Breaking: ಟಿ20 ವಿಶ್ವಕಪ್ ಗೆದ್ದು ಚುಟುಕು ಮಾದರಿಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿ..!

|

Updated on: Jun 30, 2024 | 12:58 AM

Virat Kohli T20I Retirement: ಟೀಂ ಇಂಡಿಯಾದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ, ತಮ್ಮ ನಿವೃತ್ತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

Breaking: ಟಿ20 ವಿಶ್ವಕಪ್ ಗೆದ್ದು ಚುಟುಕು ಮಾದರಿಗೆ ವಿದಾಯ ಹೇಳಿದ ಕಿಂಗ್ ಕೊಹ್ಲಿ..!
ವಿರಾಟ್ ಕೊಹ್ಲಿ
Follow us on

ಭಾರತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ ಪ್ರಶಸ್ತಿ ಗೆದ್ದಿದೆ. ಬಾರ್ಬಡೋಸ್‌ನಲ್ಲಿ ನಡೆದ ಫೈನಲ್‌ನಲ್ಲಿ ಟೀಂ ಇಂಡಿಯಾ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಭಾರತ ತನ್ನ 11 ವರ್ಷಗಳ ಐಸಿಸಿ ಟ್ರೋಫಿಯ ಬರವನ್ನು ಕೊನೆಗೊಳಿಸಿತು. ಭಾರತ ಈ ಹಿಂದೆ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಅದೇ ಸಮಯದಲ್ಲಿ ಭಾರತ 17 ವರ್ಷಗಳ ನಂತರ ಟಿ20 ವಿಶ್ವಕಪ್ ಗೆದ್ದ ಸಾಧನೆ ಮಾಡಿದೆ. ಆದರೆ ಗೆಲುವಿನ ಖುಷಿಯಲ್ಲಿ ಟೀಂ ಇಂಡಿಯಾಕ್ಕೆ ಆಘಾತ ಎದುರಾಗಿದೆ. ತಂಡದ ಮಾಜಿ ನಾಯಕ, ರನ್ ಮಷಿನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ, ತಮ್ಮ ನಿವೃತ್ತಿಯ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ಇಡೀ ಆವೃತ್ತಿಯಲ್ಲಿ ಕೊಹ್ಲಿ ಬ್ಯಾಟ್ ಮೌನಕ್ಕೆ ಶರಣಾಗಿತ್ತು. ಹೀಗಾಗಿ ಕೊಹ್ಲಿಯನ್ನು ತಂಡದಿಂದ ಹೊರಗಿಡಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಕೊಹ್ಲಿ ಮೇಲೆ ಭರವಸೆ ಇಟ್ಟಿದ್ದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್​, ಕೊಹ್ಲಿಗೆ ಸತತ ಅವಕಾಶಗಳನ್ನು ನೀಡಿದರು. ಅದರಂತೆ ಫೈನಲ್ ಪಂದ್ಯಕ್ಕೂ ಮುನ್ನ ಕೊಹ್ಲಿ ಬಗ್ಗೆ ನಂಬಿಕೆ ಮಾತುಗಳನ್ನಾಡಿದ್ದ ರೋಹಿತ್ ಶರ್ಮಾ ಹಾಗೂ ದ್ರಾವಿಡ್, ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೊಹ್ಲಿ ಖಂಡಿತವಾಗಿಯೂ ಬಿಗ್ ಇನ್ನಿಂಗ್ಸ್ ಆಡಲಿದ್ದಾರೆ ಎಂದಿದ್ದರು. ಅದರಂತೆ ನಿರ್ಣಾಯಕ ಪಂದ್ಯದಲ್ಲಿ 76 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಲಭಿಸಿತ್ತು.

ಟಿ20 ಮಾದರಿಗೆ ಕೊಹ್ಲಿ ವಿದಾಯ

ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ನೋವಾಗುವಂತಹ ಆಘಾತಕ್ಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದರು. ಈ ವೇಳೆ ಮಾತನಾಡಿದ ಕೊಹ್ಲಿ, ‘ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದ್ದು, ಇದನ್ನು ಗೆಲುವಿನೊಂದಿಗೆ ಅಂತ್ಯಗೊಳಿಸಲು ಬಯಸಿದ್ದೇನೆ ಎಂದರು. ಆ ನಂತರ ಕೊಹ್ಲಿ ಇದೇ ಫೈನಲ್ ತನ್ನ ಕೊನೆಯ ಟಿ20 ಅಂತರಾಷ್ಟ್ರೀಯ ಪಂದ್ಯ ಎಂಬುದನ್ನು ಖಚಿತಪಡಿಸಿದರು.

ಇದು ತನ್ನ ಕೊನೆಯ ಟಿ20 ವಿಶ್ವಕಪ್ ಎಂಬುದು ಬಹಿರಂಗ ರಹಸ್ಯ ಎಂದ ಕೊಹ್ಲಿ, ಇದೀಗ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಹೇಳಿದರು. ಬಳಿಕ ಈ ಯಶಸ್ಸಿಗೆ ದೇವರಿಗೆ ಕೃತಜ್ಞತೆ ಸಲ್ಲಿಸಿದ ಕೊಹ್ಲಿ, ನಾಯಕ ರೋಹಿತ್ ಶರ್ಮಾ ಅವರನ್ನು ಹೊಗಳಿದರು ಮತ್ತು ಇದು ಅವರ 9 ನೇ ಟಿ20 ವಿಶ್ವಕಪ್ ಮತ್ತು ಅವರು ಅದಕ್ಕೆ ಅರ್ಹರು ಎಂದು ಹೇಳಿದರು.

ಕೊಹ್ಲಿ ಟಿ20 ವೃತ್ತಿಜೀವನ

ಇದು ಕೊಹ್ಲಿಯ ಕೊನೆಯ ಪಂದ್ಯವಾಗಿದ್ದರೂ ಸಹ, ಅವರು ಟೀಂ ಇಂಡಿಯಾಕ್ಕಾಗಿ ಅನೇಕ ದಾಖಲೆಗಳೊಂದಿಗೆ ತಮ್ಮ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಿದರು. ಕೊಹ್ಲಿ 12 ಜೂನ್ 2010 ರಂದು ಟೀಂ ಇಂಡಿಯಾ ಪರ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಆಡಿದ್ದರು. ಇದೀಗ ಬರೋಬ್ಬರಿ 14 ವರ್ಷಗಳ ನಂತರ ತಮ್ಮ ಕೊನೆಯ ಪಂದ್ಯವನ್ನು ಆಡಿದ ಕೊಹ್ಲಿ ಇದುವರೆಗೆ 125 ಟಿ20 ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 48.69 ರ ಸರಾಸರಿಯಲ್ಲಿ 4188 ರನ್ ಕಲೆಹಾಕಿದ್ದಾರೆ. ಕೊಹ್ಲಿ ತಮ್ಮ ಟಿ20 ವೃತ್ತಿಜೀವನದಲ್ಲಿ 1 ಶತಕ ಮತ್ತು 38 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇಷ್ಟೇ ಅಲ್ಲ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಗರಿಷ್ಠ 1292 ರನ್ ಗಳಿಸುವ ಮೂಲಕ ಕೊಹ್ಲಿ ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ. ಅವರ ಹೆಸರಿನಲ್ಲಿ ಗರಿಷ್ಠ 15 ಅರ್ಧ ಶತಕಗಳು ದಾಖಲಾಗಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 am, Sun, 30 June 24