ENG vs SA: ಬ್ರೂಕ್ ಹೋರಾಟ ವ್ಯರ್ಥ; ಇಂಗ್ಲೆಂಡ್ ವಿರುದ್ಧ ಆಫ್ರಿಕಾಗೆ 7 ರನ್ ಜಯ

|

Updated on: Jun 22, 2024 | 12:14 AM

ENG vs SA: ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಭರವಸೆಯನ್ನು ಬಲಗೊಳಿಸಿದೆ. ದಕ್ಷಿಣ ಆಫ್ರಿಕಾ ಸೂಪರ್ 8 ಹಂತದಲ್ಲಿ ಸತತ ಎರಡನೇ ಪಂದ್ಯವನ್ನು ಗೆದ್ದು ಎರಡು ಪಂದ್ಯಗಳಿಂದ ಎರಡು ಗೆಲುವುಗಳಿಂದ ನಾಲ್ಕು ಅಂಕಗಳೊಂದಿಗೆ ಎರಡನೇ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ತಲುಪಿತು. ಈ ಸೋಲಿನ ಹೊರತಾಗಿಯೂ ಇಂಗ್ಲೆಂಡ್ ತಂಡ ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ENG vs SA: ಬ್ರೂಕ್ ಹೋರಾಟ ವ್ಯರ್ಥ; ಇಂಗ್ಲೆಂಡ್ ವಿರುದ್ಧ ಆಫ್ರಿಕಾಗೆ 7 ರನ್ ಜಯ
ದಕ್ಷಿಣ ಆಫ್ರಿಕಾ ತಂಡ
Follow us on

ಟಿ20 ವಿಶ್ವಕಪ್ 2024ರ (T20 World Cup 2024) ರೋಚಕ ಸೂಪರ್ 8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ (ENG vs SA) 7 ರನ್‌ಗಳಿಂದ ಜಯ ಸಾಧಿಸಿದೆ. ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಗೆಲುವಿಗೆ 164 ರನ್​ಗಳ ಸವಾಲನ್ನು ನೀಡಿತ್ತು. ಈ ರನ್ ಚೇಸಿಂಗ್ ವೇಳೆ ಇಂಗ್ಲೆಂಡ್ ಪ್ರಬಲ ಹೋರಾಟ ನೀಡಿತು. ಹೀಗಾಗಿ ಕೊನೆಯ ಓವರ್‌ನಲ್ಲಿ ಇಂಗ್ಲೆಂಡ್‌ಗೆ 14 ರನ್‌ಗಳ ಅಗತ್ಯವಿತ್ತು. ಆದರೆ ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮಾರ್ಕ್ರಾಮ್ ಕೊನೆಯ ಓವರ್‌ನಲ್ಲಿ ಹಿಡಿದ ಹ್ಯಾರಿ ಬ್ರೂಕ್‌ ಅವರ ಅದ್ಭುತ ಕ್ಯಾಚ್ ಇಡೀ ಪಂದ್ಯದ ಗತಿಯನ್ನು ಬದಲಿಸಿತು. ಹೀಗಾಗಿ ಹ್ಯಾರಿ ಬ್ರೂಕ್ ಅವರ ಅರ್ಧಶತಕ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಅವರ ಬಿರುಸಿನ ಇನ್ನಿಂಗ್ಸ್ ಹೊರತಾಗಿಯೂ ಇಂಗ್ಲೆಂಡ್ ಕೊನೆಯ ಎಸೆತದಲ್ಲಿ ಸೋಲೊಪ್ಪಿಕೊಂಡಿತು.

