
ಜೂನ್ 26 ರಂದು ನಡೆದ ಅದೊಂದು ಕ್ರಿಕೆಟ್ ಪಂದ್ಯ ಕ್ರಿಕೆಟ್ ಲೋಕದ ಅಚ್ಚರಿಗೆ ಕಾರಣವಾಗಿದೆ. ದುರ್ಬಲ ತಂಡವೆಂದೇ ಪರಿಗಣಿಸಿರುವ ಐರ್ಲೆಂಡ್, ಬಲಿಷ್ಠ ಟೀಂ ಇಂಡಿಯಾವನ್ನು (India vs Ireland) ಸೋಲಿಸಿದೆ. ಉಭಯ ತಂಡಗಳ ನಡುವೆ ನಡೆದ ಮೊದಲ ಟಿ20 ಪಂದ್ಯವನ್ನು ಆತಿಥೇಯ ಐರ್ಲೆಂಡ್ 34 ರನ್ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಐರ್ಲೆಂಡ್, ಟೀಂ ಇಂಡಿಯಾ ವಿರುದ್ಧ ಮೊಟ್ಟ ಮೊದಲ ಪಂದ್ಯ ಗೆದ್ದ ಸಾಧನೆಯನ್ನು ಮಾಡಿದೆ. ಇತ್ತ ಟೀಂ ಇಂಡಿಯಾ ತನ್ನ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸೋತ ಬೇಡದ ದಾಖಲೆಯನ್ನು ನಿರ್ಮಿಸಿದೆ. ಆದರೆ ಈ ಹಿಂದೆ ನಡೆದಿದ್ದ ಘಟನೆಯನ್ನು ತಾಳೆ ಹಾಕಿ ನೋಡಿದರೆ, ಐರ್ಲೆಂಡ್ ವಿರುದ್ಧದ ಸೋಲು 2028 ರ ಟಿ20 ವಿಶ್ವಕಪ್ನಲ್ಲಿ (T20 World Cup 2028) ಟೀಂ ಇಂಡಿಯಾವೇ ಚಾಂಪಿಯನ್ ಎಂಬ ಭವಿಷ್ಯ ನುಡಿಯುತ್ತಿದೆ.
ಎಲ್ಲರಿಗೂ ತಿಳಿದಿರುವಂತೆ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ವರ್ಷ ನಡೆದ ಟಿ20 ವಿಶ್ವಕಪ್ ಗೆದ್ದು ಸತತ ಎರಡನೇ ಬಾರಿಗೆ ಚಾಂಪಿಯನ್ ಆಯಿತು. ಇದಕ್ಕೂ ಮುನ್ನ ಟೀಂ ಇಂಡಿಯಾ 2024 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಆದಾಗ್ಯೂ, ಆ ಕಪ್ ಗೆದ್ದ ನಂತರ ಆಡಿದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತಿತು. ಅದೂ ಜಿಂಬಾಬ್ವೆಯಂತಹ ದುರ್ಬಲ ತಂಡದ ವಿರುದ್ಧ. ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಜಿಂಬಾಬ್ವೆ ಕೇವಲ 115 ರನ್ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ್ದ ಟೀಂ ಇಂಡಿಯಾ 102 ರನ್ಗಳಿಗೆ ಆಲೌಟ್ ಆಗುವ ಮೂಲಕ 13 ರನ್ಗಳಿಂದ ಸೋತಿತ್ತು. ಆಗಲೂ, ಟೀಂ ಇಂಡಿಯಾ ಹೊಸ ನಾಯಕನ ನೇತೃತ್ವದಲ್ಲಿ ಕಣಕ್ಕಿಳಿದಿತ್ತು. ಅದು ಪೂರ್ಣ ಪ್ರಮಾಣದ ಟಿ20 ನಾಯಕನಾಗಿ ಶುಭ್ಮನ್ ಗಿಲ್ ಅವರ ಮೊದಲ ಪಂದ್ಯವಾಗಿತ್ತು. ಹಾಗೆಯೇ ಅದು ಟಿ20 ವಿಶ್ವಕಪ್ ಗೆದ್ದ ನಂತರ ಟೀಂ ಇಂಡಿಯಾದ ಮೊದಲ ಪಂದ್ಯವೂ ಆಗಿತ್ತು.
