T20 World Cup 2026: ಸೆಮಿಫೈನಲ್ ಪಂದ್ಯಕ್ಕೆ ಹೆಚ್ಚುವರಿ 90 ನಿಮಿಷ!
T20 World Cup 2026 Semi Final Schedule: ಟಿ20 ವಿಶ್ವಕಪ್ನ ಮೊದಲ ಸೆಮಿಫೈನಲ್ ಪಂದ್ಯವು ಮಾರ್ಚ್ 4 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಮಾರ್ಚ್ 5 ರಂದು ಜರುಗಲಿರುವ ದ್ವಿತೀಯ ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ಕಣಕ್ಕಿಳಿಯಲಿವೆ.

T20 World Cup 2026: ಟಿ20 ವಿಶ್ವಕಪ್ನ ಸೆಮಿಫೈನಲ್ ಕಾದಾಟಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮಾ.4) ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ಮುಖಾಮುಖಿಯಾಗಲಿದೆ. ಇನ್ನು ನಾಳೆ (ಮಾ.5) ಜರುಗಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಸೆಣಸಲಿದೆ. ಈ ನಿರ್ಣಾಯಕ ಪಂದ್ಯಗಳಿಗೆ ಮೀಸಲು ದಿನವನ್ನು ಘೋಷಿಸಲಾಗಿದೆ.
ಅಂದರೆ ಸೆಮಿಫೈನಲ್ ಪಂದ್ಯವು ಕಾರಣಾಂತರಗಳಿಂದ ರದ್ದಾದರೆ ಈ ಮ್ಯಾಚ್ ಅನ್ನು ಮರು ದಿನ ಮುಂದುವರೆಸಲಾಗುತ್ತದೆ. ಆದರೆ ಅದಕ್ಕೂ ಮುನ್ನ ನಿಗದಿತ ದಿನದಂದೇ ಪಂದ್ಯವನ್ನು ಆಯೋಜಿಸಲು ಕೆಲ ವಿಶೇಷ ನಿಯಮಗಳನ್ನು ರೂಪಿಸಲಾಗಿದೆ. ಆ ನಿಯಮವೆಂದರೆ…
ಹೆಚ್ಚುವರಿ ಸಮಯ: ಪಂದ್ಯದ ನಿಗದಿತ ದಿನದಂದು ಪಂದ್ಯವನ್ನು ಪೂರ್ಣಗೊಳಿಸಲು ಹೆಚ್ಚುವರಿ 90 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಅಂದರೆ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಕಾರಣಾಂತರಗಳಿಂದ ಮ್ಯಾಚ್ ವಿಳಂಬವಾದರೆ ಹೆಚ್ಚುವರಿ 90 ನಿಮಿಷಗಳನ್ನು ಬಳಸಲಾಗುತ್ತದೆ.
ಉದಾಹರಣೆಗೆ: 7 ಗಂಟೆಗೆ ಶುರುವಾಗಬೇಕಿರುವ ಪಂದ್ಯವು ಕಾರಣಾಂತರಗಳಿಂದ 8 ಗಂಟೆಗೆ ಆರಂಭವಾದರೆ ಯಾವುದೇ ಓವರ್ ಕಡಿತ ಮಾಡಲಾಗುವುದಿಲ್ಲ. ಬದಲಾಗಿ ಹೆಚ್ಚುವರಿ 90 ನಿಮಿಷಗಳಲ್ಲಿನ 60 ನಿಮಿಷಗಳನ್ನು ಬಳಸಲಾಗುತ್ತದೆ. ಅಂದರೆ 11 ಗಂಟೆಗೆ ಮುಗಿಯುವ ಪಂದ್ಯವನ್ನು 12 ಗಂಟೆಯವರೆಗೆ ನಡೆಸಲಾಗುತ್ತದೆ.
ಹೆಚ್ಚುವರಿ 90 ನಿಮಿಷಗಳನ್ನು ಬಳಸುವ ಮೂಲಕ ಸಂಪೂರ್ಣ 20 ಓವರ್ ಪಂದ್ಯಗಳ ಪಂದ್ಯವನ್ನು ಆಯೋಜಿಸಲು ಈ ನಿಯಮವನ್ನು ಪರಿಚಯಿಸಲಾಗಿದೆ. ಅದರಂತೆ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದರೆ ಅಥವಾ ಇನ್ನಿತರೆ ಸಮಸ್ಯೆ ಎದುರಾದರೆ 90 ನಿಮಿಷಗಳನ್ನು ಬಳಸುವ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.
ಮೀಸಲು ದಿನ: ಒಂದು ವೇಳೆ ನಿಗದಿತ ದಿನದಂದು ಪಂದ್ಯ ಸಾಧ್ಯವಾಗದಿದ್ದರೆ, ಮೀಸಲು ದಿನದಂದು ಆಟ ಮುಂದುವರಿಯಲಿದೆ. ಅಲ್ಲದೆ ಮೀಸಲು ದಿನದಂದು 90 ನಿಮಿಷಗಳ ಬದಲಿಗೆ 120 ನಿಮಿಷಗಳ ಹೆಚ್ಚುವರಿ ಸಮಯ ಲಭ್ಯವಿರುತ್ತದೆ. ಅಂದರೆ ಇಲ್ಲಿ ಹೆಚ್ಚುವರಿ 2 ಗಂಟೆಗಳನ್ನು ನೀಡುವ ಮೂಲಕ ಮೀಸಲು ದಿನದಲ್ಲಿ ಪಂದ್ಯವನ್ನು ಪೂರ್ಣಗೊಳಿಸಲಿದ್ದಾರೆ.
