 ರಿಂದ 30 ಕ್ಕೆ ಇಳಿಯಲಿದೆ ಎಂದು ಅಕ್ಯುವೆದರ್ ವರದಿ ತಿಳಿಸಿದೆ. ಅಂದರೆ ಇಲ್ಲಿ ಸತತ ಮಳೆಯಾದರೆ ಮೈದಾನ ಒದ್ದೆಯಾಗುವುದು ಖಚಿತ. ಹೀಗಾಗಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ನಡೆಯಲಿದೆಯಾ ಎಂಬುದೇ ಪ್ರಶ್ನೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯಕ್ಕೆ ಮೀಸಲು ದಿನದಾಟ ನಿಗದಿ ಮಾಡಲಾಗಿಲ್ಲ. ಬದಲಾಗಿ ಮಳೆಯಿಂದಾಗಿ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 250 ನಿಮಿಷಗಳನ್ನು ಬಳಸಲಾಗುತ್ತದೆ. ಇದರ ನಡುವೆ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ, ಮ್ಯಾಚ್ ಅನ್ನು ಕ್ಯಾನ್ಸಲ್ ಮಾಡಲಿದ್ದಾರೆ.
ಒಂದು ವೇಳೆ ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಮಳೆಯಿಂದ ರದ್ದಾದರೆ, ಟೀಮ್ ಇಂಡಿಯಾ ಫೈನಲ್ಗೆ ಪ್ರವೇಶಿಸಲಿದೆ. ಐಸಿಸಿ ನಿಯಮದ ಪ್ರಕಾರ, ನಾಕೌಟ್ ಪಂದ್ಯಗಳು ಮಳೆಯಿಂದ ರದ್ದಾದರೆ ಗ್ರೂಪ್ ಹಂತದ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ ತಂಡ ಮುಂದಿನ ಹಂತಕ್ಕೇರಲಿದೆ.
ಇಲ್ಲಿ ಟೀಮ್ ಇಂಡಿಯಾ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕಾರಣ ಫೈನಲ್ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಮಳೆ ಬಂದರೂ ಭಾರತ ತಂಡಕ್ಕೆ ಯಾವುದೇ ಚಿಂತೆಯಿಲ್ಲ ಎನ್ನಬಹುದು.
ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ
ಭಾರತ ಮತ್ತು ಇಂಗ್ಲೆಂಡ್ ನಡುವಣ ಪಂದ್ಯವು ಬೆಳಿಗ್ಗೆ 10.30 ಕ್ಕೆ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಪ್ರಾರಂಭವಾಗಲಿದೆ. ನಿಗದಿತ ಸಮಯದಂತೆ ರಾತ್ರಿ 11.30 (IST) ರೊಳಗೆ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಹೆಚ್ಚು 4 ಗಂಟೆ 16 ನಿಮಿಷಗಳನ್ನು ಬಳಸಲಾಗುತ್ತದೆ. ಈ ಅವಧಿಯೊಳಗೆ ಪಂದ್ಯ ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ.