T20 World Cup 2024: ಸೆಮಿಫೈನಲ್​ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ..?

|

Updated on: Jun 24, 2024 | 12:09 PM

T20 World Cup 2024: 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಆಂಗ್ಲರು ಬಗ್ಗು ಬಡಿದಿದ್ದರು. ಇದೀಗ ಎರಡು ವರ್ಷಗಳ ಆಂಗ್ಲರ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಟೀಮ್ ಇಂಡಿಯಾಗೆ ಒದಗಿ ಬರುತ್ತಿದೆ.

T20 World Cup 2024: ಸೆಮಿಫೈನಲ್​ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ..?
IND vs ENG
Follow us on

T20 World Cup 2024: ಟಿ20 ವಿಶ್ವಕಪ್​ ನಾಕೌಟ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 2 ತಂಡಗಳು ಸೆಮಿಫೈನಲ್​ಗೇರಿದರೆ, ಮತ್ತೆರಡು ತಂಡಗಳು ಸೆಮಿಫೈನಲ್ ಹಾದಿಯಲ್ಲಿದೆ. ಅದರಂತೆ ಇದೀಗ ಇಂಗ್ಲೆಂಡ್ ಹಾಗೂ ಸೌತ್ ಆಫ್ರಿಕಾ ತಂಡಗಳು ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿಕೊಂಡಿದೆ. ಗ್ರೂಪ್-2 ನಿಂದ 2ನೇ ತಂಡವಾಗಿ ಸೆಮಿಫೈನಲ್​ಗೆ ಪ್ರವೇಶಿಸಿರುವ ಇಂಗ್ಲೆಂಡ್ ಜೂನ್ 27 ರಂದು 2ನೇ ಸೆಮಿಫೈನಲ್ ಆಡಲಿದೆ. ಗಯಾನಾದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುವ ಸಾಧ್ಯತೆ ಹೆಚ್ಚು.

ಏಕೆಂದರೆ ಗ್ರೂಪ್-1 ರ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಜಯ ಸಾಧಿಸಿದರೆ, ಅಗ್ರ ತಂಡವಾಗಿ ಸೆಮಿಫೈನಲ್​ಗೆ ಪ್ರವೇಶಿಸಲಿದೆ. ಹಾಗೆಯೇ ಇಂದಿನ ಪಂದ್ಯವು ಮಳೆಯಿಂದಾಗಿ ರದ್ದಾದರೂ ಭಾರತ ತಂಡ ಪಾಯಿಂಟ್ಸ್ ಟೇಬಲ್​ನಲ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳಲಿದೆ. ಅದರಂತೆ ಸೆಮಿಫೈನಲ್​ನಲ್ಲಿ ಗ್ರೂಪ್-1 ರ ಅಗ್ರ ತಂಡ ಹಾಗೂ ಗ್ರೂಪ್-2 ರ ದ್ವಿತೀಯ ಸ್ಥಾನಿ ಮುಖಾಮುಖಿಯಾಗಲಿದೆ.

ಇಲ್ಲಿ ಟೀಮ್ ಇಂಡಿಯಾ ಗ್ರೂಪ್-1 ಅಗ್ರ ತಂಡವಾದರೆ, ಇಂಗ್ಲೆಂಡ್ ಗ್ರೂಪ್-2ರ ದ್ವಿತೀಯ ತಂಡವಾಗಿ ಕಾಣಿಸಿಕೊಂಡಿದೆ. ಹೀಗಾಗಿ ಜೂನ್ 27 ರಂದು ನಡೆಯಲಿರುವ 2ನೇ ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುವುದು ಬಹುತೇಕ ಖಚಿತ ಎನ್ನಬಹುದು.

ಇಂಡೊ-ಇಂಗ್ಲೆಂಡ್ ಮುಖಾಮುಖಿ:

2022ರ ಟಿ20 ವಿಶ್ವಕಪ್​ ಸೆಮಿಫೈನಲ್​ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿತ್ತು. ಆಸ್ಟ್ರೇಲಿಯಾದ ಅಡಿಲೇಡ್​ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಆಂಗ್ಲರು ಬಗ್ಗು ಬಡಿದಿದ್ದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 168 ರನ್ ಕಲೆಹಾಕಿತ್ತು. ಈ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ 16 ಓವರ್​ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 170 ರನ್​ ಬಾರಿಸಿ 10 ವಿಕೆಟ್​ಗಳ ಅಮೋಘ ಗೆಲುವು ದಾಖಲಿಸಿತ್ತು.

ಅಲ್ಲದೆ ಈ ಗೆಲುವಿನ ಮೂಲಕ ಫೈನಲ್ ಪ್ರವೇಶಿಸಿದ್ದ ಇಂಗ್ಲೆಂಡ್ ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ 2 ವರ್ಷಗಳ ಬಳಿಕ ಮತ್ತೊಮ್ಮೆ ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವ ಸಾಧ್ಯತೆಯಿದೆ.

ದ್ವಿತೀಯ ಸ್ಥಾನಕ್ಕೆ ಇಳಿದರೆ ಸೌತ್ ಆಫ್ರಿಕಾ ಎದುರಾಳಿ:

ಒಂದು ವೇಳೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಕನಿಷ್ಠ 41 ರನ್​ಗಳ ಅಂತರದಿಂದ ಸೋತರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆ ಕುಸಿಯಲಿದೆ. ಹಾಗೆಯೇ ಭಾರತ ನೀಡಿದ ಟಾರ್ಗೆಟ್ ಅನ್ನು  32 ಎಸೆತಗಳನ್ನು ಬಾರಿಯಿರಿಸಿ ಆಸ್ಟ್ರೇಲಿಯಾ ಚೇಸ್ ಮಾಡಿದರೂ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ.

ಇದನ್ನೂ ಓದಿ: T20 World Cups 2024: ಇಂಗ್ಲೆಂಡ್ ತಂಡಕ್ಕೆ ವಿಶ್ವ ದಾಖಲೆಯ ವಿಜಯ

ಇತ್ತ ಭಾರತ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿ ಸೆಮಿಫೈನಲ್​ಗೆ ಪ್ರವೇಶಿಸಿದರೆ, ಗ್ರೂಪ್-1 ರಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ತಂಡವನ್ನು ಎದುರಿಸಲಿದೆ.