
ಟಿ೨೦ ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರುಗಳ ಈ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ರಿಂಕು ಸಿಂಗ್ ಯಶಸ್ವಿಯಾಗಿದ್ದಾರೆ. ಆದರೆ ರಿಂಕು ಸಿಂಗ್ಗೆ ದಿಢೀರ್ ಅದೃಷ್ಟ ಖುಲಾಯಿಸಿದ್ದು ಇಶಾನ್ ಕಿಶನ್ ಅಬ್ಬರದಿಂದ ಎಂಬುದು ವಿಶೇಷ.
ಇತ್ತೀಚೆಗೆ ಮುಗಿದ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಇಶಾನ್ ಕಿಶನ್ ಭರ್ಜರಿ ಪ್ರದರ್ಶನ ನೀಡಿದ್ದರು. ಜಾರ್ಖಂಡ್ ಪರ ಕಣಕ್ಕಿಳಿದಿದ್ದ ಕಿಶನ್ 2 ಶತಕ ಹಾಗೂ 2 ಅರ್ಧಶತಕಗಳೊಂದಿಗೆ ಬರೋಬ್ಬರಿ 51 ರನ್ ಕಲೆಹಾಕಿದ್ದರು. ಈ ಭರ್ಜರಿ ಪ್ರದರ್ಶನದೊಂದಿಗೆ ಇಶಾನ್ ಕಿಶನ್ ಟೀಮ್ ಇಂಡಿಯಾದ ಬಾಗಿಲು ಬಡಿದಿದ್ದರು.
ಅತ್ತ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶುಭ್ಮನ್ ಗಿಲ್ ಸಂಪೂರ್ಣ ವಿಫಲರಾಗಿದ್ದ ಕಾರಣ ಅವರನ್ನು ಟಿ೨೦ ತಂಡದಿಂದ ಕೈ ಬಿಡುವುದು ಬಿಸಿಸಿಐ ಪಾಲಿಗೆ ಅನಿವಾರ್ಯವಾಗಿತ್ತು. ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕೆಂಬ ಪ್ರಶ್ನೆಗೆ ಇದ್ದದ್ದು ಒಂದೇ ಉತ್ತರ ಇಶಾನ್ ಕಿಶನ್.
ಇಶಾನ್ ಕಿಶನ್ ಭರ್ಜರಿ ಫಾರ್ಮ್ ನಲ್ಲಿರುವ ಕಾರಣ ಅವರನ್ನೇ ಟಿ20 ವಿಶ್ವಕಪ್‌ಗೆ ಆಯ್ಕೆ ಮಾಡಲಾಯಿತು. ಇತ್ತ ವಿಕೆಟ್ ಕೀಪರ್ ಆಗಿರುವ ಇಶಾನ್ ಕಿಶನ್ ಶುಭ್ಮನ್ ಗಿಲ್ ಅವರ ಸ್ಥಾನಕ್ಕೆ ಆಯ್ಕೆಯಾಗಿದ್ದರಿಂದ ಮತ್ತೋರ್ವ ವಿಕೆಟ್ ಕೀಪರ್ನನ್ನು ತಂಡದಿಂದ ಕೈ ಬಿಡುವುದು ಅನಿವಾರ್ಯವಾಯಿತು. ಇದರಿಂದ ಜಿತೇಶ್ ಶರ್ಮಾ ಟೀಮ್ ಇಂಡಿಯಾದಿಂದ ಹೊರಬಿದ್ದರು.
ಏಕೆಂದರೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಸಂಜು ಸ್ಯಾಮ್ಸನ್ ಇದ್ದು, ಅವರೊಂದಿಗೆ ಹೆಚ್ಚುವರಿ ವಿಕೆಟ್ ಕೀಪರ್ ಆಗಿ ಇದೀಗ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲಾಗಿದೆ. ಕಿಶನ್ ಆಯ್ಕೆಯಿಂದ ಹೆಚ್ಚುವರಿ ವಿಕೆಟ್ ಕೀಪರ್ ಹಾಗೂ ಆರಂಭಿಕನ ಸ್ಥಾನ ಕೂಡ ಭರ್ತಿಯಾಗಿದೆ. ಇದರಿಂದ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದ ಜಿತೇಶ್ ಶರ್ಮಾ ಅವರನ್ನು ಕೈ ಬಿಡಲೇಬೇಕಾಯಿತು.
ಅತ್ತ ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರನ್ನು ಕೈ ಬಿಟ್ಟಿದ್ದರಿಂದ ಟೀಮ್ ಇಂಡಿಯಾಗೆ ಹೆಚ್ಚುವರಿ ಫಿನಿಶರ್ನ ಅನಿವಾರ್ಯತೆ ಎದುರಾಗಿದೆ. ಈ ವೇಳೆ ಬಿಸಿಸಿಐ ಮುಂದಿದ್ದ ಏಕೈಕ ಆಯ್ಕೆ ರಿಂಕು ಸಿಂಗ್. ಅದರಂತೆ ಭಾರತ ಟಿ20 ವಿಶ್ವಕಪ್ ತಂಡದಲ್ಲಿ ರಿಂಕು ಸಿಂಗ್ಗೆ ಅವಕಾಶ ಲಭಿಸಿತು.
ಒಂದು ವೇಳೆ ಇಶಾನ್ ಕಿಶನ್ ಆರಂಭಿಕನಾಗಿ ಆಯ್ಕೆಯಾಗದೇ ಇದ್ದಿದ್ದರೆ ರಿಂಕು ಸಿಂಗ್ಗೆ ಚಾನ್ಸ್ ಸಿಗುವ ಸಾಧ್ಯತೆ ಇರಲಿಲ್ಲ. ಏಕೆಂದರೆ ಇಶಾನ್ ಕಿಶನ್ ಹೆಚ್ಚುವರಿ ಆರಂಭಿಕ + ಹೆಚ್ಚುವರಿ ವಿಕೆಟ್ ಕೀಪರ್ ಸ್ಥಾನ ತುಂಬಿದ್ದರಿಂದ ಶುಭ್ಮನ್ ಗಿಲ್ ಹಾಗೂ ಜಿತೇಶ್ ಶರ್ಮಾ ತಂಡದಿಂದ ಹೊರಗುಳಿಯಬೇಕಾಯಿತು.
ಇದನ್ನೂ ಓದಿ: ಟೀಮ್ ಇಂಡಿಯಾದಿಂದ 7 ಆಟಗಾರರು ಔಟ್..!
ಇತ್ತ ಜಿತೇಶ್ ಶರ್ಮಾ ಹೊರಗುಳಿದ ಪರಿಣಾಮ ರಿಂಕು ಸಿಂಗ್ ಅವರಿಗೆ ಅದೃಷ್ಟ ಖುಲಾಯಿಸಿದೆ. ಈ ಮೂಲಕ ಸೌತ್ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಳ್ಳದ ರಿಂಕು ಸಿಂಗ್ ನೇರವಾಗಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.