IND vs SA: ಭಾರತ vs ಸೌತ್ ಆಫ್ರಿಕಾ: ಟಿ20 ವಿಶ್ವಕಪ್ ಮಹಾಸಮರಕ್ಕೆ ವೇದಿಕೆ ಸಜ್ಜು
T20 World Cup 2024: ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಅದರಲ್ಲೂ ಈವರೆಗೆ ಯಾವುದೇ ವಿಶ್ವಕಪ್ ಗೆಲ್ಲದಿರುವ ಸೌತ್ ಆಫ್ರಿಕಾ ತಂಡವು ಚೊಚ್ಚಲ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ. ಮತ್ತೊಂದೆಡೆ 2007ರ ಬಳಿಕ ಟಿ20 ವಿಶ್ವಕಪ್ ಗೆಲ್ಲದ ಭಾರತ ತಂಡವು 10 ವರ್ಷಗಳ ಬಳಿಕ ಚುಟುಕು ಕ್ರಿಕೆಟ್ ಮಹಾಸಮರದಲ್ಲಿ ಫೈನಲ್ಗೆ ಪ್ರವೇಶಿಸಿದೆ.
T20 World Cup 2024: ಟಿ20 ವಿಶ್ವಕಪ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಜೂನ್.29) ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿದೆ. ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
ಏಕೆಂದರೆ ಉಭಯ ತಂಡಗಳು ಈ ಬಾರಿಯ ವಿಶ್ವಕಪ್ನಲ್ಲಿ ಸೋಲಿಲ್ಲದ ಸರದಾರರಾಗಿ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಟೀಮ್ ಇಂಡಿಯಾ ಆಡಿರುವ 7 ಪಂದ್ಯಗಳಲ್ಲೂ ವಿಜಯ ಸಾಧಿಸಿದರೆ, ಅತ್ತ ಸೌತ್ ಆಫ್ರಿಕಾ 8 ಮ್ಯಾಚ್ಗಳನ್ನು ಗೆದ್ದು ಅಂತಿಮ ಸುತ್ತಿಗೆ ಪ್ರವೇಶಿಸಿದೆ. ಹೀಗಾಗಿ ಫೈನಲ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರುವ ನಿರೀಕ್ಷೆಯಿದೆ.
ಉಭಯ ತಂಡಗಳ ಮುಖಾಮುಖಿ:
ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಈವರೆಗೆ 26 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಸೌತ್ ಆಫ್ರಿಕಾ ತಂಡ 11 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಟೀಮ್ ಇಂಡಿಯಾ 13 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ಕಾರಣಾಂತರಗಳಿಂದ ರದ್ದಾಗಿದೆ.
ಇನ್ನು ಟಿ20 ವಿಶ್ವಕಪ್ನಲ್ಲಿ ಉಭಯ ತಂಡಗಳು ಒಟ್ಟು 6 ಬಾರಿ ಪರಸ್ಪರ ಕಣಕ್ಕಿಳಿದಿದೆ. ಈ ವೇಳೆ ಟೀಮ್ ಇಂಡಿಯಾ 4 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿದೆ. ಇನ್ನು ಸೌತ್ ಆಫ್ರಿಕಾ ಗೆದ್ದಿರುವುದು ಕೇವಲ 2 ಬಾರಿ ಮಾತ್ರ.
ಎಷ್ಟು ಗಂಟೆಗೆ ಪಂದ್ಯ ಶುರು?
ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಶುರುವಾಗಲಿದೆ. ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್ವರ್ಕ್ನ ಎಲ್ಲಾ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತ ನೇರ ಪ್ರಸಾರ ಇರಲಿದೆ.
ಭಾರತ-ಸೌತ್ ಆಫ್ರಿಕಾ ತಂಡಗಳು:
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್-ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್-ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ , ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: T20 World Cup 2024: ಭಾರತ ತಂಡ ಮೋಸದಿಂದ ಗೆದ್ದಿದೆ: ಪಾಕ್ ಮಾಜಿ ನಾಯಕನ ಗಂಭೀರ ಆರೋಪ
ಸೌತ್ ಆಫ್ರಿಕಾ ತಂಡ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಝ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟನ್ ಸ್ಟಬ್ಸ್, ಮಾರ್ಕೊ ಯಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಕ್ ನೋಕಿಯಾ, ತಬ್ರೇಝ್ ಶಮ್ಸಿ, ಒಟ್ನೀಲ್ ಬಾರ್ಟ್‌ಮನ್, ಗೆರಾಲ್ಡ್ ಕೋಯಟ್ಝಿ, ಜಾರ್ನ್ ಫಾರ್ಚುಯಿನ್, ರಯಾನ್ ರಿಕೆಲ್ಟನ್.
Published On - 7:22 am, Sat, 29 June 24