ಪಂದ್ಯ ರದ್ದು: ಮೀಸಲು ದಿನದಂದು ಹೆಚ್ಚುವರಿ 120 ನಿಮಿಷಗಳನ್ನು ಬಳಸಿ ಕೂಡ ಪಂದ್ಯ ಪೂರ್ಣಗೊಳಿಸಲು ಅಥವಾ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಮಾತ್ರ ಮ್ಯಾಚ್ ಅನ್ನು ರದ್ದುಗೊಳಿಸಲಾಗುತ್ತದೆ. ಈ ರದ್ದುಗೊಳಿಸುವ ಮುನ್ನ ಉಭಯ ತಂಡಗಳಿಗೆ 10 ಓವರ್ಗಳ ಮ್ಯಾಚ್ ಆಡಿಸಲು ಸಾಧ್ಯವೇ ಎಂಬುದನ್ನು ನೋಡಲಿದ್ದಾರೆ.
ಕನಿಷ್ಠ ಓವರ್‌ಗಳು: ಸೆಮಿಫೈನಲ್ ಫಲಿತಾಂಶ ಬರಬೇಕಾದರೆ ಎರಡೂ ತಂಡಗಳು ಕನಿಷ್ಠ 10 ಓವರ್‌ಗಳನ್ನಾದರೂ ಆಡುವುದು ಕಡ್ಡಾಯ. ಹೀಗೆ 10 ಓವರ್ಗಳನ್ನು ಆಡಿದರೆ ಮಾತ್ರ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ವಿಜಯಿಯನ್ನು ನಿರ್ಧರಿಸಲಿದ್ದಾರೆ.
ಫೈನಲ್ ಅರ್ಹತೆ: ಮೀಸಲು ದಿನವೂ ಮಳೆಯಿಂದಾಗಿ ಪಂದ್ಯ ನಡೆಯದಿದ್ದರೆ, 10 ಓವರ್ಗಳ ಮ್ಯಾಚ್ ಆಯೋಜಿಸಲು ಸಾಧ್ಯವಾಗದೇ ಇದ್ದರೆ ಸೆಮಿಫೈನಲ್ ಪಂದ್ಯವನ್ನು ರದ್ದು ಮಾಡಲಾಗುತ್ತದೆ. ಹೀಗೆ ಪಂದ್ಯ ರದ್ದಾದರೆ ‘ಸೂಪರ್ 8’ ಹಂತದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವು ಫೈನಲ್‌ಗೆ ಅರ್ಹತೆ ಪಡೆಯುತ್ತದೆ.
ಸೂಪರ್-8 ಅಂಕ ಪಟ್ಟಿ: ಸೂಪರ್-8 ಸುತ್ತಿನ ಗ್ರೂಪ್-1 ಅಂಕ ಪಟ್ಟಿಯಲ್ಲಿ ಸೌತ್ ಆಫ್ರಿಕಾ ತಂಡವು ಅಗ್ರಸ್ಥಾನದಲ್ಲಿದ್ದರೆ, ಭಾರತ ತಂಡ ದ್ವಿತೀಯ ಸ್ಥಾನದಲ್ಲಿದೆ. ಇನ್ನು ಗ್ರೂಪ್-2 ಅಂಕಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ದ್ವಿತೀಯ ಸ್ಥಾನದಲ್ಲಿದೆ.
ಇಂಗ್ಲೆಂಡ್ vs ಸೌತ್ ಆಫ್ರಿಕಾ: ಒಂದು ವೇಳೆ ಸೆಮಿಫೈನಲ್ ಪಂದ್ಯಗಳು ಕಾರಣಾಂತರಗಳಿಂದ ರದ್ದಾದರೆ ಸೂಪರ್-8 ಅಂಕಪಟ್ಟಿಯಲ್ಲಿ ಅಗ್ರಸ್ಥಾನಗಳಲ್ಲಿರುವ ಸೌತ್ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯಲಿದೆ.
ಇದನ್ನೂ ಓದಿ: T20 World Cup 2028: ಮುಂದಿನ ಟಿ20 ವಿಶ್ವಕಪ್ಗೆ 12 ತಂಡಗಳು ಆಯ್ಕೆ
ಸೆಮಿಫೈನಲ್ ವೇಳಾಪಟ್ಟಿ:
- ಸೆಮಿಫೈನಲ್ 1: ಸೌತ್ ಆಫ್ರಿಕಾ vs ನ್ಯೂಝಿಲೆಂಡ್ (ಮಾರ್ಚ್ 4) – ಈಡನ್ ಗಾರ್ಡನ್ಸ್ ಸ್ಟೇಡಿಯಂ, ಕೊಲ್ಕತ್ತಾ
- ಸೆಮಿಫೈನಲ್ 2: ಭಾರತ vs ಇಂಗ್ಲೆಂಡ್ (ಮಾರ್ಚ್ 5)- ವಾಂಖೆಡೆ ಸ್ಟೇಡಿಯಂ, ಮುಂಬೈ
Published On - 7:33 am, Wed, 4 March 26