ಆಫ್ರಿಕಾಗೆ ಡಿ ಕಾಕ್ ಬಲ

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ಅವರ 65 ರನ್‌ ಹಾಗೂ ಡೇವಿಡ್ ಮಿಲ್ಲರ್ 43 ಅವರ ರನ್​ಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್ ಗಳಿಸಿತು. ಉಳಿದಂತೆ ರಿಜಾ ಹೆಂಡ್ರಿಕ್ಸ್ 19 ರನ್ ಬಾರಿಸಿದರೆ, ಹೆನ್ರಿಕ್ ಕ್ಲಾಸೆನ್ 8, ಕ್ಯಾಪ್ಟನ್ ಏಡನ್ ಮಾರ್ಕ್ರಾಮ್ 1, ಟ್ರಿಸ್ಟಾನ್ ಸ್ಟಬ್ಸ್ 12* ಮತ್ತು ಕೇಶವ್ ಮಹಾರಾಜ್ 5* ರನ್ ಬಾರಿಸಿದರು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 3 ವಿಕೆಟ್ ಪಡೆದರೆ, ಮೊಯಿನ್ ಅಲಿ ಮತ್ತು ಆದಿಲ್ ರಶೀದ್ ತಲಾ 1 ವಿಕೆಟ್ ಪಡೆದರು.

ಬ್ರೂಕ್ ಹೋರಾಟ ವ್ಯರ್ಥ

ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್​ಗೆ ಟಾಪ್ ಆರ್ಡರ್ ಕೈಕೊಟ್ಟಿತು. ಹೀಗಾಗಿ ತಂಡ ಆರಂಭದಲ್ಲೇ ಹಿನ್ನಡೆ ಅನುಭವಿಸಿತು. ಆದರೆ ಬ್ರೂಕ್ 37 ಎಸೆತಗಳಲ್ಲಿ 53 ರನ್ ಗಳಿಸಿ ತಂಡವನ್ನು ಕಷ್ಟದಿಂದ ಪಾರು ಮಾಡಿದರು. ಬ್ರೂಕ್​ಗೆ ಸಾಥ್ ನೀಡಿದ ಲಿಯಾಮ್ ಲಿವಿಂಗ್​ಸ್ಟನ್ ಕೂಡ 33 ರನ್​​​ಗಳ ಕೊಡುಗೆ ನೀಡಿದರು. ಈ ಇಬ್ಬರು ಕ್ರೀಸ್​ನಲ್ಲಿರುವಾಗ ಇಂಗ್ಲೆಂಡ್ ತಂಡಕ್ಕೆ ಸುಲಭ ಜಯ ಧಕ್ಕುವಂತೆ ತೋರುತ್ತಿತ್ತು. ಆದರೆ ಈ ಇಬ್ಬರ ವಿಕೆಟ್ ಪತನಗೊಂಡ ನಂತರ ಇಂಗ್ಲೆಂಡ್ ಸೋಲನ್ನು ಎದುರಿಸಬೇಕಾಯಿತು. ಅಂತಿಮವಾಗಿ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ ಆರು ವಿಕೆಟ್‌ಗೆ 156 ರನ್ ಗಳಿಸಲಷ್ಟೇ ಶಕ್ತವಾಯಿತು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ ಎರಡು ವಿಕೆಟ್ ಪಡೆದರು.

ಅಂಕಪಟ್ಟಿಯಲ್ಲಿ ಆಫ್ರಿಕಾಗೆ ಮೊದಲ ಸ್ಥಾನ

ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸೆಮಿಫೈನಲ್‌ ಭರವಸೆಯನ್ನು ಬಲಗೊಳಿಸಿದೆ. ದಕ್ಷಿಣ ಆಫ್ರಿಕಾ ಸೂಪರ್ 8 ಹಂತದಲ್ಲಿ ಸತತ ಎರಡನೇ ಪಂದ್ಯವನ್ನು ಗೆದ್ದು ಎರಡು ಪಂದ್ಯಗಳಿಂದ ಎರಡು ಗೆಲುವುಗಳಿಂದ ನಾಲ್ಕು ಅಂಕಗಳೊಂದಿಗೆ ಎರಡನೇ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ತಲುಪಿತು. ಈ ಸೋಲಿನ ಹೊರತಾಗಿಯೂ ಇಂಗ್ಲೆಂಡ್ ತಂಡ ಎರಡು ಪಂದ್ಯಗಳಿಂದ ಒಂದು ಗೆಲುವು ಮತ್ತು ಒಂದು ಸೋಲಿನೊಂದಿಗೆ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:55 pm, Fri, 21 June 24