T20 World Cup 2024: ಟಿ20 ವಿಶ್ವಕಪ್ ಸೂಪರ್-8 ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶ್ ವಿರುದ್ಧ ಸೆಣಸಲಿದೆ. ಅಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಇಂದು (ಜೂ.22) ನಡೆಯಲಿರುವ ಈ ಪಂದ್ಯದಲ್ಲಿ ಗೆದ್ದರೆ ಟೀಮ್ ಇಂಡಿಯಾ ಸೆಮಿಫೈನಲ್ಗೇರುವುದು ಬಹುತೇಕ ಖಚಿತವಾಗಲಿದೆ.
ಏಕೆಂದರೆ ಇದಕ್ಕೂ ಮುನ್ನ ಭಾರತ ತಂಡವು ಅಫ್ಘಾನಿಸ್ತಾನ್ ವಿರುದ್ಧ ಜಯ ಸಾಧಿಸಿ 2 ಅಂಕಗಳನ್ನು ಕಲೆಹಾಕಿದೆ. ಇದೀಗ ಬಾಂಗ್ಲಾದೇಶ್ ವಿರುದ್ಧ ಗೆದ್ದರೆ ಮತ್ತೆರಡು ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ.
ಈ ಮೂಲಕ ಟೀಮ್ ಇಂಡಿಯಾ ಇಂದು ಸೆಮಿಫೈನಲ್ಗೇರುವ ಹಾದಿಯನ್ನು ಸುಗಮಗೊಳಿಸಬಹುದು. ಅತ್ತ ಬಾಂಗ್ಲಾದೇಶ್ ತಂಡವು ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದು, ಇಂದು ಭಾರತದ ವಿರುದ್ಧ ಪರಾಜಯಗೊಂಡರೆ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಇಂದಿನ ಪಂದ್ಯವು ಬಾಂಗ್ಲಾ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ.
ಭಾರತ ಮತ್ತು ಬಾಂಗ್ಲಾದೇಶ್ ತಂಡಗಳು ಟಿ20 ಕ್ರಿಕೆಟ್ನಲ್ಲಿ ಈವರೆಗೆ 13 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಟೀಮ್ ಇಂಡಿಯಾ 12 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಬಾಂಗ್ಲಾದೇಶ್ ಗೆದ್ದಿರುವುದು ಕೇವಲ ಒಂದು ಬಾರಿ ಮಾತ್ರ.
ಹಾಗೆಯೇ ಈ ಬಾರಿಯ ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯದಲ್ಲೂ ಬಾಂಗ್ಲಾ ತಂಡವನ್ನು ಬಗ್ಗು ಬಡಿಯುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಗೆಲ್ಲುವ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಗುರುತಿಸಿಕೊಂಡಿದೆ.
ಅಂಟಿಗುವಾದಲ್ಲಿ ನಡೆಯಲಿರುವ ಭಾರತ ಮತ್ತು ಬಾಂಗ್ಲಾದೇಶ್ ನಡುವಣ ಪಂದ್ಯವು ಹಗಲಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ಇರಲಿದೆ.
ಭಾರತ-ಬಾಂಗ್ಲಾದೇಶ್ ನಡುವಣ ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್ವರ್ಕ್ನ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಇರಲಿದೆ.
ಈ ಪಂದ್ಯವನ್ನು ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು. ಹಾಗೆಯೇ ಡಿಸ್ನಿ ಹಾಟ್ ಸ್ಟಾರ್ ವೆಬ್ಸೈಟ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದ್ದು, ಇದಕ್ಕಾಗಿ ರಿಜಾರ್ಜ್ ಮಾಡಬೇಕಾಗುತ್ತದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ.
ಇದನ್ನೂ ಓದಿ: Lockie Ferguson: ಟಿ20 ವಿಶ್ವಕಪ್ನಲ್ಲಿ ವಿಶ್ವ ದಾಖಲೆ ಬರೆದ ಲಾಕಿ ಫರ್ಗುಸನ್
ಬಾಂಗ್ಲಾದೇಶ ತಂಡ: ತಂಝಿದ್ ಹಸನ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತೌಹಿದ್ ಹೃದೋಯ್, ಶಕೀಬ್ ಅಲ್ ಹಸನ್, ಮಹಮ್ಮದುಲ್ಲಾ, ರಿಶಾದ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ತಂಝಿಮ್ ಹಸನ್ ಸಾಕಿಬ್, ಮುಸ್ತಫಿಜುರ್ ರೆಹಮಾನ್, ಜಾಕರ್ ಅಲಿ, ತನ್ವೀರ್ ಇಸ್ಲಾಂ, ಶೋರಿಫುಲ್ ಇಸ್ಲಾಂ, ಸೌಮ್ಯ ಸರ್ಕಾರ್.