2024 ರ ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪ್ರಶಸ್ತಿ ಪಂದ್ಯ ನಡೆಯಲಿದೆ . ವೆಸ್ಟ್ ಇಂಡೀಸ್‌ನ ಬಾರ್ಬಡೋಸ್‌ನಲ್ಲಿರುವ ಕೆನ್ಸಿಂಗ್ಟನ್ ಓವಲ್ ಮೈದಾನ ಈ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ಭಾರತ ತಂಡ ಈ ಮೈದಾನದಲ್ಲಿ ಇಲ್ಲಿಯವರೆಗೆ ಒಟ್ಟು 3 ಪಂದ್ಯಗಳನ್ನು ಆಡಿದ್ದರೆ, ಈ ಮೈದಾನದಲ್ಲಿ ಇಲ್ಲಿಯವರೆಗೆ ಈ ವಿಶ್ವಕಪ್‌ನಲ್ಲಿ ಒಟ್ಟು 8 ಪಂದ್ಯಗಳು ನಡೆದಿವೆ. ಹೀಗಾಗಿ ಈ ಮೈದಾನದ ಪಿಚ್ ಯಾರಿಗೆ ಸಹಕಾರಿ? ಈ ವಿಶ್ವಕಪ್‌ನಲ್ಲಿ ನಡೆದ ಪಂದ್ಯಗಳ ಫಲಿತಾಂಶ ಹೇಗಿತ್ತು ಎಂಬುದನ್ನು ನೋಡುವುದಾದರೆ..
ಬಾರ್ಬಡೋಸ್‌ನ ಈ ಕ್ರೀಡಾಂಗಣದಲ್ಲಿ ಬ್ಯಾಟ್ಸ್‌ಮನ್‌ಗಳು ಮತ್ತು ಬೌಲರ್‌ಗಳಿಬ್ಬರೂ ಪ್ರಾಬಲ್ಯ ಹೊಂದಿದ್ದಾರೆ. ಇಲ್ಲಿ ಸ್ಪಿನ್ನರ್‌ಗಳಿಗೆ ಮಧ್ಯಮ ಓವರ್‌ಗಳಲ್ಲಿ ಹೆಚ್ಚುವರಿ ಸಹಾಯ ಸಿಗುತ್ತದೆ. ಹಾಗೆಯೇ ವೇಗದ ಬೌಲರ್‌ಗಳಿಗೂ ಕೊಂಚ ಸ್ವಿಂಗ್ ಸಿಗುತ್ತದೆ. ವೇಗದ ಔಟ್‌ಫೀಲ್ಡ್‌ನಿಂದಾಗಿ, ಇಲ್ಲಿ 150 ಕ್ಕಿಂತ ಹೆಚ್ಚಿನ ರನ್ಗಳನ್ನು ಸುಲಭವಾಗಿ ಸ್ಕೋರ್ ಮಾಡಬಹುದಾಗಿದೆ. ಸಾಮಾನ್ಯವಾಗಿ ಇಲ್ಲಿನ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ಆದ್ಯತೆ ನೀಡುತ್ತದೆ. ಈ ಕ್ರೀಡಾಂಗಣದಲ್ಲಿ ಇದುವರೆಗೆ ಒಟ್ಟು 32 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ 19 ಬಾರಿ ಗೆದ್ದಿದ್ದರೆ, 11 ಬಾರಿ ಗುರಿ ಬೆನ್ನಟ್ಟಿದ ತಂಡ ಗೆದ್ದಿದೆ. 2 ಪಂದ್ಯಗಳು ಫಲಿತಾಂಶವಿಲ್ಲದೆ ಅಂತ್ಯಗೊಂಡಿವೆ.
ವೆಸ್ಟ್ ಇಂಡೀಸ್‌ನ ಈ ಮೈದಾನದಲ್ಲಿ ಭಾರತ ಇದುವರೆಗೆ ಕೇವಲ 3 ಟಿ20 ಪಂದ್ಯಗಳನ್ನು ಮಾತ್ರ ಆಡಿದೆ. ಈ ಪೈಕಿ ಭಾರತ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದಂತೆ ಎರಡು ಪಂದ್ಯಗಳಲ್ಲಿ ಸೋಲು ಕಂಡಿದೆ. ಇತ್ತೀಚೆಗಷ್ಟೇ ಭಾರತ ಇಲ್ಲಿ ಅಫ್ಘಾನಿಸ್ತಾನ ವಿರುದ್ಧ 47 ರನ್‌ಗಳಿಂದ ಗೆದ್ದಿತ್ತು. ಆದರೆ 2010ರಲ್ಲಿ ಈ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 14 ರನ್‌ಗಳಿಂದ ಮತ್ತು ಆಸ್ಟ್ರೇಲಿಯಾ ವಿರುದ್ಧ 49 ರನ್‌ಗಳಿಂದ ಸೋಲನುಭವಿಸಿತ್ತು.
2024ರ ಟಿ20 ವಿಶ್ವಕಪ್‌ನಲ್ಲಿ ಇದುವರೆಗೆ ಈ ಮೈದಾನದಲ್ಲಿ ಒಟ್ಟು 8 ಪಂದ್ಯಗಳನ್ನು ಆಡಲಾಗಿದೆ. ಅದರಲ್ಲಿ ಸೂಪರ್-8 ಸುತ್ತಿನಲ್ಲಿ ಆಡಿದ 3 ಪಂದ್ಯಗಳಲ್ಲಿ ಮೊದಲ ಪಂದ್ಯವು ಜೂನ್ 23 ರಂದು ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಿತು. ಇದರಲ್ಲಿ ಭಾರತ 47 ರನ್‌ಗಳ ಜಯ ಸಾಧಿಸಿತು. ಎರಡನೇ ಪಂದ್ಯ ಜೂನ್ 21 ರಂದು ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಡುವೆ ನಡೆಯಿತು. ಇದರಲ್ಲಿ ವೆಸ್ಟ್ ಇಂಡೀಸ್ 9 ವಿಕೆಟ್‌ಗಳ ಜಯ ಸಾಧಿಸಿತು. ಅದೇ ಸಮಯದಲ್ಲಿ, ಈ ಮೈದಾನದಲ್ಲಿ ಕೊನೆಯ ಪಂದ್ಯವನ್ನು ಜೂನ್ 23 ರಂದು ಆಡಲಾಯಿತು. ಈ ಪಂದ್ಯ ನಡೆದಿದ್ದು ಅಮೆರಿಕ ಮತ್ತು ಇಂಗ್ಲೆಂಡ್ ನಡುವೆ. ಇದರಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳ ಜಯ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