ಕಾಕತಾಳಿಯವೆಂದರೆ.. ಈಗಲೂ ಅದೇ ರೀತಿಯ ಫಲಿತಾಂಶ ಪುನರಾವರ್ತನೆಯಾಗಿದೆ. 2026 ರ ಟಿ20 ವಿಶ್ವಕಪ್ ಗೆದ್ದ ನಂತರ ಮೊದಲ ಪಂದ್ಯವನ್ನಾಡಿದ ಟೀಂ ಇಂಡಿಯಾ ಚೇಸಿಂಗ್ ಮಾಡುವಾಗ ಸೋತಿದೆ. ಅದು ಕೂಡ ಐರ್ಲೆಂಡ್ನಂತಹ ದುರ್ಬಲ ತಂಡದ ವಿರುದ್ಧ. ಈ ಪಂದ್ಯದಲ್ಲೂ ಟೀಂ ಇಂಡಿಯಾ ಹೊಸ ನಾಯಕನೊಂದಿಗೆ ಕಣಕ್ಕಿಳಿದಿತ್ತು. ಪೂರ್ಣ ಪ್ರಮಾಣದ ನಾಯಕನಾಗಿ ಶ್ರೇಯಸ್ ಅಯ್ಯರ್ಗೆ ಇದು ಮೊದಲ ಪಂದ್ಯವಾಗಿತ್ತು. ಈ ಎಲ್ಲಾ ಕಾಕತಾಳಿಯಗಳನ್ನು ಜೊತೆಗೆ ಸೇರಿಸಿ ನೋಡಿದಾಗ 2028 ರ ಟಿ20 ವಿಶ್ವಕಪ್ ಕೂಡ ಭಾರತದ್ದೇ ಎಂಬ ಭಾವನೆ ಹಲವರಲ್ಲಿ ಮೂಡಿದೆ.
IND vs IRE: ಐರ್ಲೆಂಡ್ ವಿರುದ್ಧ ಸೋತು 5 ಅವಮಾನಕರ ದಾಖಲೆ ಬರೆದ ಟೀಂ ಇಂಡಿಯಾ
ಆದಾಗ್ಯೂ, ಗಿಲ್ ನಾಯಕನಾಗಿ ವಿಫಲವಾದ ನಂತರ, ಸೂರ್ಯ ಅವರಿಗೆ ಟಿ20 ನಾಯಕತ್ವವನ್ನು ನೀಡಲಾಯಿತು. ಇಲ್ಲೂ ಅದೇ ಆಗುತ್ತದೆಯೇ? ಅಥವಾ ಟಿ20 ವಿಶ್ವಕಪ್ವರೆಗೆ ಅಯ್ಯರ್ ತಮ್ಮ ನಾಯಕತ್ವವನ್ನು ಉಳಿಸಿಕೊಳ್ಳುತ್ತಾರೆಯೇ? ಅದನ್ನು ನೋಡಬೇಕಾಗಿದೆ. ಏಕೆಂದರೆ ಅಯ್ಯರ್ ಮೊದಲ ಪಂದ್ಯದಲ್ಲಿ ನಾಯಕ ಮತ್ತು ಬ್ಯಾಟ್ಸ್‌ಮನ್ ಆಗಿ ವಿಫಲರಾಗಿದ್ದಾರೆ. ಆದಾಗ್ಯೂ, ಕೇವಲ ಒಂದು ಪಂದ್ಯದೊಂದಿಗೆ ಅಯ್ಯರ್ ಅವರನ್ನು ಕಡಿಮೆ ಅಂದಾಜು ಮಾಡುವುದು ಸರಿಯಲ್ಲ, ಆದರೆ ಟೀಂ ಇಂಡಿಯಾದ ಭವಿಷ್ಯ ಮತ್ತು ನಾಯಕನ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Published On - 4:41 pm, Sat, 27 June 26